ಪ್ರವಾದಿ ಮುಹಮ್ಮದ್(ಸ) ಯಾಕಿಷ್ಟು ಪ್ರೀತಿಸಲ್ಪಡುತ್ತಾರೆ?

0
278

ಸನ್ಮಾರ್ಗ ವಾರ್ತೆ

✍️ ಕೆ.ಪಿ. ಪ್ರಸನ್ನನ್

ಮನುಷ್ಯರು ಎಂಬ ಪದಕ್ಕಿಂತ ಸುಂದರ ಹಾಗೂ ವೈವಿಧ್ಯಮಯವಾದ ಒಂದು ಪದವಿದೆಯೇ? ನಮ್ಮ ಸುತ್ತಮುತ್ತಲೂ ಎಷ್ಟು ರೀತಿಯ ಜನರಿದ್ದಾರೆ? ಮನುಷ್ಯರೇ, ಎಂದು ಅನೇಕ ಬಾರಿ ಧರ್ಮಗ್ರಂಥಗಳು ಭೂಮಿಯ ಮೇಲಿನ ಜನರನ್ನು ಸಂಭೋದಿಸಿದೆ. ಮನುಷ್ಯರ ನಡುವೆ ಹಲವು ಬಗೆಯ ಉಚ್ಛ ನೀಚತೆಗಳು ಯಾವಾಗಲೂ ಇತ್ತು. 1400 ವರ್ಷಗಳ ಹಿಂದೆ ಅದು ಉಚ್ಛ್ರಾಯ ಸ್ಥಿತಿಗೆ ತಲುಪಿದ್ದ ಹಂತದಲ್ಲಿ ಮುಹಮ್ಮದ್(ಸ) ಮಕ್ಕಾದಲ್ಲಿ ಮನುಷ್ಯರ ನಡುವೆ ದೇವ ಸಂದೇಶದೊಂದಿಗೆ ಪ್ರವೇಶಿಸಿದರು.

ಗುಲಾಮ, ಕರಿಯ, ವಿದೇಶಿ ಹೀಗೆ ಕರೆಸಿಕೊಳ್ಳುವ ಎಲ್ಲರನ್ನೂ ಜೊತೆಗೂಡಿಸಿದ್ದರಿಂದಲೇ ಅವರ ಆದರ್ಶದ ಶ್ರೇಷ್ಠತೆಯನ್ನು ಸುಲಭವಾಗಿ ಗುರುತಿಸಬಹುದು. ಇಂತಹ ಕ್ರಾಂತಿಯನ್ನುಂಟು ಮಾಡಿದ ದೇವನ ಏಕತೆ ಮಾತ್ರವಲ್ಲ, ಭೂಮಿಯ ಮನುಷ್ಯರ ಏಕತೆ ಮತ್ತು ಸಹೋದರತೆಗಾಗಿ ಹೋರಾಡುವ ಓರ್ವ ಪ್ರವಾದಿ ಮಕ್ಕಾದಲ್ಲಿದ್ದಾರೆಂದು ಬಿಲಾಲ್‌ರಿಗೆ ತಿಳಿದಿತ್ತು. ಇಥಿಯೋಪಿಯಾದ ಗುಲಾಮ, ಕರಿಯ, ಹೀಗೆ ಎಲ್ಲಾ ದಬ್ಬಾಳಿಕೆಗೆ ಅರ್ಹತೆಯಿರುವವನು. ಸ್ವಾತಂತ್ರ್ಯ ವನ್ನು ಬಯಸದ ಮನುಷ್ಯರಿದ್ದಾರೆಯೇ? ಆದರೆ, ಅದನ್ನು ಕೇಳುವ ಯೋಗ್ಯತೆಯೂ ಇಲ್ಲ ಎಂದುಕೊಂಡವರ ನಡುವೆ ಅವರ ಜೀವನವಿತ್ತು.

ಇದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಮುಹಮ್ಮದ್‌ರ ಮನೆಯ ಕಡೆ ಹೆಜ್ಜೆ ಹಾಕಿದರು. ಯಾರಿಗೂ ಕಾಣದಿರಲೆಂದು ಮುಸ್ಸಂಜೆಯವರೆಗೂ ಕಾದರು. ಅಂಧಕಾರದ ಕಪ್ಪು ಬಣ್ಣದಲ್ಲೂ ಬಿಲಾಲ್‌ರ ಕಪ್ಪು ಹೊಳೆಯುತ್ತಿತ್ತು. ಗೋಣಿ ತುಂಡಿನಿಂದ ನಗ್ನತೆ ಮರೆಸಿಕೊಂಡಿದ್ದರು. ಒಂಟೆಯೊಂದಿಗೆ ಮಲಗಲು ಒಡೆಯ ಉಮಯ್ಯ ಆದೇಶಿಸಿದ್ದ. ಆದ್ದರಿಂದ ಒಂಟೆಯ ಸೆಗಣಿಯ ವಾಸನೆ ಶರೀರವನ್ನಿಡೀ ಆಕ್ರಮಿಸಿದೆ. ನನ್ನಂಥವನನ್ನು ಮುಹಮ್ಮದ್ ತನ್ನ ಅನುಯಾಯಿಯಾಗಿ ಸ್ವೀಕರಿಸಬಹುದೇ? ಅನುಮತಿ ಪಡೆದು ಒಳಗೆ ಹೋದರೂ ಮುಹಮ್ಮದ್‌ರ ಬಳಿಗೆ ಸಾಗಲು ಸಾಧ್ಯವಾಗುತ್ತಿಲ್ಲ.

“ಏನು ಬಿಲಾಲ್, ಅಲ್ಲೇ ನಿಂತಿದ್ದೀರಾ?” ಅಲ್ಲಾಹನ ಪ್ರವಾದಿ ಅವರ ಬಳಿಗೆ ಬರುತ್ತಿದ್ದಾರೆ. ಒಂಟೆಯ ಸೆಗಣಿಯ ವಾಸನೆ ಬರುತ್ತದೆಂದು ಹೇಳಿ ಜನರು ದೂರ ನಿಲ್ಲಿಸುತ್ತಿದ್ದ ಬಿಲಾಲ್‌ರನ್ನು ಆಲಿಂಗನ ಮಾಡುತ್ತಿದ್ದಾರೆ. ಜೀವನದಲ್ಲಿ ತನಗೆ ಪ್ರಥಮ ಬಾರಿಗೆ ದೊರೆತ ಆಲಿಂಗನ ಇದಾಗಿತ್ತೆಂದು ಬಿಲಾಲ್ ನೆನಪಿಸಿದ್ದಾರೆ. ನಂತರ ಬಿಲಾಲ್ ರಸೂಲರನ್ನು ಬಿಡಲಿಲ್ಲ. ರಸೂಲ್, ಬಿಲಾಲ್‌ರನ್ನೂ ಬಿಡ ಲಿಲ್ಲ. ಪ್ರವಾದಿಯವರು(ಸ) ಒಂಟೆಯ ಮೇಲೆ ಕುಳಿತು ಸ್ವರ್ಗಕ್ಕೆ ಪ್ರವೇಶಿಸುವಾಗ ಆ ಒಂಟೆಯ ದಾರ ಹಿಡಿದು ಬಿಲಾಲ್ ಮುಂದೆ ಸಾಗುತ್ತಾರೆ ಎಂದು ಓರ್ವ ಕವಿ ಹಾಡಿದ್ದಾರೆ. ಬಿಲಾಲ್‌ರು ನಡೆದು ಒಳಪ್ರವೇಶಿಸಿದರೆಂದು ಖಾತ್ರಿಗೊಂಡ ಬಳಿಕವೇ ಅಲ್ಲಾಹನ ಪ್ರವಾದಿಯವರು(ಸ) ಸ್ವರ್ಗ ಪ್ರವೇಶಿಸುವರೆಂದು!

