ಸನ್ಮಾರ್ಗ ವಾರ್ತೆ
✍️ಅರಫಾ ಮಂಚಿ
ದಿಲ್ಲಿಯಲ್ಲಿ ಜಿ20 ಶೃಂಗವನ್ನು ಕೇಂದ್ರ ಸರಕಾರ ಅದ್ದೂರಿಯಾಗಿ ನಡೆಸಿದೆ. ಶೃಂಗಕ್ಕೆ ಸಂಬಂಧಿಸಿ ರಾಷ್ಟ್ರಪತಿ ಏರ್ಪಡಿಸಿದ ಔತಣ ಕೂಟಕ್ಕೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಆಮಂತ್ರಣ ಇಲ್ಲ ಎಂಬ ವಿವಾದ ಒಂದೆಡೆಯಿದ್ದರೆ, ಮೋದಿ ಸರಕಾರಕ್ಕೆ ದೇಶದ ಆರು ರಾಜ್ಯಗಳಲ್ಲಿ ನಡೆದ ಏಳು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಕೂಡ ಸಿಹಿ ಸುದ್ದಿಯನ್ನು ನೀಡಿಲ್ಲ. ಏಳರಲ್ಲಿ ನಾಲ್ಕು ಸ್ಥಾನಗಳನ್ನು ಇಂಡಿಯ ಕೂಟ ಗೆದ್ದುಕೊಂಡಿದೆ. ಇದರಲ್ಲಿ ಬಿಜೆಪಿಯ ಬಹುನಿರೀಕ್ಷಿತ ಉತ್ತರಪ್ರದೇಶದ ಗೋಸಿ ವಿಧಾನ ಸಭಾ ಕ್ಷೇತ್ರ ಕೂಡಾ ಒಂದು. ಪಶ್ಚಿಮ ಬಂಗಾಳದ ದುಪಗುರಿ ವಿಧಾನಸಭಾ ಕ್ಷೇತ್ರವನ್ನು ಕೂಡಾ ಬಿಜೆಪಿ ಕಳಕೊಂಡಿದೆ.
ಒಂದೆಡೆ ಪ್ರತಿಷ್ಠೆಯ ಜಿ20 ಶೃಂಗ, ಇನ್ನೊಂದೆಡೆ ಇಂಡಿಯ ಕೂಟದ ಮುಂದೆ ಬಿಜೆಪಿ ಪ್ರತಿಷ್ಠೆಯನ್ನು ಕಳಕೊಳ್ಳುತ್ತಿರುವುದು ಇವೆರಡೂ ಜೊತೆ ಜೊತೆಯೇ ನಡೆದಿದೆ. ಇಂಡಿಯ ಕೂಟದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನು ಕಡೆಗಣಿಸಿದರೂ ಅವರು ಇಂಡಿಯಾ ಕೂಟವನ್ನು ಎತ್ತಿಹಿಡಿದರು.
ಬಿಜೆಪಿ ಪ್ರತಿಪಕ್ಷವನ್ನು ಯಾಕೆ ಕಡೆಗಣಿಸುತ್ತಿದೆ? ಪ್ರತಿಪಕ್ಷವನ್ನು ಮಾತ್ರವಲ್ಲ ಭಾರತದ ಜಾತ್ಯತೀತ ಸ್ಥಾವರಕ್ಕೇ ಕೊಳ್ಳಿಯಿಡುತ್ತಿದೆ. ದೇಶದಲ್ಲಿ ತಲೆತಲಾಂತರದಿಂದ ಎದ್ದು ಬಂದ ಜಾತ್ಯತೀತ ಸಂಪ್ರದಾಯವನ್ನು ಮುರಿಯುವಲ್ಲಿ ಪ್ರಧಾನಿಗೆ ಆತುರ ಇದ್ದಂತಿದೆ. ಸನಾತನ ಧರ್ಮದ ಕುರಿತು ತಮಿಳ್ನಾಡಿನ ಸಚಿವ ಉದಯ ನಿಧಿ ಹೇಳಿಕೆಗೆ ಜಿ20 ಸಭೆಯ ವೇಳೆಯೂ ಪ್ರಾಮುಖ್ಯತೆ ಕಲ್ಪಿಸಲು ಅವರು ಮರೆಯಲಿಲ್ಲ. ತನ್ನ ಪಕ್ಷೀಯರಿಗೆ ಮತ್ತು ಸಚಿವರಿಗೆ ಇಂಡಿಯವನ್ನು ಭಾರತ ಮಾಡುವ ಚರ್ಚೆಗಳನ್ನು ಬದಿಗಿಟ್ಟು ಸನಾತನ ಧರ್ಮದ ಕುರಿತು ಸರಿಯಾದ ಉತ್ತರ ನೀಡಿ ಎಂದು ಹೇಳಿದರು.
