✍️ ಅರಫಾ ಮಂಚಿ
ಹೊಸ ವರ್ಷ ಆರಂಭವಾಗಿದೆ. ಅಮೆರಿಕದಲ್ಲಿ ನ್ಯೂಯಾರ್ಕ್ ಮೇಯರ್ ಆಗಿ ಝೊಹ್ರಾನ್ ಮಮ್ದಾನಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರ ಕೈಯಲ್ಲಿ ಪವಿತ್ರ ಕುರ್ಆನ್ ಇತ್ತು. ಝೊಹ್ರಾನ್ ನ್ಯೂಯಾರ್ಕಿನಲ್ಲಿ ಪ್ರಪ್ರಥಮ ಮುಸ್ಲಿಂ ಮೇಯರ್ ಆಗಿದ್ದಾರೆ. ಡೆಮಾಕ್ರಾಟಿಕ್ ಪಾರ್ಟಿಯ ವ್ಯಕ್ತಿ. ಇದು ತನಗೆ ಸಿಕ್ಕ ಸಣ್ಣ ಗೌರವವಲ್ಲ. ಜೀವನ ಉದ್ದಕ್ಕೂ ಮುಂದುವರಿಯುವ ಗೌರವವಾಗಿದೆ ಎಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಮ್ದಾನಿ ಹೇಳಿದ್ದಾರೆ.
ಅಮೆರಿಕದಲ್ಲಿ ಇಸ್ಲಾಮೊಫೋಬಿಯಾಕ್ಕೆ ಹುಟ್ಟು ನೀಡಿದ ಅದೇ ನಾಡಿನಲ್ಲಿ ಇಸ್ಲಾಮಿನ ಪವಿತ್ರ ಗ್ರಂಥದೊಂದಿಗೆ ಒಬ್ಬ ನ್ಯೂಯಾರ್ಕಿನಂತಹ ರಾಜಧಾನಿ ನಗರದಲ್ಲಿ ಮೇಯರ್ ಆಗಬಹುದೆಂದು ಟ್ರಂಪ್ರ ಮೊದಲನೇ ಆಡಳಿತದ ವೇಳೆ ಯೋಚಿಸುವುದೇ ಕಷ್ಟವಿತ್ತು. 2025 ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು ನಿಮಗೂ ಗೊತ್ತು. ಹೇಳುವುದಾದರೆ ಇಂತಹ ಉತ್ತಮ ಬೆಳವಣಿಗೆಗಳಲ್ಲಿ ಮಮ್ದಾನಿಯವರನ್ನು ನ್ಯೂಯಾರ್ಕಿನ ಜನ ಮೇಯರ್ ಸ್ಥಾನಕ್ಕೆ ಆಯ್ಕಿಸಿದ್ದು ಕೂಡ ಒಂದಾಗಿದೆಯೆಂದು ನೀವು ಒಪ್ಪುತ್ತೀರಿ. ಮಮ್ದಾನಿ ಪವಿತ್ರ ಕುರ್ಆನನ್ನು ಎತ್ತಿ ಹಿಡಿದೇ ಸತ್ಯ ಪ್ರತಿಜ್ಞೆ ಕೈಗೊಂಡರು ನಿಜ. ಆದರೆ ಅವರದೇ ಪಾರ್ಟಿಯ ಜೋ ಬೈಡನ್ ಟ್ರಂಪ್ರನ್ನು ಸೋಲಿಸಿ ಅಧಿಕಾರಕ್ಕೆ ಬಂದಾಗ ಅವರು ಮಾಡಿದ್ದು ಅದೇ ಇಸ್ಲಾಮೋಫೋಬಿಯವನ್ನೇ ಇನ್ನೊಂದು ರೀತಿಯಲ್ಲಿ ಮುಂದುವರಿಸಿದ್ದಾಗಿತ್ತು.