ಆಲಿಂಗನಗಳಿಂದ ಇತಿಹಾಸ ಸೃಷ್ಟಿಯಾಗಿದೆ. ಆದರೆ ಅದರೊಂದಿಗೆ ಆದರ್ಶ ಇರಬೇಕು. ದೀನ ದಲಿತರು ಮತ್ತು ಅಸ್ಪೃಶ್ಯರೆಂದು ಕರೆಸಿಕೊಳ್ಳುವವರನ್ನು ಜೊತೆಯಲ್ಲಿಯೇ ಇರಿಸುವ ಆದರ್ಶ. ಬಿಲಾಲ್‌ರನ್ನು ಕಾಬಾ ಭವನದ ಮೇಲೇರಲು ತನ್ನ ಹೆಗಲನ್ನು ನೀಡಿ ಸಹಕರಿಸಿದ ಪ್ರವಾದಿ(ಸ)ರು ಇಸ್ಲಾಮಿನ ಆದರ್ಶದ ಚೆಲುವನ್ನು ತನ್ನನ್ನೇ ಮರೆತು ಆಸ್ವಾದಿಸಿರಬಹುದು. ಮಕ್ಕಾ ವಿಜಯ ದಿನದಂದು ಮೊಳಗಿದ ಆ ಬಾಂಗ್ ಕರೆಯಲ್ಲಿ ಇತಿಹಾಸದ ಪ್ರಥಮ ಗುಲಾಮ ವಿಮೋಚನೆ ಘೋಷಣೆಯೂ ಇದೆ ಎಂಬುದನ್ನು ಪ್ರತಿಯೊಬ್ಬರಿಗೂ ಅರ್ಥೈಸಿಕೊಳ್ಳಬಹುದು.

“ಮನುಷ್ಯರ ದುಃಖದಲ್ಲಿ ಅತ್ಯಧಿಕ ನೋವನುಭವಿಸುವವನೇ ಮಹಾನ್ ವ್ಯಕ್ತಿ ಎಂದು ಬೆರಟ್ರಾಂಟ್ ರಸ್ಸಲ್ ಅಭಿಪ್ರಾಯ ಪಡುತ್ತಾರೆ. ಬಂಡವಾಳ ಶಾಹಿಯ ದುರಾಸೆ, ವಸಾಹತುಶಾಹಿಯ ಅಧಿಕಾರ ಲಾಲಸೆ, ವರ್ಣಭೇದದ ಅನಾದಿಕತೆಯ ನಡುವೆ ಆಧುನಿಕ ಮನುಷ್ಯನೂ ಕೂಡಾ ಮಾನವೀಯತೆ ಎಲ್ಲಿದೆ ಎಂದು ಬೊಬ್ಬಿಡುವ ಹೊರತು ಮಾನವ ಸಹೋದರತೆಯ ಮಾದರಿಗಳನ್ನು ಸೃಷ್ಟಿಸಲು ವಿಫಲನಾಗುತ್ತಾನೆ. ಆಧುನಿಕ ದೇಶಗಳ ಸಂವಿಧಾನಗಳು ತನ್ನ ನಾಗರಿಕರ ಸಮಾನತೆಗಾಗಿ ಕಾನೂನುಗಳನ್ನು ಬರೆದಿದ್ದರೂ ಪ್ರಪಂಚದ ಎಲ್ಲೆಡೆ ಜನರನ್ನು ಜಾತಿ, ಬಣ್ಣ ಮತ್ತು ಧರ್ಮದ ಆಧಾರದ ಮೇಲೆ ವರ್ಗೀಕರಿಸಲಾಗಿದೆ.

ಮ್ಯಾಕ್ಸಿ ಗಾರ್ಗಿಯ ಅಮ್ಮ ಕತೆಯಲ್ಲಿ ಒಂದು ಸಂಭಾಷಣೆ ಹೀಗಿದೆ:
ಜನರು ಪರಸ್ಪರ ಮೈ ಮರೆತು ಪ್ರೀತಿಸುವ ಕಾಲ ಬರಲಿದೆಯೆಂದು ನನಗೆ ತಿಳಿದಿದೆ. ಒಬ್ಬೊಬ್ಬರೂ ಪ್ರತಿಯೊಬ್ಬರಿಗೂ ಒಂದು ನಕ್ಷತ್ರದಂತೆ ಇರುತ್ತಾರೆ. ಅಸೂಯೆ, ಜಿಪುಣತೆ ಸ್ವಲ್ಪವೂ ಸೋಂಕದ ಹೃದಯಗಳು, ಅದು ಜೀವನವು ಮಹತ್ತರವಾದ ಮಾನವ ಸೇವೆಯಾಗುತ್ತದೆ.