ವಾಸ್ತವದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಔತಣ ಕೂಟಕ್ಕೆ ಆಹ್ವಾನ ಇಲ್ಲ ಎಂಬ ವಿಷಯವೇ ಮೋದಿ ಪ್ರತಿಪಕ್ಷಗಳಿಗೆ ಬೆಲೆ ಕೊಡುವುದಿಲ್ಲ ಎಂಬುದನ್ನು ಸಾಬೀತುಪಡಿಸುವಂತಿದೆ. ದೇಶದ ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳು, ರಾಷ್ಟ್ರಪತಿಗಳು, ಉನ್ನತ ಅಧಿಕಾರಿಗಳೆಲ್ಲ ಈ ಔತಣ ಕೂಟಕ್ಕೆ ಆಮಂತ್ರಿತರು. ಆದರೆ ಪ್ರತಿಪಕ್ಷಗಳಿಗೂ ಅದರದ್ದೇ ಗೌರವ ನೀಡಬೇಕೆಂಬುದನ್ನು ಮೋದಿ ನಿರ್ಲಕ್ಷಿಸುತ್ತಿರುವುದೇಕೆ? ಇಡೀ ದೇಶದಲ್ಲಿ ತಾನು ಮತ್ತು ತನ್ನ ಪಕ್ಷ ಮಾತ್ರ ಎದ್ದು ಕಾಣಬೇಕು, ಎಲ್ಲ ಗೌರವಗಳಿಗೆ ತಾವೇ ಅರ್ಹರು ಎಂದಾಗಿದೆಯೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದರೆ ಆಶ್ಚರ್ಯವಿಲ್ಲ.
ಈ ಹಿಂದೆ ಒಂದು ದೇಶ ಒಂದು ಚುನಾವಣೆ ಎಂದಾಗ. ಎಲ್ಲ ಕಡೆಯಿಂದಲೂ ವಿರೋಧ ಎದ್ದು ಬಂತು. ಪ್ರಾದೇಶಿಕ ಪಕ್ಷಗಳು ಈ ಚುನಾವಣೆಯನ್ನು ಪ್ರಸಿಡೆನ್ಸಿಯಲ್ ರೀತಿ ಎಂದು ಟೀಕಿಸಿದವು. ಒಂದು ದೇಶ ಒಂದು ಚುನಾವಣೆಯಾದರೆ ಪ್ರಾದೇಶಿಕ ಪಕ್ಷಗಳಿಗೆ ಏನು ಕೆಲಸ ಇದೆ ಎಂಬುದು ಸ್ಟಾಲಿನ್ ಪ್ರಶ್ನೆ. ಮೋದಿ ಈ ರೀತಿ ಪ್ರತಿಪಕ್ಷಗಳ ಅಸ್ತಿತ್ವವನ್ನೇ ಅಲುಗಾಡಿಸುತ್ತಾರೆ. ಇನ್ನೊಂದು ಕಡೆ ಇಂಡಿಯ ಎಂಬ ಹೆಸರನ್ನು ಬದಲಿಸಿ ಭಾರತ ಮಾಡುವುದಕ್ಕೆ ಹೊರಟು ಸಂವಿಧಾನದ ಬುಡಕ್ಕೆ ಕೊಡಲಿಯೇಟು ನೀಡಲು ಯತ್ನಿಸುತ್ತಾರೆ.
