ಮೂಲ: ಇಸ್ಲಾಮ್ ಆನ್ ಲೈವ್
ಮಕ್ಕಳು ತಮ್ಮ ತಾಯಂದಿರ ಕಣ್ಣೆದುರು ಮನೆಯಿಂದ ಹೊರಗೆ ಹೋಗುವಾಗ, ಸಾಮಾನ್ಯವಾಗಿ ಯಾವಾಗಲೂ ಹೇಳುವ ಎರಡು ಮಾತುಗಳಿವೆ: “ತವಕ್ಕಲ್ತು ಅಲಲ್ಲಾಹ್, ಫೀ ಅಮಾನಿಲ್ಲಾಹ್” (ಅರ್ಥಾತ್: ನಿನ್ನನ್ನು ಅಲ್ಲಾಹನಿಗೆ ಒಪ್ಪಿಸುತ್ತೇನೆ, ನಿನ್ನ ಮೇಲೆ ಅಲ್ಲಾಹನ ಸಂರಕ್ಷಣೆಯಿರಲಿ.)
ಅಂದರೆ, ತನ್ನ ಮಗು ಎಷ್ಟೇ ವಯಸ್ಸಾದವನಾಗಿದ್ದರೂ ತಾಯಂದಿರಿಗೆ ಸಾಯುವವರೆಗೂ ಆತ/ಆಕೆ ಮಗುವೇ, ಆ ಮಗು ಮನೆಗೆ ಮರಳಿ ಬರುವವರೆಗೆ ತಾಯಿ ಅವನನ್ನು ಸರ್ವಲೋಕಗಳ ಸಂರಕ್ಷಕನಾದ ಅಲ್ಲಾಹನಿಗೆ ಒಪ್ಪಿಸುತ್ತಾಳೆ.
ಇದನ್ನು ಕೇವಲ ತಾಯಂದಿರು ಮಾತ್ರ ಹೇಳುವುದಿಲ್ಲ. ಪರಸ್ಪರ ಪ್ರೀತಿಸುವ ಯಾರಾದರೂ ತಮ್ಮವರಲ್ಲಿ ಒಬ್ಬರು ಹಿರಿಯರಾಗಲಿ, ಕಿರಿಯರಾಗಲಿ ಪ್ರಯಾಣಕ್ಕೆ ಹೊರಡುವಾಗ ಈ ಮಾತುಗಳನ್ನು ಹೇಳುತ್ತಾರೆ. ಆದರೆ ತಾಯಂದಿರೇ ಇದನ್ನು ಹೆಚ್ಚಾಗಿ ಹೇಳುತ್ತಾರೆ ಅಷ್ಟೇ.
ಗಾಝಾದಲ್ಲಿ ಒಬ್ಬ ಬಾಲಕ ತನ್ನ ಶಾಲಾ ಬ್ಯಾಗ್ ಹೊತ್ತು, ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವಿನ ದಾರಿಯಲ್ಲಿ ಶಾಲೆಗೆ ಹೋಗುತ್ತಿದ್ದಾನೆ. ಸುತ್ತಲೂ ಗುಂಡಿನ ಸದ್ದುಗಳು ಮೊಳಗುತ್ತಿವೆ. ಆಗಾಗ ಅವನು ಹಿಂದಿರುಗಿ ನೋಡುತ್ತಿದ್ದಾನೆ.
ಎರಡು ದಿನಗಳ ಹಿಂದೆ ಗಾಝಾದಿಂದ ಹೊರಬಂದ ಸಾವಿರಾರು ದೃಶ್ಯಗಳಲ್ಲಿನ ಒಂದು ದೃಶ್ಯವಿದು.
ನಾನು ಯೋಚಿಸುತ್ತಿರುವುದು ಏನೆಂದರೆ ಅವನು ಮನೆಯಿಂದ ಹೊರಡುವಾಗ ಅವನಿಗಾಗಿ ‘ಫೀ ಅಮಾನಿಲ್ಲಾಹ್’ ಎಂದು ಹೇಳಿದವರು ಯಾರಿರಬಹುದು? ಹಾಗೆ ಹೇಳಿದ್ದರೆ, ಆ ಮಾತಿನ ಅವಧಿ ಎಷ್ಟು?