ಟ್ರಂಪ್ ಕೂಡ ತಾನು ಝಿಯೊನಿಸ್ಟ್ ಎಂದು ಈವರೆಗೂ ಹೇಳಿಲ್ಲ. ಆದರೆ ಜೋ ಬೈಡನ್ ಬಹಿರಂಗವಾಗಿ ತಾನು ಕೂಡ ಝಿಯೊನಿಸ್ಟ್ ಎನ್ನುವ ಮೂಲಕ ಯಹೂದಿಗಳನ್ನು ಮೆಚ್ಚಿಸಿದವರು. ಆಗ ಗಾಝದಲ್ಲಿ ಝಿಯೊನಿಸ್ಟ್ ದೇಶ ಇಸ್ರೇಲ್ ಸಾವಿರಾರು ಫೆಲಸ್ತೀನಿಯರನ್ನು ಬಾಂಬು ಸುರಿಸಿ ಕೊಲ್ಲುತ್ತಿತ್ತು. ಕೊಲ್ಲುವವರ ಜನ ಎಂದು ಹೇಳಿದ ಅಮೆರಿಕದ ಅಧ್ಯಕ್ಷರಿದ್ದ ಅದೇ ಊರಿಗೆ ಅಂದರೆ ನ್ಯೂಯಾರ್ಕ್ ಸಿಟಿಗೆ ಪವಿತ್ರ ಕುರ್ಆನ್ ಹಿಡಿದು ಪ್ರಮಾಣ ವಚನ ಮಾಡಿದ ಮಮ್ದಾನಿ ಮೇಯರ್ ಆಗುತ್ತಾರೆ. ಕಾಲ ಅಂದರೆ ಹೀಗೆ ಇರುತ್ತದೆ. ಅದು ಬದಲಾಗುತ್ತದೆ.
ಮಮ್ದಾನಿ ಅವರು ಸಾಮಾನ್ಯರಲ್ಲ. ಇಸ್ಲಾಮೋಫೋಬಿಯೊದ ವಿರುದ್ಧ ಹೋರಾಟಗಾರನಾಗಿ ಗುರುತಿಸಿಕೊಂಡವರು. ಆದುದರಿಂದ ಅಮೆರಿಕದಲ್ಲಾಗುತ್ತಿರುವ ಈ ಬದಲಾವಣೆಗಳು ಅಮೆರಿಕದಲ್ಲಿ ಮಾತ್ರವಲ್ಲ ಜಗತ್ತಿನುದ್ದಕ್ಕೂ ಬಹುಕಾಲ ನೆನಪಿನಲ್ಲಿ ಉಳಿಯಲಿದೆ. ಇದು ನಿಸ್ಸಂದೇಹದ ಮಾತು.
2026 ಜನವರಿ ಒಂದಕ್ಕೆ ನ್ಯೂಯಾರ್ಕಿನ ಮ್ಯಾನ್ಹಟನ್ನ ಐತಿಹಾಸಿಕ ಪ್ರಸಿದ್ಧ ಸಬ್ವೇ ಸ್ಟೇಷನ್ ಆದ ಸಿಟಿ ಹಾಲ್ನಲ್ಲಿ ಮಮ್ದಾನಿಯವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಝೊಹ್ರಾನ್ ಮಮ್ದಾನಿಯವರು ಮಹ್ಮೂನ್ ಮಮ್ದಾನಿ ಮತ್ತು ಮೀರಾ ನಾಯರ್ ದಂಪತಿ ಪುತ್ರನಾಗಿ ಯುಗಾಂಡದ ಕಂಪಾಲದಲ್ಲಿ ಜನಿಸಿದ್ದರು. ಅಮೆರಿಕದಲ್ಲಿ ಅವರಿಗೆ 2018ರಲ್ಲಿ ಪೌರತ್ವ ಸಿಕ್ಕಿತು. ಹೊರಗಿನಿಂದ ಬಂದು ಒಳಗಿನವರಾಗಿ ಈಗ ಅವರು ನ್ಯೂಯಾರ್ಕ್ಗೆ ಮೇಯರ್ ಆಗಿ ಆಯ್ಕೆಗೊಂಡು ಇತಿಹಾಸ ಸೃಷ್ಟಿಸಿದ್ದಾರೆ. ಭಾರತದಲ್ಲಿ ಹೀಗೆ ನಡೆದಿದ್ದರೆ ನುಸುಳುಕೋರ ಮಮ್ದಾನಿ ಎಂದು ಹಿಂದುತ್ವ ವಾದಿಗಳು ಸ್ಟ್ರೈಕ್ ಮಾಡುತ್ತಿದ್ದರು. ಸಂಶಯ ಬೇಡ. ಆದರೆ ಅದು ಅಮೆರಿಕ.