ಒಂದೇ ರೀತಿಯಲ್ಲಿ ದೇಶದ ಒಟ್ಟು ವ್ಯವಸ್ಥೆಯನ್ನು, ಜನರನ್ನು, ಪ್ರಜಾಪ್ರಭುತ್ವ ಸಿಸ್ಟಂ ಅನ್ನು ಆತಂಕ ಅಸ್ತಿರತೆಯ ತುದಿಗಾಲಲ್ಲಿ ನಿಲ್ಲಿಸಿ ವಿಶ್ವಗುರು ಆಗಲು ಮೋದಿ ಬಯಸುತ್ತಿದ್ದಾರೆ ಅನ್ಸುತ್ತೆ. ಎಲ್ಲ ಮೋದಿ, ಎಲ್ಲ ಬಿಜೆಪಿ ಅಂತ ಮಾಡಲು ಹೊರಟದ್ದಕ್ಕೆ ಜನ ತಿರುಗಿ ಬೀಳತೊಡಗಿದ್ದಾರೆ. ಅಂದರೆ 2024ರ ಲೋಕ ಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಜನರು ಅಧಿಕಾರದಿಂದ ಕೆಳಗಿಳಿಸುವ ಸೂಚನೆಯಾಗಿ ಆರು ರಾಜ್ಯಗಳ ಏಳು ವಿಧಾನಸಭಾ ಫಲಿತಾಂಶವನ್ನು ನೋಡಬಹುದು.
ಉಪ ಚುನಾಣೆಯ ವಿಷಯ ಅತ್ತ ಇರಲಿ, ಒಂದು ದೇಶ ಒಂದು ಚುನಾವಣೆಯನ್ನು ಮೋದಿ ಹೇಳಿದಷ್ಟು ಸುಲಭವಾಗಿ ನಮ್ಮ ಸಂವಿಧಾನ ಒಪ್ಪುವುದಿಲ್ಲ. ಇಂತಹದೊಂದು ಸಾಧ್ಯತೆಯ ಪರಿಶೀಲನೆಗೆ ಹದಿನೆಂಟನೆ ಕಾನೂನು ಆಯೋಗಕ್ಕೆ 2018ರಲ್ಲಿ ಮೋದಿ ಆದೇಶಿಸಿದ್ದರು. ಕಾನೂನು ಆಯೋಗದ ಅಂದಿನ ಅಧ್ಯಕ್ಷರಾದ ಜಸ್ಟಿಸ್ ಬಿಎಸ್ ಚೌಹಾನ್ರು ಸರಕಾರಕ್ಕೆ ವರದಿ ಸಲ್ಲಿಸಿ ಒಂದು ದೇಶ ಒಂದು ಚುನಾವಣೆ ನಡೆಸುವುದು ಸುಲಭ ಅಲ್ಲ, ಸಂವಿಧಾನದ ಐದಾರು ಪರಿಚ್ಛೇದಗಳನ್ನೇ ಬದಲಿಸಬೇಕಾದೀತು ಎಂದಿದ್ದರು.
2018 ರಲ್ಲಿ ಎದ್ದ ಒಂದು ದೇಶ ಒಂದು ಚುನಾವಣೆ ಎಂಬ ಮೋದಿ ಸೂತ್ರ ಅಲ್ಲಿಗೆ ತಣ್ಣಗಾಗಿ ಈಗ ಮತ್ತೆ 2024ರ ಲೋಕ ಚುನಾವಣೆಯ ವೇಳೆ ಮತ್ತೆ ಮುನ್ನಲೆಗೆ ಬಂದಿದೆ. ಒಂದು ದೇಶ, ಒಂದು ಚುನಾವಣೆಗಾಗಿ ಸಂವಿಧಾನದ ಐದಾರು ಪರಿಚ್ಛೇದಗಳನ್ನು ಬದಲಿಸಿ ಬಿಟ್ಟರೆ ಮತ್ತು ಇಂಡಿಯ ಎಂಬ ಹೆಸರನ್ನು ತೆಗೆದು ಭಾರತ ಮಾಡುವುದಕ್ಕಾಗಿ ಸಂವಿಧಾನದ ಒಂದನೇ ಪರಿಚ್ಛೇದವನ್ನೇ ತಿದ್ದುಪಡಿ ಮಾಡಿದರೆ ಸಂವಿಧಾನದಲ್ಲಿ ಏನು ಉಳಿಯುತ್ತದೆ? ಅಂಬೇಡ್ಕರ್ ಬರೆದದ್ದನ್ನೆಲ್ಲ ಹೀಗೆ ರಾಜಕಾರಣಿಗಳು ತಿದ್ದುತ್ತಾ ಹೋದರೆ ಏನಾದೀತು?