ಏಕೆಂದರೆ ಗಾಝಾದಲ್ಲಿ ಸಮಯಕ್ಕೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ. ಅಲ್ಲಿ ಸಮಯವನ್ನು ನಿರ್ಧರಿಸುವುದು ಆಕ್ರಮಣವೇ. ಸಂಚಾರದಲ್ಲಿರುವ ಯಾವುದೇ ಮನುಷ್ಯನನ್ನು ಯಾವ ಕ್ಷಣದಲ್ಲಾದರೂ ಗುರಿಯಾಗಿಸಲು ಸಾಧ್ಯವಾಗುವಂತೆ 24 ಗಂಟೆಯೂ ಉಪಗ್ರಹ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ.
ಅವು ನೀಡುವ ಮಾಹಿತಿಯ ಆಧಾರದ ಮೇಲೆ, ಆಕ್ರಮಣಕಾರರ ನಿರ್ದೇಶನದಂತೆ ಡ್ರೋನ್ಗಳು ಹಾರುತ್ತವೆ. ಅವುಗಳಲ್ಲಿ ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು, ಧ್ವನಿಗಳನ್ನು ದಾಖಲಿಸುವ ಹಾಗೂ ದೃಶ್ಯಗಳನ್ನು ಸೆರೆಹಿಡಿಯುವ ಗುಪ್ತಚರ ಉಪಕರಣಗಳು, ನಿಗಾ ವ್ಯವಸ್ಥೆಗಳು ಅಳವಡಿಸಲ್ಪಟ್ಟಿವೆ. ಅವು ಜೀವಂತವಾಗಿರುವ ಎಲ್ಲವನ್ನೂ ಗುರಿಯಾಗಿಸಿಕೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸಿ, ನಂತರ ತಮ್ಮ ಮಾಲೀಕರ ಬಳಿಗೆ ಹಿಂದಿರುಗುತ್ತವೆ.
ಮಾನವ ನಿರ್ಮಿತ ಬುದ್ಧಿಮತ್ತೆಯ ಅತ್ಯಂತ ಮಾರಕ ಮತ್ತು ಕರುಣೆಯಿಲ್ಲದ ತಂತ್ರಜ್ಞಾನಗಳನ್ನು ಜಗತ್ತಿನಲ್ಲಿ ಅತಿ ಹೆಚ್ಚು ನೇರವಾಗಿ ಪರೀಕ್ಷಿಸಲಾಗುತ್ತಿರುವ ಸ್ಥಳ ಗಾಝಾ. ಏಕೆಂದರೆ ಅದರ ನಂತರ ಆ ತಂತ್ರಜ್ಞಾನಗಳಿಗೆ ಮಾರುಕಟ್ಟೆಯನ್ನು ಹುಡುಕಬೇಕಾಗಿದೆ. ಆದ್ದರಿಂದ ಅದು ನಿಖರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಾಬೀತುಪಡಿಸುವುದು ಅದನ್ನು ಪರೀಕ್ಷಿಸುವವರ ಜವಾಬ್ದಾರಿಯಾಗಿದೆ. ಶಸ್ತ್ರಾಸ್ತ್ರಗಳ ಮುಂದೆ ಪ್ರಶ್ನೆಗಳಿಲ್ಲ, ಉತ್ತರಗಳೂ ಇಲ್ಲ.