ಹೊಸ ವರ್ಷ ಶುರುವಾಗುವ ಮೊದಲು ಇತ್ತ ಬಾಂಗ್ಲಾದೇಶದಿಂದ ಮಾಜಿ ಪ್ರಧಾನಿ ಬಿಎನ್ಪಿ ಪಾರ್ಟಿಯ ಖಾಲಿದ ಝಿಯಾ ನಿಧನ ವಾರ್ತೆ ಬಂತು. ನರೇಂದ್ರ ಮೋದಿಯ ಸಂತಾಪ ಸೂಚಕ ಸಂದೇಶವನ್ನು ವಿದೇಶ ಸಚಿವ ಎಸ್. ಜೈಶಂಕರ್ ಖಾಲಿದ ಝಿಯಾರ ಪುತ್ರ ತಾರಿಕ್ ರಹ್ಮಾನ್ರಿಗೆ ಹಸ್ತಾಂತರಿಸಿದರು.
ನ್ಯೂಯಾರ್ಕ್ ಟೈಮ್ಸ್ ಹೊಸ ವರ್ಷ ಶುರುವಾಗುವುದಕ್ಕಿಂತ ಸ್ವಲ್ಪ ದಿನ ಮೊದಲು ಭಾರತದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ಕುರಿತು ಸಂಶೋಧನಾ ವರದಿಯನ್ನು ಪ್ರಕಟಿಸಿದೆ. ಅದು ಆರೆಸ್ಸೆಸ್ ಹೇಗೆ ಮತ್ತು ಎಲ್ಲೆಲ್ಲ ತನ್ನ ಜನರನ್ನು ಆಯಕಟ್ಟಿನ ಜಾಗದಲ್ಲಿ ನಿಲ್ಲಿಸಿದೆ ಎಂಬುದನ್ನು ವಿವರಿಸಿದೆ. ಖ್ಯಾತ ವಕೀಲ ಪ್ರಶಾಂತ್ ಕಿಶೋರ್ ಈಗಿನ ಮೋದಿ ಸರಕಾರವನ್ನು ಫ್ಯಾಶಿಸ್ಟ್ ಸರಕಾರ ಎನ್ನುತ್ತಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ವರದಿ ಕೂಡ ಅವರ ಪ್ರತಿಪಾದನೆಯತ್ತ ಬೆಳಕು ಚೆಲ್ಲುತ್ತಿದೆ. ಆರೆಸ್ಸೆಸ್ ಬಿಜೆಪಿಗಳು ಭಾರತದ ಎಲ್ಲ ಸರಕಾರಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಮತ್ತು ಧಾರ್ಮಿಕ ಜಾಗಗಳು, ಅಧಿಕಾರ ಕೇಂದ್ರಗಳು ಆಡಳಿತ ಸೌಧಗಳು ಹಾಗೂ ಆಡಳಿತಗಾರರ ಸಹಿತ ಎಲ್ಲ ವನ್ನೂ ಇಂದು ಆವರಿಸಿದೆ ಎಂದು ಅದು ಬರೆದಿದೆ.
ಬಹುಶಃ ಭಾರತದಲ್ಲಿ ಕಳೆದ ಕ್ರಿಸ್ಮಸ್ ವೇಳೆ ಕ್ರೈಸ್ತರ ಮೇಲೆ ನಡೆದ ಮತ್ತು ದಾಳಿಗಳ ನಂತರ ಇಷ್ಟು ತೀಕ್ಷ್ಣ ಮತ್ತು ಮಾರ್ಮಿಕ ಸ್ಟೋರಿ ಬರೆಯುವುದು ನ್ಯೂಯಾರ್ಕ್ ಟೈಮ್ಸ್ಗೆ ನಿರ್ಬಂಧವಾಗಿದೆ ಅನ್ಸುತ್ತೆ. ಅದು ಹೇಳುತ್ತಿದೆ, ಮೋದಿ ಅಧಿಕಾರದಿಂದ ಕೆಳಗಿಳಿದರೂ ಹಿಂದುತ್ವ ಎಕ್ಸಿಟ್ರೀಮಿಸಂನ್ನು ನಿಲ್ಲಿಸಲು ಸಾಧ್ಯವಿಲ್ಲ. ಭಾರತದ ನರನಾಡಿಗಳಲ್ಲಿ ಅಷ್ಟು ಆಳದಲ್ಲಿ ಬಿಜೆಪಿ ಆರೆಸ್ಸೆಸ್ ತಳವೂರಿದೆ ಎಂದು ಬರೆದಿದೆ.