ಇವತ್ತು ಬಿಜೆಪಿಯಲ್ಲಿ ಮೋದಿಯನ್ನು ಒಪ್ಪದವರು ತಯಾರಾಗ ತೊಡಗಿದ್ದಾರೆ. ಮೋದಿ ಸಂಪುಟದಲ್ಲಿ ಭ್ರಷ್ಟಾಚಾರಿಗಳಿದ್ದಾರೆ ಎಂದು ರಾಜಸ್ಥಾನದ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ಮೇಘವಾಲ್ ಬಹಿರಂಗವಾಗಿ ಹೇಳಿದ್ದಾರೆ. ಇನ್ನು ಕಳೆದ ಹಿಮಾಚಲ ಪ್ರದೇಶದ ಚುನಾವಣೆಯ ವೇಳೆಯೂ ಬಿಜೆಪಿಯ ಹಲವು ನಾಯಕರು ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಮಧ್ಯಪ್ರದೇಶದಲ್ಲಿ ಕೂಡ ಇಷ್ಟೇ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ವಿರುದ್ಧ ಬೇಸತ್ತ ಒಂದು ಕೂಟವೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿಕೊಂಡಿದೆ. ಹೀಗೆ ಮಧ್ಯಪ್ರದೇಶದಲ್ಲಿ ಬಿಜೆಪಿ ತಲೆ ಎತ್ತದ ಪರಿಸ್ಥಿತಿ ಒಂದು ಕಡೆ ಇದ್ದರೆ ಮೋದಿ ಚರಿಷ್ಮಾದ ಮೇಲೆ ಬಿಜೆಪಿಯವರೇ ದೊಡ್ಡ ಕಲೆ ಅಂಟಿಸುತ್ತಿದ್ದಾರೆ ಎಂಬ ಸತ್ಯ ಇನ್ನೊಂದು ಕಡೆ. ರಾಜಸ್ತಾನದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯಿ ರಾಜೇ ಸಿಂಧಿಯಾ ಅವರ ನಡೆ ಬಿಜೆಪಿಯ ವಿರುದ್ಧ ಇದೆ. ಮಧ್ಯಪ್ರದೇಶದಲ್ಲಿ ಉಮಾಭಾರತಿ ಮೋದಿ ಶೈ ಲಿಯಿಂದ ಬೇಸತ್ತಿದ್ದಾರೆ.
ಎಲ್ಲವೂ ತಾನೇ ಎಂದು ಜಿ20 ಸಂದರ್ಭದಲ್ಲಿ ಬಿಂಬಿಸಿಕೊಳ್ಳುತ್ತಿರುವಾಗ ಮೋದಿಯ ವಿರುದ್ಧ ಅವರ ಬಿಜೆಪಿಯೊಳಗೆ ಅಸಮಾಧಾನದ ಹೊಗೆ ದಟ್ಟವಾಗುತ್ತಿದೆ. ಇವತ್ತು ಆರೆಸ್ಸೆಸ್ಸಿನಲ್ಲಿ ಒಂದು ವರ್ಗ ಮೋದಿ ಶೈಲಿಯನ್ನು ತಿರಸ್ಕರಿಸುತ್ತಿದೆ ಎಂಬ ಸುದ್ದಿಗಳಿವೆ. ನಿತಿನ್ ಗಡ್ಕರಿ ಮೋದಿಗೆ ಸವಾಲಾಗಿ ನಿಂತಿದ್ದಾರೆ. ಬಿಜೆಪಿ ಶಾಸಕರು, ಪ್ರತಿಪಕ್ಷಗಳು ಕೂಡ ಮೋದಿಯನ್ನು ಪ್ರಶ್ನಿಸುತ್ತಿದ್ದಾರೆ. ಈ ಕೆಲಸ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬರೇ ಮಾಡುವುದಲ್ಲ. ಅದರಲ್ಲೂ ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಪಾಲ್ ಮಲಿಕ್ ಅದಾನಿಯ ಉದ್ಯಮವೇ ಮೋದಿಯದ್ದು, ಅದಾನಿ ಬಿದ್ದರೆ ಮೋದಿ ಬಿದ್ದಂತೆ ಎಂಬ ಮಾತುಗಳನ್ನು ಹೇಳುತ್ತಾ ತಿರುಗುತ್ತಿದ್ದಾರೆ.
ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ವಿರುದ್ಧ ಇಡಿ ಕಾರ್ಯಾಚರಣೆಗಿಳಿದಿದೆ. ಏನೇ ಇದ್ದರೂ ಇಂದು ಮೋದಿ ಬಗ್ಗೆ ಸ್ವಪಕ್ಷೀಯರೇ ಅಸಮಾಧಾನ ವ್ಯಕ್ತಪಡಿಸುವಾಗ ಇಡಿ ಸಿಬಿಐಗೆ ಪ್ರತಿಪಕ್ಷಗಳು ಹೆದರುವುದುಂಟೇ? ಇಂತಹ ಹೊತ್ತಿನಲ್ಲಿ ಮೋದಿಗೆ ಒಂದು ಹುಲ್ಲು ಕಡ್ಡಿ ಸಿಕ್ಕಿದಂತಾಗಿದೆ. ಆದ್ದರಿಂದ ಇಂಡಿಯ ವರ್ಸಸ್ ಭಾರತ ಚರ್ಚೆ ಬದಿಗಿಟ್ಟು ಸನಾತನ ಧರ್ಮ ವಿವಾದಕ್ಕೆ ಸರಿಯಾದ ಅಂಕಿ-ಅಂಶಗಳ ಸಹಿತ ಉತ್ತರ ಕೊಡಿ ಎಂದು ಮೋದಿ ಹೇಳಿದ್ದಾರೆ.
ವಿಷಯ ಬದಲಿಸೋಣ:
ಪ್ರಜಾಪ್ರಭುತ್ವದಲ್ಲಿ ಅವರವರಿಗೆ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ ಎಂದು ಉದಯನಿಧಿ ಹೇಳಿಕೆಗೆ ಕಮಲಹಾಸನ್ ಪ್ರತಿಕ್ರಿಯಿಸಿದ್ದು ಒಂದು ಕೋನದಲ್ಲಿ ಸರಿ ಇದೆ. ಆದರೆ ಧರ್ಮವನ್ನು ನಿಂದಿಸುವುದು ಸರಿಯಲ್ಲ ಎನ್ನುವುದು ಇನ್ನೊಂದು ಕೋನದಲ್ಲಿ ಮುಖ್ಯವಾಗುತ್ತದೆ. ಕಮಲ್ ಹಾಸನ್ ಪ್ರಕಾರ ಉದಯ ನಿಧಿಯ ಅಭಿಪ್ರಾಯಕ್ಕೆ ಮುಕ್ತ ಸಂವಾದ ನಡೆಯಬೇಕಿದೆ.
ಹೌದು ಇದನ್ನೇ ಈಗ ಕಾಂಗ್ರೆಸ್ ನಲ್ಲಿರುವ ಹಿಂದೆ ಬಿಜೆಪಿಯಲ್ಲಿ ಸಚಿವರಾಗಿದ್ದ ಮಾಜಿ ಐಎಎಸ್ ಅಧಿಕಾರಿ ಉದಿತ್ ರಾಜ್ ಪ್ರಧಾನಿಗೆ ಪತ್ರ ಬರೆದು ಹೇಳಿದ್ದು. ನೀವು ಸನಾತನ ಧರ್ಮ ವಿಷಯದಲ್ಲಿ ಸರಿಯಾದ ಉತ್ತರ ಕೊಡಲು ಹೇಳಿದ್ದೀರಿ. ಹೌದು ಕೊಡಬೇಕು. ತಲೆತಲಾಂತರದಿಂದ ಸನಾತನ ಧರ್ಮದಿಂದ ತುಳಿತಕ್ಕೊಳಗಾದ ದಲಿತರು. ಮಹಿಳೆಯರು, ಹಿಂದುಳಿದವರ ಕುರಿತು ಚರ್ಚೆ ನಡೆಯಬೇಕಾಗಿದೆ. ಸ್ಪೃಶ್ಯ-ಅಸ್ಪೃಶ್ಯ ಸಂಪ್ರದಾಯಗಳು ಕೊನೆಗೊಳ್ಳಬೇಕು. ಸಮಾನತೆ ಎಲ್ಲರಿಗೂ ಸಿಗಬೇಕು ಎಂದು ಮೋದಿಗೆ ಪತ್ರ ಬರೆದು ಅವರು ಹೇಳಿದ್ದಾರೆ. ಮೋದಿಯಿಂದ ಇದಕ್ಕೆ ಉತ್ತರ ಸಿಗಲಿಕ್ಕಿಲ್ಲ.
