✍️ ಶಾಝಿಲ್ ಉಸ್ಮಾನ್
ಅಮೆರಿಕ ಅಧ್ಯಕ್ಷ ಟ್ರಂಪ್ ಹೊಸದಾಗಿ ಹೊರತಂದ ಗೋಲ್ಡ್ ಕಾರ್ಡ್ ವೀಸಾ ಅಥವಾ ಅವರ ಹಣ ಮಾಡುವ ಕಸರತ್ತು ದೊಡ್ಡ ಸುದ್ದಿಯಾಗ್ತಿದೆ. ಅಮೆರಿಕದಿಂದ ವಿದೇಶಿಗಳನ್ನು ಹೊರದಬ್ಬುವಲ್ಲಿ ಟ್ರಂಪ್ ಕಡಕ್ ಆಗಿದ್ದಾರೆ. ಅಮೆರಿಕ ಗೋಲ್ಡ್ ಕಾರ್ಡ್ ವೀಸಾ ಕಾರ್ಯಕ್ರಮ ರೂಪಿಸಿ ವೀಸಾ ಬೇಕಿದ್ದವರು ಬನ್ನಿ ಎಂದು ಅರ್ಜಿ ಆಹ್ವಾನಿಸಲಾಗಿದೆ. ಅಮೆರಿಕನ್ ಕಂಪೆನಿಗಳು ವಿದೇಶದ ಡಿಗ್ರಿ ಹೋಲ್ಡರ್ಗಳನ್ನು ತಮ್ಮಲ್ಲಿ ಕೆಲಸಕ್ಕೆ ಆಯ್ಕೆ ಮಾಡಲು ಸಹಕಾರಿಯಾಗುವಂತೆ ಗೋಲ್ಡ್ ವೀಸಾ ಯೋಜನೆ ತಂದದ್ದು ಎಂದು ವೈಟ್ ಹೌಸ್ ಹೇಳಿಕೊಳ್ಳುತ್ತಿದೆ.
ಏನೇ ಹೇಳಲಿ ಟ್ರಂಪ್ರ ಗೋಲ್ಡ್ ವೀಸಾ ಯೋಜನೆ ಅವರ ವಲಸೆ ನೀತಿ. ಇವುಗಳ ದೆಸೆಯಿಂದ ಅಮೆರಿಕದ ಕಂಪೆನಿಗಳಲ್ಲಿ ಬಹಳಷ್ಟು ಸಮಸ್ಯೆ ಸೃಷ್ಟಿಯಾಗಿರುವುದು ನಿಜ. ವಿದೇಶಿ ಪ್ರಜೆಗಳ ಕೊರತೆಯಿಂದ ಅಮೆರಿಕದ ಕಂಪೆನಿಗಳಿಗೆ ದುಡಿಯಲು ಜನ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಗೋಲ್ಡ್ ವೀಸಾ ಪ್ರೋಗ್ರಾಂ ಘೋಷಣೆಯಾಗಿದೆ. ಅಮೆರಿಕಕ್ಕೆ ಬರುವವರಿದ್ದರೆ ಹೆಚ್ಚು ಹಣ ಕೊಟ್ಟೇ ಬರಲಿ. ಹೀಗೆ ಲಾಭದ್ದೆ ಲೆಕ್ಕಾಚಾರ. ಆದರೆ ಕುಲಗೆಟ್ಟ ಲೆಕ್ಕಗಳಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ನೋಡಿ,
ಗೋಲ್ಡ್ ವೀಸಾಕ್ಕೆ ಒಂದು ಮಿಲಿಯನ್ ಡಾಲರ್ ಶುಲ್ಕ ಇದೆ. ಅಷ್ಟು ಕೊಟ್ಟು ಅಮೆರಿಕದಲ್ಲಿ ದುಡಿಯಬೇಕೆಂಬ ಹಟ ಯಾವ ದೇಶದ ಜನರಲ್ಲೂ ಇರಲಾರದು. ಒಂದು ಮಿಲಿಯನ್ ಡಾಲರ್ ಕೊಡುವ ವ್ಯಕ್ತಿಗೆ ಮತ್ತು 2 ಮಿಲಿಯನ್ ಡಾಲರ್ ಕೊಡುವ ಉದ್ಯಮಿಗಳಿಗೆ ಗೋಲ್ಡ್ ವೀಸಾ ಕಾರ್ಡ್ ಸಿಗುತ್ತದೆ. 15,000 ಡಾಲರ್ ಪ್ರೊಸೆಸಿಂಗ್ ಶುಲ್ಕವನ್ನು ಬೇರೆ ಕೊಡಬೇಕು. 5 ಮಿಲಿಯನ್ ಡಾಲರ್ ಮೊತ್ತದ ಇನ್ನೊಂದು ಪ್ಲಾಟಿನಂ ವೀಸಾ ಕಾರ್ಡ್ ಇದೆ. ಇದನ್ನು ಪಡೆದುಕೊಂಡವರು ಅಮೆರಿಕದಲ್ಲಿ 270 ದಿನಗಳ ಕಾಲ ತೆರಿಗೆ ಇಲ್ಲದ ಉಳಿದುಕೊಳ್ಳುವ ಅನುಮತಿಯನ್ನು ಪಡೆದುಕೊಳ್ಳುತ್ತಾರೆ. ಅಮೆರಿಕ ಏನು ಸ್ವರ್ಗವಾ?