ನಾವು ಗಾಝಾಗೆ ನೀರು, ಆಹಾರ, ಔಷಧಿ ಕೊಡುತ್ತೇವೆ. ಗಾಝಾಗೆ ಬಟ್ಟೆ ಕೊಡುತ್ತೇವೆ. ಒಳ್ಳೆಯ ಕಾರ್ಯವಾಗಿದೆ. ಆದರೆ ಜಗತ್ತು ಗಾಝಾಗೆ ಅತಿ ಹೆಚ್ಚು ಮೌನವನ್ನು ನೀಡುತ್ತದೆ. ಗಾಝಾಗೆ ಅತ್ಯಂತ ಅಗತ್ಯವಾಗಿರುವುದು ಜಗತ್ತಿನ ಧ್ವನಿಯಾಗಿದ್ದರೂ, ನಾವು ಗಾಝಾಕ್ಕೆ ಅತಿ ಹೆಚ್ಚು ರಫ್ತು ಮಾಡುತ್ತಿರುವುದು ನಮ್ಮ ಮೌನ. ಅದು ಗಡಿಗಳಲ್ಲಾಗಲಿ, ಚೆಕ್ಪೋಸ್ಟ್ಗಳಲ್ಲಾಗಲಿ ತಡೆಯಲ್ಪಡಬೇಕಾದ ಅಗತ್ಯವಿಲ್ಲದೆ ಗಾಝಾದೊಳಗೆ ಪ್ರವೇಶಿಸುತ್ತಿದೆ. ಅದಕ್ಕೆ ಯಾವುದೇ ರೀತಿಯ ತಡೆಯಿಲ್ಲ. ಗಾಝಾದೊಳಗೆ ಜಗತ್ತಿನ ಒಂದೇ ಒಂದು ಧ್ವನಿ ಪ್ರವೇಶಿಸುತ್ತಿಲ್ಲ.
ಇತ್ತೀಚೆಗೆ ಮೂಸಬ್ ಅಲ್-ಶರೀಫ್ ಹೇಳಿದಂತೆ: “ಜಗತ್ತಿನಲ್ಲಿ ಜವಾಬ್ದಾರಿಯುತ ಯಾರಾದರೂ ನಮ್ಮ ಪರವಾಗಿ ಎದ್ದು ನಿಂತಿದ್ದರೆ, ನಾವು ಈಗ ಇದನ್ನು ಅನುಭವಿಸಬೇಕಾಗಿರಲಿಲ್ಲ.”
ಜಗತ್ತಿನಲ್ಲಿ ಪ್ರತಿಯೊಂದು ಒಪ್ಪಂದಕ್ಕೂ ಒಂದು ಬೆಲೆ ಇದೆ, ಒಂದು ಮೌಲ್ಯವಿದೆ. ಆದರೆ ಗಾಝಾದ ಒಪ್ಪಂದಗಳಿಗೆ ಮಾತ್ರ ಬೆಲೆಯಿಲ್ಲ. ಏಕೆಂದರೆ? ಕಳೆದ ಅಕ್ಟೋಬರ್ನಿಂದ ಇತ್ತೀಚಿನ ಆಗಸ್ಟ್ವರೆಗೆ ಮಾತ್ರ ಒಪ್ಪಂದಗಳು 4,379 ಬಾರಿ ಉಲ್ಲಂಘಿಸಲ್ಪಟ್ಟಿವೆ. ಈ ತಿಂಗಳ ಲೆಕ್ಕವನ್ನೂ ಸೇರಿಸಿದರೆ ಅದು 4,500ಕ್ಕಿಂತ ಹೆಚ್ಚಾಗುತ್ತದೆ! ಆಘಾತವಾಯಿತೇ?!
ಅಯ್ಯೋ, ಆಘಾತಗೊಳ್ಳಲು ಸಾಧ್ಯವಾಗಿದ್ದರೆ ಈ ಸಂಖ್ಯೆಗಳು ಇಂದು ನಮ್ಮ ಮುಂದೆ ಕಾಣಿಸಿಕೊಳ್ಳುತ್ತಿರಲಿಲ್ಲ. ನಾವು ಅವುಗಳನ್ನು ಯಾವುದೇ ಸಂಕೋಚ ನಾಚಿಕೆಯಿಲ್ಲದೆ ಓದುತ್ತಿದ್ದೇವೆ. ನಮ್ಮಿಂದ ನಾಚಿಕೆ ಎಂಬುದನ್ನು ಯಾವಾಗಲೋ ತೆಗೆದುಹಾಕಲಾಗಿದೆ. ನಮಗೆ ಇನ್ನೂ ಅದು ತಿಳಿದಿಲ್ಲ ಅಷ್ಟೇ. ಪ್ರತಿದಿನ ಎಚ್ಚರಗೊಳ್ಳುತ್ತೇವೆ. ಮನುಷ್ಯರಾಗಿದ್ದೇವೆ ಎಂದು ತೋರಿಸಲು ಏನೇನೋ ಮಾಡುತ್ತೇವೆ. ರಾತ್ರಿ ಬರುತ್ತದೆ. ರಾತ್ರಿಯ ಹೊದಿಕೆಯೊಳಗೆ ಸೇರುತ್ತೇವೆ. ನಿದ್ರಿಸುತ್ತೇವೆ. ಇದು ಚಕ್ರದಂತೆ, ಯಾಂತ್ರಿಕವಾಗಿ ಮುಂದುವರಿಯುತ್ತದೆ.