ಉದಯ ನಿಧಿ ಹೇಳಿದ್ದು ಪೆರಿಯಾರ್ ವಾದ ಎಂದು ಉದಿತ್ ರಾಜ್ ಹೇಳಿದ್ದಾರೆ. ಆತ್ಮಗೌರವ ಚಳವಳಿಯ ಮೂಲಕ ದ್ರಾವಿಡ ಚಳವಳಿ ಹೆಸರುವಾಸಿ. ಮೇಲು ಕೀಳು, ಶಿಕ್ಷಣದಿಂದ ವಂಚಿತಗೊಳಿಸಿದುದರ ವಿರುದ್ಧ ತಮಿಳ್ನಾಡಿನಲ್ಲಿ ನೂರಾರು ವರ್ಷಗಳ ಹಿಂದೆ ಹುಟ್ಟಿದ ಚಳವಳಿ. ಆದರ ಆಚಾರ್ಯ ಪೆರಿಯಾರ್. ಅವರ ವಿಚಾರಧಾರೆಯಲ್ಲಿ ಡಿಎಂಕೆ ಪಕ್ಷ ಹುಟ್ಟಿಕೊಂಡಿತ್ತು. ನಂತರ ವಿಭಜನೆಗೊಂಡು ಎಐಎಡಿಎಂಕೆ ಎಂಬ ಇನ್ನೊಂದು ಪಕ್ಷ ಹುಟ್ಟಿಕೊಂಡಿತು. ಈಗ ಈ ಎಐಡಿಎಂಕೆ ಎನ್ಡಿಎಯ ಮಿತ್ರ ಪಕ್ಷ. ಎಐಡಿಎಂಕೆ ಕೂಡ ಪೆರಿಯಾರ್ರನ್ನೇ ಮಾರ್ಗ ದರ್ಶಕ ಅಂತ ತಿಳಿದುಕೊಳ್ಳುತ್ತದೆ.
ಹಾಗಿದ್ದರೆ ಎಐಡಿಎಂಕೆಯಲ್ಲಿ ನಿಮ್ಮ ನಿಲುವು ಏನು ಎಂದು ಮೋದಿಯವರು ಪ್ರಶ್ನಿಸಬೇಕೆಂದು ಉದಿತ್ ರಾಜ್ ಹೇಳಿದ್ದಾರೆ. ಅದೇ ವೇಳೆ ಶಿವಸೇನೆಯ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಉದಯ ನಿಧಿಯನ್ನು ಖಂಡಿಸಿದ್ದಾರೆ. ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದೇ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ಕರೆದದ್ದಕ್ಕೆ ಅಜೆಂಡಾ ಏನು ಎಂಬುದೂ ಸಹಿತ ಮಣಿಪುರ ಗಲಭೆ, ಬೆಲೆಯೇರಿಕೆಯನ್ನೊಳಗೊಂಡ 9 ಪ್ರಶ್ನೆ ಗಳನ್ನು ಮುಂದಿಟ್ಟು ಸೋನಿಯ ಗಾಂಧಿ ಮೋದಿಗೆ ಪತ್ರ ಬರೆದಿದ್ದಾರೆ. ಅದಕ್ಕೆ ಕಾಂಗ್ರೆಸ್ ಅನ್ನು ಟೀಕಿಸಿ ಪ್ರಹ್ಲಾದ್ ಜೋಷಿ ಉತ್ತರ ಬರೆದಿದ್ದಾರೆ. ಅದಕ್ಕಿಂತ ಮೊದಲು ಮೋದಿಗೆ ಖರ್ಗೆ ಪತ್ರ ಬರೆದಾಗಲೂ ಅದಕ್ಕೆ ಉತ್ತರಿಸಿದ್ದು ತೇಜಸ್ವಿ ಸೂರ್ಯ. ಹೀಗೆ ಪ್ರತಿಪಕ್ಷಗಳನ್ನು ಡೋಂಟ್ ಕೇರ್ ಮಾಡುವುದು ಇವತ್ತು ಬಟಾ ಬಯಲಾಗಿದೆ. ಎಲ್ಲವೂ ತಾನೇ ಆಗಬೇಕೆಂಬ ಹಂಬಲ ಇದ್ದಂತಿದೆ. ಎಲ್ಲವೂ ಒಬ್ಬ ವ್ಯಕ್ತಿ ಹೇಗಾಗಲು ಸಾಧ್ಯ ಎಂಬ ಪ್ರಶ್ನೆಗೆ ಕಾಲ ಉತ್ತರಿಸಿದ್ದು ಇತಿಹಾಸ ತೆರೆದು ನೋಡಿದವರಿಗೆ ಗೊತ್ತು. ಹೀಗೆಯೇ ಮೋದಿಯವರ ವರ್ತನೆ ಮುಂದುವರಿದರೆ ಮತದಾರರು ಐ ಡೋಂಟ್ ಕೇರ್ ಎಂದು ನಿರ್ಧರಿಸಿ ಬಿಡಬಹುದು.