ದುಡಿಮೆಗೆ ಬರುವ ಜನರಿಂದ ಹಣ ಕಿತ್ತುಕೊಂಡು ಆ ಮೂಲಕ ಲಾಭ ಗಳಿಸುವುದು ಅಮೆರಿಕನ್ ಹೊಸ ವಲಸೆ ನೀತಿಯಾಗಿದೆ. ಟ್ರಂಪ್ ಒಬ್ಬ ಉದ್ಯಮಿ. ಉದ್ಯಮಿಗಳು, ವ್ಯಾಪಾರಿ ಗಳು ಆಡಳಿತ ನಡೆಸುವ ಪೊಲಿಟಿಶಿಯನ್ಗಳು ಆದರೆ ಅಲ್ಲೆಷ್ಟು ಲಾಭ ಇದೆ, ಇಲ್ಲೆಷ್ಟು ಲಾಭ ಇದೆ ಅಂತ ಲೆಕ್ಕ ಹಾಕ್ತಾರೆ. ಅವರಿಗೆ ಜನರು ಮತ್ತು ಅವರ ಬದುಕು ದುಡಿಮೆಗಳ ಬಗ್ಗೆ ಕಿಂಚಿತ್ತೂ ಹಿತಪ್ರಜ್ಞೆ ಇರುವುದಿಲ್ಲ. ಇದಕ್ಕೆ ಈಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಿತ್ರ ಉದಾಹರಣೆಯಾಗಿದ್ದಾರೆ.
ಸ್ವತಃ ಟ್ರಂಪ್ ಹೇಳುವಂತೆ ಗೋಲ್ಡ್ ವೀಸಾ ಕಾರ್ಡಿನಲ್ಲಿ ಸಿಗುವ ಹಣ ಸರಕಾರಕ್ಕೆ ದೊಡ್ಡ ಲಾಭವನ್ನು ತಂದು ಕೊಡುತ್ತದೆ. ವೀಸಾಕ್ಕೆ ದೊಡ್ಡ ಮೊತ್ತ ಇಟ್ಟು ಶ್ರೀಮಂತರನ್ನು ಆಕರ್ಷಿಸುವ ಗುರಿಯನ್ನು ಟ್ರಂಪ್ ಆಡಳಿತ ಹೊಂದಿದೆಯಂತೆ. ಈಗ ಅಮೆರಿಕದ ಆರ್ಥಿಕ ಸ್ಥಿತಿ ಎಷ್ಟು ಕೆಳಮಟ್ಟದಲ್ಲಿ ಸಾಗುತ್ತಿದೆ ಎಂದು ಜಗತ್ತಿನ ಮುಂದೆ ಟ್ರಂಪ್ರ ಗೋಲ್ಡ್ ವೀಸಾ ಕಾರ್ಯಕ್ರಮವೇ ಹೇಳುತ್ತಿದೆ. ಒಂಥರ ಹುಚ್ಚು ನೀತಿ ಇದು.
