ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶದ ಅಝಮ್ ಘಡ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 24 ರಂದು 7 ವರ್ಷದ ಬಾಲಕನನ್ನು ಹತ್ಯೆ ಮಾಡಲಾದ ಘಟನೆಯ ಆಘಾತದಿಂದ ಕುಟುಂಬ ಹೊರ ಬಂದಿಲ್ಲ. ಮಗು ಕಾಣೆಯಾದಾಗ ಕುಟುಂಬದವರು ಅತ್ತಿತ ಹುಡುಕಾಡಿದ್ದರು. ಗೆಳೆಯರ ಮನೆಗೆ ಆಡುತ್ತಾ ಹೋಗಿರಬಹುದು ಅಂದುಕೊಂಡಿದ್ದರು. ಆದರೆ ರಾತ್ರಿಯಾದರೂ ಬರದೇ ಇರುವಾಗ ಪೊಲೀಸರಿಗೆ ದೂರು ಕೊಟ್ರು. ಬಳಿಕ ಗೋಣಿಚೀಲದಲ್ಲಿ ಹಾಕಿ ಪಕ್ಕದ ಮರದಲ್ಲಿ ನೇತಾಡಿಸಲಾದ ರೀತಿಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಇದೀಗ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವವರು ಎಂದು ಹೇಳಲಾದ ಮಂಟು ನಿಗಮ್ ಮತ್ತು ಶೈಲೇಂದ್ರ ನಿಗಮ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಂದೆ ಸಾಹೇಬ್ ಆಲಂ ಅವರಿಗೆ ದುಃಖದಲ್ಲಿ ಮಾತೇ ಬರುತ್ತಿಲ್ಲ.
ನಿಮ್ ಜೊತೆ ನಾನು ಏನು ಹೇಳಲಿ? ನನ್ನಲ್ಲಿ ಆ ತಾಳ್ಮೆಯೇ ಇಲ್ಲ. ಧೈರ್ಯವೂ ಇಲ್ಲ. ನನಗೆ ಮಾತಾಡಲು ಆಗ್ತಾ ಇಲ್ಲ. ನಾವು ಎಂದೆಂದಿಗೂ ನಮ್ಮ ಮಗುವನ್ನು ಕಳಕೊಂಡೆವು ಎಂದು ಆ ತಂದೆ ಕಣ್ಣೀರಿನೊಂದಿಗೆ ಮಾಧ್ಯಮಗಳ ಜೊತೆ ಮಾತಾಡಿದ್ದಾರೆ.
ನನ್ನ ಮಗ ಕಲಿಕೆಯಲ್ಲಿ ಮುಂದಿದ್ದ. ಧಾರ್ಮಿಕ ವಿದ್ಯಾಭ್ಯಾಸವನ್ನು ಪಡೆಯುವುದಕ್ಕಾಗಿ ಮದ್ರಸಕ್ಕೂ ಹೋಗ್ತಾ ಇದ್ದ. ಆತ ಅಮಾಯಕ ಹುಡುಗ. ಮದರಸಕ್ಕೆ ಹೋಗಿ ಬಂದ ಬಳಿಕ ಸ್ವಲ್ಪ ಹೊತ್ತು ಆಟ ಆಡ್ತಾ ಇದ್ದ. ಇಷ್ಟು ಪುಟ್ಟ ಮಗುವನ್ನು ಯಾರಾದರೂ ಹತ್ಯೆ ಮಾಡಬಹುದು ಎಂದು ನಾವು ಎಣಿಸಿಯೇ ಇರಲಿಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಬಾಲಕನ ದೇಹದಲ್ಲಿ ಹಲವಾರು ಗಾಯದ ಗುರುತುಗಳಿದ್ದವು. ಆತನ ಕೊರಳನ್ನು ಸಿಗಿಯಲಾಗಿತ್ತು. ಆತನ ಹಣೆಯಲ್ಲಿ ತಿಲಕವನ್ನು ಅಂಟಿಸಲಾಗಿತ್ತು ಎಂದು ಬಾಲಕನ ಚಿಕ್ಕಪ್ಪ ಹೇಳಿದ್ದಾರೆ.
ನಾವು ಮಗುವಿಗಾಗಿ ಹುಡುಕುತ್ತಾ ಇದ್ದಾಗ ಆರೋಪಿ ಮಂಟು ನಿಗಮ್ ಕೂಡ ನಮ್ಮ ಜೊತೆ ಸೇರಿದ್ದ. ಬಾಲಕನನ್ನು ಹುಡುಕಾಡಿದ್ದ ಎಂದು ಚಿಕ್ಕಪ್ಪ ಹೇಳಿದ್ದಾರೆ.
ರಾಷ್ಟ್ರೀಯ ಉಲೆಮಾ ಕೌನ್ಸಿಲ್ ನ ವಕ್ತಾರ ತಲ್ ಹಾ ರಶಾದಿ ಅವರು ಈ ಕ್ರೌರ್ಯವನ್ನು ಧರ್ಮ ದ್ವೇಷದ ಕೃತ್ಯ ಎಂದು ಹೇಳಿದ್ದಾರೆ. ಹಾಗೆಯೇ ಹಿಂದೂ ಆಚರಣೆಗಾಗಿ ಈ ಬಾಲಕನನ್ನು ಬಲಿ ಕೊಟ್ಟಿರುವ ಸಾಧ್ಯತೆಯ ಹಿನ್ನೆಲೆಯಲ್ಲಿಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.