ಭಾರತದಲ್ಲಿ ಮುಸ್ಲಿಮರು, ಕ್ರೈಸ್ತರು ಮೇಲೆ ನಡೆಯುವ ಹಲ್ಲೆಯನ್ನು ಅದು ಕೂಡ ಉಲ್ಲೇಖಿಸಿದೆ. ಆ ದೀರ್ಘ ಲೇಖನದ ಹೆಸರು ಫ್ರಂ ದ ಶಾಡೊ ಟು ಪವರ್: ಹೌ ದ ಹಿಂದು ರೈಟ್ ರಿಶೇಪ್ಡ್ ಇಂಡಿಯ ದ ಪಾರ್ ರೈಟ್ ಗ್ರೂಪ್ ನೋನ್ ಅಸ್ ದ ಆರೆಸ್ಸೆಸ್. ಭಾರತ ದಲ್ಲಿ ಫ್ಯಾಸಿಸ್ಟ್ ವಾದ ಹೇಗೆ ಜನ್ಮವೆತ್ತುತ್ತಿದೆ, ಯಾರಿಂದ ಜನ್ಮವೆತ್ತಿದೆ ಎಂಬುದನ್ನು ಅದರಿಂದಾಗಿ ಜಗತ್ತೆಲ್ಲ ಅರಿಯುವಂತಾಯಿತು. ಇರಲಿ ಸತ್ಯವನ್ನು ಬರೆಯುವುದು ಅಮೆರಿಕವಾಗಲಿ ನ್ಯೂಯಾರ್ಕ್ ಟೈಮ್ಸ್ಗೆ ಆಗಿರಲಿ. ಸತ್ಯ ಹಾಗೆಯೇ ಅದುಮಿಟ್ಟಷ್ಟು ಹೊರಗೊತ್ತುತ್ತದೆೆ. ಮೋದಿಯ ವಿಶ್ವ ಗುರು ಪ್ರತಿಪಾದನೆಗೆ ಅಂತಾರಾಷ್ಟ್ರೀಯ ಕಮ್ಯೂನಿಟಿ ಅರ್ಥಮಾಡಿಕೊಂಡ ನಿಜರೂಪ ಇದು. ಆ ಅಮೆರಿಕ ಹೇಗೆ ಸಾಚಾವೂ ಅಲ್ಲ ಎಂಬುದು ಇನ್ನೊಂದು ಕತೆ. ಆದರೂ ಅಲ್ಲಿ, ಮಮ್ದಾನಿಯಂತಹವರು ಪವಿತ್ರ ಕುರ್ಆನ್ ಎತ್ತಿ ಹಿಡಿದು ಹೋರಾಡುತ್ತಿದ್ದಾರೆ. ಕಾಲ ಮತ್ತು ನ್ಯಾಯ ದುರ್ಬಲನೆಂದೆನಿಸಿ ಕೊಂಡವನಿಗೂ ಶಕ್ತಿ ನೀಡುತ್ತದೆ. ನ್ಯಾಯ ಗೆದ್ದೇ ಗೆಲ್ಲುತ್ತದೆ. ಸತ್ಯ ಅದನ್ನು ಎತ್ತಿ ತೋರಿಸುತ್ತದೆ.