ವಿಷಯಕ್ಕೆ ಬರೋಣ:
ಕಳೆದವಾರ ನಡೆದ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೋದಿಯ ಪಾರುಪತ್ಯ, ಯೋಗಿಯ ಬುಲ್ಡೋಝಿಂಗ್ಗೆ ಜನರು ಸರಿಯಾದ ಉತ್ತರ ಕೊಟ್ಟಿದ್ದಾರೆ. ಉತ್ತರ ಪ್ರದೇಶದ ಘೋಸಿ ವಿಧಾನ ಸಭಾ ಕ್ಷೇತ್ರದ ಸಮಾಜವಾದಿ ಪಾರ್ಟಿ ಶಾಸಕ ಬಿಜೆಪಿಗೆ ಸೇರುವುದಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದರಿಂದ ಉಪಚುನಾವಣೆ ನಡೆದಿತ್ತು. ಅವರು ಈ ಹಿಂದೆ ಬಿಜೆಪಿಯಲ್ಲಿದ್ದ ವ್ಯಕ್ತಿ. ಆದರೆ ಈ ವ್ಯಕ್ತಿ ಬಿಜೆಪಿಯಿಂದ ಸ್ಪರ್ಧಿಸಿ ಭಾರೀ ಅಂತರದಿಂದ ಸೋತರು. ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ್ದ ಸುಧಾಕರ್ ಸಿಂಗ್ ಭಾರೀ ಬಹುಮತದಿಂದ ಗೆದ್ದಿದ್ದಾರೆ. ಇನ್ನೊಂದು ಝಾರ್ಕಂಡಿನದ್ದು. ಇಂಡಿಯಾ ಕೂಟದ ಬೆಬಿ ದೇವಿಯವರು ಎನ್ಡಿಯ ಸಖ್ಯ ಪಾರ್ಟಿ ಎಜೆಎಸ್ಯುನ ಯಶೋದ ದೇವಿಯನ್ನು 17,000 ಮತಗಳಿಂದ ಸೋಲಿಸಿದ್ದಾರೆ.
ಹೀಗೆ ಬಿಜೆಪಿ ಮುಟ್ಟಿದ್ದು ಚಿನ್ನವಾಗುತ್ತಿಲ್ಲ. ತ್ರಿಪುರದಲ್ಲಿ ಎರಡು, ಉತ್ತರ ಖಂಡದಲ್ಲಿ ಒಂದು ಸ್ಥಾನವನ್ನು ಗೆಲ್ಲಲು ಮಾತ್ರ ಬಿಜೆಪಿಗೆ ಸಾಧ್ಯವಾಗಿದೆ.
ಅಂದಹಾಗೆ, ಸನಾತನ ಧರ್ಮವೇ ಇರಲಿ, ಹಿಂದುತ್ವವೇ ಇರಲಿ, ಹಿಂದೂ ರಾಷ್ಟ್ರವೇ ಇರಲಿ ಇವ್ಯಾವ ವಾದವನ್ನೂ ಜನ ಕಿವಿಗೆ ಹಾಕುವ ಸ್ಥಿತಿಯಲ್ಲಿ ಖಂಡಿತ ಇಲ್ಲ. ಯಾಕೆಂದರೆ ಅವರನ್ನು ಬೆಲೆಯೇರಿಕೆ ತರಿದು ಇಟ್ಟಿದೆ. ನಿರುದ್ಯೋಗ ಬೇತಾಳನಂತೆ ಸುತ್ತು ಹಾಕಿದೆ. ಅಂತಿರುವಾಗ ಜನ ಪ್ರತಿಪಕ್ಷಗಳ ಇಂಡಿಯ ಕೂಟದಲ್ಲಿ ನಿರೀಕ್ಷೆ ಇಡದೇ ಇನ್ನೇನು ಮಾಡಬಹುದು? ಜಿ20ಯ ಸಂದರ್ಭದಲ್ಲಿ ಪ್ರಕಟವಾದ ಉಪಚುನಾವಣೆಯ ಫಲಿತಾಂಶ ನೀಡುವ ಸಂದೇಶ ಇದು.