ಮುಳುಗುತ್ತಿರುವ ನೌಕೆಗೆ ಟೈಟಾನಿಕ್ ಎಂದೋ ಟ್ರಂಪ್ ಎಂದೋ ಹೆಸರಿಡುವುದರಿಂದ ಮುಳುಗ ದಂತೆ ಮಾಡಲು ಸಾಧ್ಯವೂ ಇಲ್ಲ. ಈ ಮಾತಿನ ಅರ್ಥ ಮೊದಲೇ ಕೆಲಸಗಾರರ ಕೊರತೆಯಿಂದ ಅಮೆರಿಕನ್ ಉದ್ಯಮಿಗಳು ಕಂಗೆಟ್ಟು ನಿಂತಿದ್ದಾರೆ. ಈ ಸ್ಥಿತಿಯಲ್ಲಿ ಸುಧಾರಣೆ ತರಲು ವ್ಯಾಪಾರಿ ಬುದ್ಧಿಯನ್ನು ಆಚೆಗಿಟ್ಟು ಆಲೋಚಿಸುವವರು ವಲಸೆ ನಿಯಮಗಳಲ್ಲಿ ಸಡಿಲಿಕೆ ಮಾಡುತ್ತಿದ್ದರು. ಆದರೆ ಟ್ರಂಪ್ ಸರಕಾರ ಇನ್ನಷ್ಟು ನಿಯಂತ್ರಣ ಮಾಡಿದೆ. ಇದರಿಂದ ದುಡಿಮೆಗೆ ಜನರು ಅಮೆರಿಕವನ್ನು ಹುಡುಕಿ ಕೊಂಡು ಹೋಗುವುದು ನಿಲ್ಲಬಹುದು. ಅಮೆರಿಕಕ್ಕೆ ಖಂಡಿತ ಒಳ್ಳೆದಾಗಲ್ಲ. ಹೇಗೆಂದರೆ ಅಲ್ಲಿನ ಕಂಪೆನಿಗಳ ಉತ್ಪಾದನೆಯು ಜನರ ಕೊರತೆಯಿಂದ ಕುಂಠಿತವಾಗಬಹುದು. ಕೆಲಸಕ್ಕೆ ಜನ ಬೇಕೆ ಬೇಕು. ಅಂದರೆ ಟ್ರಂಪ್ ನೀತಿ ಅಮೆರಿಕಕ್ಕೆ ಲಾಸು ಮಾಡುತ್ತಿದ್ದರೂ ಅವರ ಪ್ರಕಾರ ಲಾಭ ಮಾಡ್ತಿದೆ. ಈಗ ಯುರೋಪ್ ಸಹಿತ ಅಭಿವೃದ್ಧಿ ಹೊಂದಿದ ದೇಶಗಳು ತನ್ನ ಈ ನೀತಿಯನ್ನೇ ಅಳವಡಿಸಿಕೊಳ್ಳ ಬೇಕೆಂದೂ ಅವರು ಬಯಸುತ್ತಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಜೆಡಿ ವಾನ್ಸ್ರ ಇಂಡಿಯ ವಿರೋಧಿ ವಲಸೆ ನೀತಿ
ಟ್ರಂಪ್ ಸೇರು ಆದರೆ ಅಮೆರಿಕನ್ ಉಪಾಧ್ಯಕ್ಷ ಇನ್ನೊಂದು ಸವ್ವಾ ಸೇರು.
ಭಾರತ ಸಹಿತ ವಿದೇಶದಿಂದ ಬಂದ ವಲಸಿಗರು ಅಮೆರಿಕನ್ ಪ್ರಜೆಗಳ ಅವಕಾಶವನ್ನು ಕಸಿದುಕೊಂಡರು ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವಾನ್ಸ್ ಮಾತುಗಳನ್ನು ಸಿಡಿಸಿದ್ದಾರೆ. ಸಾಮೂಹಿಕವಾಗಿ ವಲಸೆ ಬರುತ್ತಾರೆ. ಅಮೆರಿಕದ ಪ್ರಜೆಗಳಿಗೆ ಉದ್ಯೋಗ ಅವಕಾಶ ನಷ್ಟವಾಗುತ್ತಿದೆ. ತನ್ನ ವಿಚಾರವನ್ನು ಪ್ರಶ್ನಿಸುವವರು ಹಳೆಯ ಅಧ್ಯಯನವನ್ನು ಹೊರಗೆ ಬಿಡುತ್ತಿದ್ದಾರೆ. ಅಮೆರಿಕನ್ ಇಮಿಗ್ರೇಷನ್ ಆಂಡ್ ಕಸ್ಟಮ್ಸ್ ಎಂಫೋರ್ಸ್ ಮೆಂಟ್(ಐಸಿಇ) ಚಾಲನೆಗೆ ಬಂದ ನಂತರ ಅಮೆರಿಕದಲ್ಲಿ ದೊಡ್ಡ ಬದಲಾವಣೆ ಆಗಿದೆ ಎನ್ನುತ್ತಿದ್ದಾರೆ.