ನ್ಯೂಯಾರ್ಕ್ ಟೈಮ್ಸ್ ಏನೆ ಬರೆಯಲಿ ಆ ಅಮೆರಿಕದ ವಿರುದ್ಧ ಸಣ್ಣ ಪುಟ್ಟ ರಾಜ್ಯಗಳು ಕೂಡ ನೀತಿ ಬದಲಿಸಿದ್ದು ನಿಮಗೂ ಗೊತ್ತು. ಅವುಗಳೂ ಅಮರಿಕದ್ದೇ ಪಾಲಿಟಿಕ್ಸ್ಗಿಳಿದಿವೆ ಎಂದರೆ ಹೆಚ್ಚು ಸರಿಯಾದೀತು. ಮಾಲಿ ಬುರ್ಕಿನೊ ಫಾಸ್ ದೇಶಗಳು ಅಮೆರಿಕದ ಪ್ರಜೆಗಳ ಪ್ರವೇಶ ನಿಷೇಧ ಹೇರಿದ ಸುದ್ದಿ ಹೊಸ ವರ್ಷದಲ್ಲಿ ಬಂತು. ಇವೆರಡೂ ಆಫ್ರಿಕದ ಸಣ್ಣಾತಿ ಸಣ್ಣ ದೇಶಗಳು. ಸೌತಾಫ್ರಿಕದಷ್ಟು ಶಕ್ತಿ ಇಲ್ಲದ್ದೂ ಅನ್ನಬಹುದು. ಈ ದೇಶಗಳ ವಿರುದ್ಧ ಇದಕ್ಕಿಂತ ಮೊದಲು ಡೊನಾಲ್ಡ್ ಟ್ರಂಪ್ ಕಾರ್ಯಾಚರಣೆ ನಡೆಸಿದ್ದರು. ಈ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದರು. ಮಮ್ದಾನಿಯಂತೆ ಎಲ್ಲೆಲ್ಲ ಹುಟ್ಟಿದವರು ನ್ಯೂಯಾರ್ಕಿನಲ್ಲಾದಂತೆ ಅಮೆರಿಕಕ್ಕೆ ಒಂದಿನ ಅಧ್ಯಕ್ಷರಾಗಿ ಬಿಟ್ಟರೆ ಎಂಬ ಹೆದರಿಕೆ ಕೂಡ ಅವರ ಈ ನೀತಿಯ ಹಿಂದೆ ಇರುವ ಒಂದು ಕಾರಣ ಆಗಿರಬಹುದು.
ಆದರೆ ಬುರ್ಕಿನೊಫಾಸ್, ಮಾಲಿಗಳೂ ತಾವೇನು ಅಮೆರಿಕಕ್ಕೆ ಕಮ್ಮಿ ಅಂತ ಅಮೆರಿಕದ ಅದೇ ನಾಣ್ಯದಲ್ಲೇ ಟ್ರಂಪ್ ಆಡಳಿತಕ್ಕೆ ಪೆಟ್ಟು ಕೊಟ್ಟಿವೆ. ನಮ್ಮಲ್ಲಿಗೆ ನಿಮ್ಮ ಪ್ರಜೆಗಳು ಬರುವುದು ಬೇಡ ಎಂದು ಈ ಎರಡು ದೇಶಗಳು ಹೇಳಿ ಬಿಟ್ಟಿವೆ.. ದೊಣ್ಣೆಗೆ ಎರಡು ತುದಿ ಇದೆ ಎಂದು ದೊಣ್ಣೆ ಎತ್ತಿದವನು ತಿಳಿದಿರಬೇಕು. ಕೈಜಾರಿದರೆ ಆ ತುದಿ ಎದುರಾಳಿಯ ಕೈಗೆ ಬರುತ್ತದೆ. ಪೆಟ್ಟು ಇತ್ತಲೂ ಬೀಳಬಹುದು. ಮಾಲಿ ಮತ್ತು ಬುರ್ಕಿ ನೊಫಾಸ್ ಅಮೆರಿಕಕ್ಕೆ ಈ ತುದಿಯಿಂದ ಪೆಟ್ಟುಕೊಟ್ಟಿವೆ. ಎರಡೂ ಖನಿಜ ಸಂಪನ್ನ ದೇಶಗಳು. ಅವೆರಡೂ ವಿದೇಶಿಗಳ ಹೂಡಿಕೆದಾರರ ಕೊಳ್ಳೆಗಳಿಂದ ಸಂಕಷ್ಟದಲ್ಲಿ ಸಿಲುಕಿರುವ ದೇಶಗಳು.