“ಗಾಝಾ ಅಥವಾ ಫೆಲೆಸ್ತೀನಿಯರು ಅನುಭವಿಸುತ್ತಿರುವುದು ಅವರಿಗಾಗಿಯೇ. ಅದರಿಂದ ನಮಗೇನು?” — ಇದೇ ಜಗತ್ತಿನ ಮನೋಭಾವ. ಖಂಡಿತವಾಗಿಯೂ ಇದನ್ನು ನಿರಾಕರಿಸಲಾಗದು. ಆದರೆ ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ವಿಷಯವಿದೆ. ಗಾಝಾ ಇಂದು ಅನುಭವಿಸುತ್ತಿರುವುದು ಅಥವಾ ನೇರವಾಗಿ ಎದುರಿಸುತ್ತಿರುವುದು, ಇಡೀ ಜಗತ್ತಿಗೂ ಅಪಾಯಕಾರಿಯಾದ ಒಂದು ವಿನಾಶಕಾರಿ ಕಲ್ಪನೆಯ ಕಿರಣಗಳಾಗಿವೆ. ಆ ವಿನಾಶವು ಗಾಝಾ ಮತ್ತು ಫೆಲೆಸ್ತೀನಿಯರ ಮೇಲೆ ಕೇಂದ್ರೀಕೃತವಾಗಿರುವುದರಿಂದಲೇ, ಅಥವಾ ಅದರ ವಿನಾಶಕಾರಿ ಶಕ್ತಿ ಅಲ್ಲಿ ತೊಡಗಿಸಿಕೊಂಡಿರುವುದರಿಂದಲೇ, ಜಗತ್ತಿಗೆ ಕನಿಷ್ಠ ನಿದ್ರೆ ಮಾಡಲು ಸಾಧ್ಯವಾಗುತ್ತಿದೆ. ಅದು ಅಲ್ಲಿ ತೊಡಗಿಸಿಕೊಂಡಿರುವುದರಿಂದಲೇ ಆ ವಿನಾಶವು ಜಗತ್ತಿನ ಇತರ ಬಾಗಿಲುಗಳನ್ನು ಬಂದು ತಟ್ಟುತ್ತಿಲ್ಲ.
“ಇಲ್ಲ” ಎನ್ನುವುದಾದರೆ, ಆ ವಿನಾಶವನ್ನು ನಿಮ್ಮ ದೇಶಗಳ ಮಧ್ಯಭಾಗದಲ್ಲಿ ನೆಲೆಗೊಳಿಸಿ. ಅವರಿಗೆ ಬೇಕಾದ ಎಲ್ಲವನ್ನೂ ನೀಡಿ. ಅವರನ್ನು ಬೆಳೆಸಿ, ಅವರಿಗೆ ಹಾಲುಣಿಸಿ, ಅವರನ್ನು ಪ್ರೀತಿಸಿ, ಅವರೂ ನಿಮ್ಮನ್ನು ಪ್ರೀತಿಸಲಿ. ಅವರ ‘ನೈತಿಕತೆಯನ್ನು’ ಹತ್ತಿರದಿಂದ ತಿಳಿದುಕೊಳ್ಳಿ. Then come on, do it… ಏನಾಯಿತು? ಮೊಣಕಾಲುಗಳು ನಡುಗುತ್ತಿವೆಯೇ?
ಹೌದು, ನಾವು ನಡುಗುತ್ತೇವೆ.