ಇರಲಿ, ವಾನ್ಸ್ರ ಈ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮಗಳು ಎತ್ತಿಕೊಂಡು ಕಟು ಪ್ರಹಾರದಲ್ಲಿ ತೊಡಗಿರುವುದು ಹೌದು. ನಿಮ್ಮ ಪತ್ನಿ ವಲಸಿಗ ಕುಟುಂಬದ ಮಹಿಳೆ, ಅವರನ್ನು ಮತ್ತು ಅವರಿಗೆ ಹುಟ್ಟಿದ ಮಕ್ಕಳನ್ನು ಅಮೆರಿಕದಿಂದ ಹೊರಗೆ ಹಾಕುತ್ತೀರಾ ಎಂದು ಇಂಟರ್ನೆಟ್ನಲ್ಲಿ ಹಲವರು ಉಪಾಧ್ಯಕ್ಷ ವಾನ್ಸರನ್ನು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಪತ್ನಿ ಮಕ್ಕಳನ್ನು ಅವರ ಮೂಲ ದೇಶಕ್ಕೆ ಕಳುಹಿಸುವುದಕ್ಕಾಗಿ ವಿಮಾನ ಟಿಕೆಟ್ ತೆಗೆದು ಕೊಂಡದ್ದನ್ನು ನಮಗೆ ತಿಳಿಸ ಬೇಕೆಂದು ನೆಟ್ನಲ್ಲಿ ಹಾಸ್ಯಾಸ್ಪದ ಕಮೆಂಟ್ ನೀಡಿದವರೂ ಇದ್ದಾರೆ. ಟ್ರಂಪ್ ನೀತಿ ಎಷ್ಟು ವಿಕ್ಷಿಪ್ತವೋ ಅವರ ಜೊತೆ ಇರುವ ವಾನ್ಸ್ ಕೂಡ ಅದನ್ನೇ ಅನುಸರಿಸುತ್ತಾರೆ ಎಂಬುದು ನಿಮ್ಮ ಅರಿವಿಗೂ ಬಂದಿರಬಹುದು.
ವಲಸಿಗರನ್ನು ಹೊರದಬ್ಬುವ ಅಮೆರಿಕನ್ ನೀತಿಗೆ ಪ್ರಪ್ರಥಮ ಮಾದರಿಯಾಗಿ ನೀವೇ ಎದ್ದು ನಿಲ್ಲ ಬೇಕೆಂದು ವಾನ್ಸ್ರನ್ನು ನೆಟ್ಟಿಗರು ವ್ಯಂಗ್ಯ ಮಾಡುವುದು ಮುಂದುವರಿಯುತ್ತಿದೆ. ಅಂದರೆ ವಾನ್ಸ್ ಪತ್ನಿ ಉಷಾ ವಾನ್ಸ್ ಭಾರತ ಮೂಲದವರು. ಭಾರತದ ವಲಸಿಗ ಕುಟುಂಬಕ್ಕೆ ಅಮೆರಿಕದಲ್ಲಿ ಜನಿಸಿದ್ದಾರೆ. ಇಂಥ ವಿವೇಕ ರಹಿತ ನೀತಿಗಳೆಲ್ಲ ಹೇರಲು ಹೊರಟವರಿಗೆ ಅದು ಅವರಿಗೇ ಮುಳುವು ಆಗುತ್ತಿರುವುದಕ್ಕೆ ಒಂದು ಸ್ಯಾಂಪಲ್ ಇದು. ಇರಲಿ,
ದುರ್ಬಲ ನಾಯಕರಿಂದ ಯುರೋಪ್ ನಾಶ ಆಗ್ತಿದೆ
ಡೊನಾಲ್ಡ್ ಟ್ರಂಪ್ ಯುರೋಪಿನ ವಿದೇಶ ನೀತಿಯನ್ನು ವ್ಯಂಗ್ಯ ಮಾಡುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಯುರೋಪ್ ಅಲ್ಲಿನ ದುರ್ಬಲ ನಾಯಕರ ಕಾರಣದಿಂದ ನಾಶವಾಗ್ತಿದೆ ಎಂದು ಪೊಲಿಟಿಕೊ ಮ್ಯಾಗಝಿನ್ನಿಗೆ ನೀಡಿದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಬಹು ವಂಶ ಅಮೆರಿಕದ ವಲಸೆ ನೀತಿಯನ್ನು ಯುರೋಪ್ ಒಪ್ಪುವುದಿಲ್ಲ. ಇದು ಟ್ರಂಪ್ ಯುರೋಪಿಗೆ ವಿನಾಶದ ಕತೆಯನ್ನು ಹೆಣೆಯಲು ಕಾರಣ ಎಂಬುದು ಸ್ವತಃ ಯುರೋಪಿಯನ್ನರಿಗೂ ಗೊತ್ತಿದೆ.