ಇತ್ತ ಅವೆರಡೂ ದೇಶದ ಪ್ರಜೆಗಳಿಗೆ ಕಳೆದ ಡಿಸೆಂಬರ್ 16ಕ್ಕೆ ಅಮೆರಿಕಕ್ಕೆ ಬರದಂತೆ ಡೊನಾಲ್ಡ್ ಟ್ರಂಪ್ ನಿಷೇಧ ಹೇರಿದ್ದರು. ಸೈನಿಕಾಡಳಿತದ ಅಧೀನದಲ್ಲಿ ಈ ಎರಡು ದೇಶಗಳಿವೆ ಎಂದು ಟ್ರಂಪ್ ಕಾರಣ ಕೊಟ್ಟಿದ್ದರು. ಅವುಗಳ ಪ್ರಜೆಗಳು ನಮ್ಮಲ್ಲಿನ ಸುರಕ್ಷೆಗೆ ಬೆದರಿಕೆಯಾಗಿದ್ದಾರೆ. ಇದು ನಿಷೇಧವನ್ನು ಟ್ರಂಪ್ ಆಡಳಿತ ಸಮರ್ಥಿಸಿಕೊಂಡ ರೀತಿ. ಬುರ್ಕಿನೊಫಾಸ್, ಮಾಲಿ ಕೂಡ ಅಮೆರಿಕದವರು ಬರುವುದರಿಂದ ನಮಗೂ ಇದೇ ಕಾರಣ ಇದೆ ಎಂದಿತು. ಹೀಗಾಗಿ ಅಮೆರಿಕದ ಜನರು ಇಲ್ಲಿಗೆ ಬರದಿದ್ದರೆ ಅಪಾಯ ತಪ್ಪುತ್ತದೆ. ಆದುದರಿಂದ ಅವರು ನಮ್ಮಲ್ಲಿಗೆ ಬರುವುದು ಬೇಡ ಎಂದಿವೆ. ಬಹುಶಃ ಈ ಎರಡೂ ಅಂದರೆ ಮಾಲಿ ಮತ್ತು ಬುರ್ಕಿನೊ ಫಾಸ್ನ ವಿದೇಶ ಸಚಿವಾಲಯ ಈ ಹೇಳಿಕೆ ಹೊರಬಿಟ್ಟಿರುವುದರ ಹಿಂದಿನ ಕಾರಣ ತಮ್ಮ ದೇಶದ ಖನಿಜ ಸಂಪತ್ತು ರಕ್ಷಿಸಿಕೊಳ್ಳಬೇಕೆಂಬ ಹಪಾ ಹಪಿ ಇದ್ದಂತೆ ತೋರುತ್ತಿದೆ. ಖನಿಜ ಸಂಪತ್ತು ನಮಗೆ ಉಳಿಯಲಿ, ಪ್ರವಾಸೋದ್ಯಮ ಹೋದರೆ ಹೋಗಲಿ ಎಂದು ಅವು ನಿರ್ಧರಿಸಿರಬಹುದು.
ಈಗ ಚೀನ ಹೊಸದಾದ ವಾದವೊಂದನ್ನು ಹೊಸ ವರ್ಷದಲ್ಲಿ ಜಗತ್ತಿನ ಮುಂದೆ ಪ್ರಸ್ತುತಪಡಿಸಿದೆ. ತನ್ನನ್ನು ಹಿರಿಯಣ್ಣ ಅಂತಲೂ, ವಿಶ್ವಗುರುವೆಂತಲೂ ಅದು ಪರೋಕ್ಷವಾಗಿ ಬಿಂಬಿಸಿದ ರೀತಿ ಇದು. ಭಾರತ-ಪಾಕಿಸ್ತಾನದ ನಡುವಿನ ಘರ್ಷಣೆ ಪರಿಹರಿಸಲು ಮಧ್ಯಸ್ಥಿಕೆ ನಾವು ವಹಿಸಿದ್ದು ಎಂದು ಹೇಳಿಕೆ ನೀಡಿದೆ. ಈ ಮೊದಲು ಈ ಮಧ್ಯಸ್ಥಿಕೆ ವಹಿಸುವ ಮೂಲಕ ಎರಡು ದೇಶಗಳ ನಡುವೆ ಆಗುವ ಯುದ್ಧವನ್ನು ನಿಲ್ಲಿಸಿದ್ದು ನಾವು ಎಂದು ಟ್ರಂಪ್ ಹೇಳಿದ್ದರು. ಆದರೆ ನಮ್ಮ ಪ್ರಧಾನಿ ಗಪ್ಚುಪ್ ಎನ್ನಲಿಲ್ಲ. ವಿಶ್ವಮೌನಕ್ಕೆ ಜಾರಿದ್ದಾರೆ.