ಏಕೆಂದರೆ ಗಾಝಾ ಅನುಭವಿಸುತ್ತಿರುವುದರ ನೂರನೇ ಒಂದು ಭಾಗವನ್ನೂ ಅನುಭವಿಸಲು ನಮಗೆ ಸಾಧ್ಯವಿಲ್ಲ. ಯಾರಿಗೂ ಸಾಧ್ಯವಿಲ್ಲ. ಕಳೆದ 78 ವರ್ಷಗಳಿಂದ, ದೀರ್ಘವಾದ 78 ವರ್ಷಗಳಿಂದ, ಆ ಜನರು ಹಗಲು-ರಾತ್ರಿ ಈ ವಿನಾಶ, ಅನ್ಯಾಯ, ಅಕ್ರಮವನ್ನು ಎದುರಿಸುತ್ತಿದ್ದಾರೆ. ಗಾಝಾದೊಂದಿಗೆ ವಾದಿಸಲು ಮಾತ್ರ ಜಗತ್ತು ಇನ್ನೂ ಬೆಳೆದಿಲ್ಲ.
ಮುತ್ತಿಗೆಯಲ್ಲಿ ಹುಟ್ಟಿ, ಮುತ್ತಿಗೆಯಲ್ಲೇ ಬೆಳೆದು, ಆಕ್ರಮಣದ ಪ್ರತಿಯೊಂದು ಕ್ರೌರ್ಯ, ಕುತಂತ್ರ ಮತ್ತು ವಂಚನೆಯನ್ನು ತನ್ನ ಜೀವನದುದ್ದಕ್ಕೂ ಕಹಿ ನೀರಿನಂತೆ ಕುಡಿಯುತ್ತಾ ಬಂದಿರುವ ಗಾಝಾವನ್ನು ಜಗತ್ತು ಹೆಚ್ಚಾಗಿ ಕೇಳಿರುವ ಕ್ರೂರ ಪ್ರಶ್ನೆ ಇದು: “ಓ ಫೆಲೆಸ್ತೀನಿಯನೇ, ನೀನು ಶಾಂತಿಯ ಬಗ್ಗೆ ಏಕೆ ಮಾತನಾಡುವುದಿಲ್ಲ? ನೀನು ಶಾಂತಿಯ ಕಡೆಗೆ ಏಕೆ ಬರುವುದಿಲ್ಲ? ನೀನು ಒಪ್ಪಂದಗಳಿಗೆ ಏಕೆ ಬರುವುದಿಲ್ಲ?”
ನೋಡಿ… ಗಾಝಾದ ಶಾಂತಿಯನ್ನು ಕಣ್ಣು ತೆರೆದು ನೋಡಿ. ಗಾಝಾದ ಒಪ್ಪಂದಗಳು ರಕ್ತದ ಹೊಳೆಯಾಗಿ ಹರಿಯುವುದನ್ನು ನೋಡಿ. ಗಾಝಾದ ಒಪ್ಪಂದಗಳು ಆಹಾರಕ್ಕಾಗಿ ಪಾತ್ರೆಗಳನ್ನು ಚಾಚುವುದನ್ನು ನೋಡಿ. ಗಾಝಾದ ಒಪ್ಪಂದಗಳು ಕುಡಿಯುವ ನೀರಿಗಾಗಿ ಇನ್ನೂ ಉದ್ದನೆಯ ಸಾಲುಗಳಲ್ಲಿ ನಿಂತಿರುವುದನ್ನು ನೋಡಿ. ಗಾಝಾದ ಒಪ್ಪಂದಗಳು ಮಕ್ಕಳನ್ನು ಕಫನ್ ಬಟ್ಟೆಯಲ್ಲಿ ಮಲಗಿಸುವುದನ್ನು ನೋಡಿ. ಗಾಝಾ ಯಾವಾಗಲೋ ಒಪ್ಪಂದಕ್ಕೆ ತಲುಪಿದೆ.