ಹಾಗೆ ಹೇಳುವುದಿದ್ದರೆ ಟ್ರಂಪ್ಗೆ ಯುರೋಪ್ ಮಾತ್ರ ಅಲ್ಲ. ಭಾರತವೂ ಸರಿಯಿಲ್ಲ. ಭಾರತದ ಅಕ್ಕಿಗೆ ಹೆಚ್ಚು ತಿರುವೆ(ತೆರಿಗೆ) ಹೇರುತ್ತೇನೆ ಎಂದು ಟ್ರಂಪ್ ಮೊನ್ನೆ ಮೊನ್ನೆ ಹೇಳಿದರು. ಅವರು ಇಂತಹ ಆರ್ಥಿಕ ಬ್ಲಾಕ್ ಮೈಲ್ ನಡೆಸುತ್ತಾ ಹೋಗುತ್ತಾರೆ. ಭಾರತದಿಂದ ಬರುವ ಅಕ್ಕಿಯನ್ನು ನಿಯಂತ್ರಿಸಬೇಕಾಗಿದೆ ಎನ್ನುತ್ತಾ ಟ್ರಂಪ್ ಅಮೆರಿಕದ ರೈತರಿಗೆ 12 ಬಿಲಿಯನ್ ಡಾಲರ್ ಯೋಜನೆ ಪ್ರಕಟಿಸಿದರು. ಭಾರತದ ಅಕ್ಕಿಯನ್ನು ಅಧಿಕ ತೆರಿಗೆಯಿಂದ ನಿಯಂತ್ರಿಸುವ ಯೋಜನೆ ಯಾಕಿದೆ ಅಂದ್ರೆ ಅಮೆರಿಕದ ಅಕ್ಕಿಯನ್ನು ಭಾರತ ಖರೀದಿಸುವುದಿಲ್ಲ. ಟ್ರಂಪ್ ಹೇಳುವುದು ನಮ್ಮ ಅಕ್ಕಿಯನ್ನು ಭಾರತಕ್ಕೆ ಹಿಡಿದು ತಳ್ಳಲು ಆಗುವುದಿಲ್ಲ.
ಹೀಗಿರುವಾಗ ಅವರ ಅಕ್ಕಿಯನ್ನು ದುಬಾರಿ ಮಾಡಬೇಕು. ಯಾರಿಗೆ ಲಾಸು? ಅದರಿಂದ ಅಮೆರಿಕನ್ನರಿಗೂ ಲಾಸು ಇದೆ. ಭಾರತದ ಅಕ್ಕಿ ತಿನ್ನೊ ಮನುಷ್ಯ ರೇಟು ಹೆಚ್ಚಾಗಿದೆ ಎಂದು ತಿನ್ನದಿರುತ್ತಾನಾ. ಹೆಚ್ಚು ಹಣ ಕೊಟ್ಟು ಖರೀದಿ ಸುವಂತೆ ಮಾಡಿ ಅಮೆರಿಕನ್ನರನ್ನೇ ತೊಂದರೆಗೆ ಸಿಲುಕಿಸಿದಂತಾಯಿತು. ಅಮೆರಿಕವನ್ನು ಭಾರತದ ನಾಯಕರು ಕಡೆಗಣಿಸುತ್ತಿದ್ದಾರೆ ಎಂಬ ನೋವು ಟ್ರಂಪ್ಗಿದ್ದಂತಿದೆ. ತಾನು ಹೇಳಿದರೂ ಭಾರತ ರಷ್ಯದೊಂದಿಗೆ ತನ್ನ ವಹಿವಾಟು ನಿಲ್ಲಿಸಿಲ್ಲ. ಸಾಲದ್ದಕ್ಕೆಲ್ಲ ರಷ್ಯದ ಅಧ್ಯಕ್ಷ ಪುಟಿನ್ರನ್ನೂ ಅದು ಆದರದಿಂದ ಬರಮಾಡಿಕೊಂಡಿದೆ. ಇದು ಟ್ರಂಪ್ರನ್ನು ರೊಚ್ಚಿಗೆಬ್ಬಿಸಿದೆ.