ವಿಶ್ವ ಸಂಘರ್ಷದ ಕುರಿತು ಚೀನ, ಟ್ರಂಪ್ ತರ ಅಲ್ಲ. ಬಹಳ ಸ್ಟೈಲಿಶ್ ಆಗಿ ಹೇಳಿದ್ದು ನೋಡಿ. ಭಾರತ ಪಾಕ್ ಸಂಘರ್ಷ, ಉತ್ತರ ಮ್ಯಾನ್ಮಾರ್, ಕಾಂಬೋಡಿಯ ಥೈಲೆಂಡ್ ಇರಾನಿನ ಪರಮಾಣು ಅಸ್ತ್ರ ಇತ್ಯಾದಿ ವಿಷಯಗಳಲ್ಲಿ ಚೀನ ಮಧ್ಯಸ್ಥಿಕೆ ವಹಿಸಿದೆ. ವಿಶ್ವ ಶಾಂತಿ ನಮ್ಮ ಗುರಿ ಎಂದು ಚೀನದ ವಿದೇಶ ಸಚಿವ ವಾಂಗ್ಯೀ ಹೇಳಿದ್ದಾರೆ. ಚೀನ ತನ್ನನ್ನೇ ನಾನೇ ವಿಶ್ವ ಗುರು ಎನ್ನುತ್ತಿದೆ. ಇದಕ್ಕೂ ನಮ್ಮ ಪ್ರದಾನಿ ಮಾತಾಡಿಲ್ಲ.
ಇನ್ನೊಂದು ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪಿಸುವಷ್ಟು ಈ ದೇಶಗಳು ಬೆಳೆದಿವೆ. ಆ ಪುಟ್ಟ ದೇಶಗಳಾದ ಬುರ್ಕಿನೊಫಾಸ್ ಮಾಲಿಯನ್ನು ನೋಡಿ ಅಮೆರಿಕಕ್ಕೆ ಅಮೆರಿಕದ ನಾಣ್ಯವನ್ನೇ ಚಲಾಯಿಸುವಷ್ಟು ದಿಟ್ಟೆದೆಯನ್ನು ಪ್ರದರ್ಶಿಸಿದವು. ಹೊಸ ವರ್ಷ ಶುರುವಾಗಿ ಬಿಟ್ಟಾಗ ನಡೆದು ಹೋದ ಕೆಲವು ಸಂಗತಿಗಳು.. ಗತ ನೆನಪುಗಳಾಗಿ ಕೆಲಕಾಲ ಉಳಿಯುವವು. ಈ ಹಿಂದೆಯೂ ಅಮೆರಿಕ, ಚೀನಗಳು ಇನ್ನೊಂದು ದೇಶದಲ್ಲಿ ಹಸ್ತಕ್ಷೇಪ ನಡೆಸುತ್ತಿತ್ತು. ಅದು ಗುಟ್ಟಾಗಿ ರುತ್ತಿತ್ತು. ಈಗ ಎಲ್ಲವನ್ನೂ ನಾವೇ ಮಾಡಿದ್ದು ಶಾಂತಿ ದೂತರು ನಾವು ಎನ್ನವಲ್ಲಿಗೆ ಬಂದು ನಿಂತಿವೆ. ಇಸ್ರೇಲ್ ಫೆಲಸ್ತೀನ್ ಘರ್ಷಣೆ ನಿಲ್ಲಿಸಿದ್ದು ನಾವೇ ಎಂದು ಚೀನ ಹೇಳುತ್ತಿದೆ.
ಹೌದು, ಕೊನೆಯ ಮಾತು ಅಂದರೆ ಈಗ ಏನಿದ್ದರೂ…
ಕಳೆದ 2025 ಬಹಳ ನೋವು ತಂದ ವರ್ಷವಾಗಿದೆ. ವಿಶ್ವ ಮಟ್ಟದಲ್ಲಿ ಮತ್ತು ದೇಶೀಯ ಮಟ್ಟದಲ್ಲಿ ಕೂಡ. ಎರಡನೆ ವಿಶ್ವಯುದ್ಧದ ನಂತರ ಅತೀ ಹೆಚ್ಚು ಆಂತರಿಕ ಯುದ್ಧಗಳು ನಡೆದ ವರ್ಷವಾಗಿದೆ. 2025 ಇದೇ ವರ್ಷದಲ್ಲಿ ಹೆಚ್ಚು ಗಡಿ ವಿವಾದ ಘರ್ಷಣೆಗಳು ನಡೆದಿವೆ. ಭಾರತ-ಪಾಕ್. ಪಾಕ್-ಅಫ್ಗಾನ್. ಥೈಲಾಂಡ್ ಕಾಂಬೊಡಿಯ, ರಷ್ಯ, ಯುಕ್ರೇನ್, ಗಾಝದಲ್ಲಿ ಇಸ್ರೇಲ್ ನಡೆಸಿದ ಮಾರಣ ಹೋಮವಂತೂ ಕಳೆದ ವರ್ಷ ತಾರಕ್ಕೇರಿತ್ತು.