ಆದರೆ ಆ ಒಪ್ಪಂದಕ್ಕೆ ಸಾಕ್ಷಿಯಾದ ಜಗತ್ತು ಅವಳನ್ನು ಕೈಬಿಟ್ಟಿತು, ಒಂಟಿಯಾಗಿಸಿತು, ವಂಚಿಸಿತು ಮತ್ತು ಉದ್ದೇಶಪೂರ್ವಕವಾಗಿ ಅವಳಿಂದ ದೂರವಾಯಿತು. ಸುಂದರವಾದ ಮೌನವನ್ನೂ ಕಾಪಾಡಿತು. ಗಾಝಾದಲ್ಲಿ ಇನ್ನೂ ಯಾರಿಗಾದರೂ ಒಂದು ಪಾತ್ರವಿದ್ದರೆ, ಅದು ಈ ಜಗತ್ತಿನ ಕರುಣೆ ಬತ್ತದ ಮನುಷ್ಯರದ್ದಾಗಿದೆ. ಅವರು ಕುಗ್ಗಿದಾಗ ಗಾಝಾ ಕುಗ್ಗುತ್ತದೆ. ಅವರು ಮೌನವಾಗಿದ್ದಾಗ ಗಾಝಾ ಮೇಲೆ ದಾಳಿ ನಡೆಯುತ್ತದೆ. ತಾನು ದಾಳಿ ಮಾಡುತ್ತಿರುವ ಫೆಲೆಸ್ತೀನ್ ಪರ ಪ್ರಶ್ನಿಸಲು ಅಥವಾ ಮಾತನಾಡಲು ಯಾರೂ ಇಲ್ಲ ಎಂಬ ಭಾವನೆಯೇ ಆಕ್ರಮಣಕಾರನಿಗೆ ಇನ್ನಷ್ಟು ನಿರ್ಭಯವಾಗಿ ಅಪರಾಧಗಳನ್ನು ಮಾಡಲು ಪ್ರೇರೇಪಿಸುತ್ತದೆ. ಅಂದಿನಿಂದ ಇಂದಿನವರೆಗೆ ಗಾಝಾದಿಂದ ಹೊರಬರುವ ಪ್ರತಿಯೊಂದು ಸುದ್ದಿಗೂ ಒಂದು ಜೀವದ ಬೆಲೆ ಇದೆ.
ಗಾಝಾ ಸತ್ತಿಲ್ಲ. ಅದು ಅಲ್ಲಿಯೇ ಇದೆ. ಆದರೆ ಪ್ರಶ್ನೆ ಏನೆಂದರೆ — ನಾವು ಇನ್ನೂ ಗಾಝಾದ ಮರ್ದಿತರೊಂದಿಗಿದ್ದೇವೆಯೇ? ನಮ್ಮ ಮೌನವು ಗಾಝಾಗೆ ಯಾವುದೇ ಪ್ರಯೋಜನವನ್ನು ಮಾಡಿಲ್ಲ. ಗಾಝಾದ ಜನರು ಯಾವುದೇ ಕತೆಯ ಪಾತ್ರಧಾರಿಗಳಲ್ಲ. ಅವರು ನಮ್ಮಂತೆಯೇ ಜೀವನವನ್ನು ಪ್ರೀತಿಸುವವರು. ಕನಸುಗಳಿರುವವರು. ಬದುಕಿನ ಬಗ್ಗೆ ಆಸೆ ಹೊಂದಿರುವವರಾಗಿದ್ದಾರೆ. ತಾವು ಹುಟ್ಟಿದ ಮಣ್ಣಿನ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರುವವರು. ಅವರು ಫೆಲೆಸ್ತೀನ್ ಸ್ವಾತಂತ್ರ್ಯವನ್ನು ಕನಸು ಕಾಣುವ ಸ್ವಾಭಿಮಾನಿಗಳಾದ ಮನುಷ್ಯರು. ನಮ್ಮ ಮೌನವು ನಮ್ಮನ್ನು ವಂಚಿಸದಿರಲಿ.
ನಮ್ಮ ತಕ್ಕಡಿಗಳು ಹಗುರವಾಗದಿರಲಿ. ನಮ್ಮ ದಾಖಲೆಯ ಪುಟಗಳು ಖಾಲಿಯಾಗದಿರಲಿ. ಗಾಝಾದ ವಿಷಯದಲ್ಲಿ ಅಂತ್ಯಕಾಲದಲ್ಲಿ ನಾವು ಅಪರಾಧಿಗಳ ಸಾಲಲ್ಲಿ ಸೇರದಿರಲಿ. ಆ ಬಾಲಕನಿಗೂ, ಗಾಝಾಕ್ಕೂ ನಾವು ಈಗಲೂ ಹೇಳುತ್ತೇವೆ, ಯಾವಾಗಲೂ ಹೇಳುತ್ತೇವೆ: “ತವಕ್ಕಲ್ತು ಅಲಲ್ಲಾಹ್, ಫೀ ಅಮಾನಿಲ್ಲಾಹ್.”