ಮನುಷ್ಯ ರೂಪಕ್ಕೆ ಔನ್ನತ್ಯ ದೊರೆಯುತ್ತದೆ. ಅಂದು ಜನರು ಸ್ವತಂತ್ರವಾಗಿ ಸೌಂದರ್ಯಕ್ಕಾಗಿ ಬದುಕುತ್ತಾರೆ. ಯಾರು ಈ ಜಗತ್ತನ್ನು ಮುಕ್ತ ಹೃದಯದಿಂದ ಪ್ರೀತಿಸಲು ಸಾಧ್ಯವಾಗುವುದೋ ಅವನನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುವುದು. ಅಂತಹ ಬದುಕು ಸಾಗಿಸುವವರು ಮಹಾನ್ ವ್ಯಕ್ತಿಗಳಾಗಿರುತ್ತಾರೆ.

ಇದನ್ನು ಪ್ರವಾದಿ(ಸ) ಮತ್ತು ಅವರ ಸಹಚರರು ಇತಿಹಾಸದಲ್ಲಿ ಸಾಧಿಸಿದ್ದಾರೆ. ಮನುಷ್ಯರನ್ನು ಅವರ ನೈಜ ಸೌಂದರ್ಯದಲ್ಲಿ ಕಾಣಬೇಕಾದರೆ ಆ ಜೀವನವನ್ನು ಪ್ರಾಮಾಣಿಕವಾಗಿ ಓದಿ ತಿಳಿಯಬೇಕು. ವಂಶೀಯತೆ ಮತ್ತು ಜಾತೀಯತೆಯೆಂಬ ದ್ವೇಷದ ಅಸ್ತ್ರವನ್ನು ಉಪೇಕ್ಷಿಸುವುದು ಅಷ್ಟೇ ಸುಲಭವಲ್ಲ. ಮನಸ್ಸು ಕೋಮುವಾದದಿಂದ ಮುಕ್ತವಾಗಲು, ತೌಹೀದ್‌ನ ಮರ್ಮವನ್ನು ಸರಿಯಾಗಿ ತಿಳಿದು ಕೊಂಡು ನೈಜ ಮುಸ್ಲಿಮನಾಗಲು ಜನರನ್ನು ಒಟ್ಟಿಗೆ ಸೇರಿಸಲು ಸಾಧ್ಯ ವಿಲ್ಲವೆಂದಾದರೆ ನೀವು ವಿಶ್ವಾಸವಿಟ್ಟಿದ್ದೀರೆಂದು ಹೇಳಬಹುದು. ಇತರ ಹಕ್ಕುವಾದವೇನೂ ಬೇಕಾಗಿಲ್ಲವೆಂದು ಪವಿತ್ರ ಕುರ್‌ಆನ್ ಹೇಳಿದೆಯಲ್ಲವೇ?

ಪ್ರವಾದಿ ಮುಹಮ್ಮದ್(ಸ) ಮತ್ತು ಬಿಲಾಲ್(ರ)ರ ಜೀವನವನ್ನು ಇಲ್ಲಿ ಮಾನವ ಸಹೋದರತೆಯ ಪರಿಪೂರ್ಣ ಉದಾಹರಣೆಯೆಂದು ಉಲ್ಲೇಖಿಸಲಾಗಿದೆ.

ಅಲ್ಲಾಹನು ಮನುಷ್ಯನಿಗೆ ಜನರ ಅಂತರಾಳವನ್ನು ತಿಳಿಯುವ ಸಾಮರ್ಥ್ಯವನ್ನು ನೀಡಿದ್ದರೆ ನಮ್ಮಲ್ಲಿ ಅನೇಕರು ತೋಳಗಳು, ನರಿಗಳು ಆಗಿರುತ್ತಿದ್ದರು. ಅಲ್ಲಾಹನ ಮಹಿಮೆ ಎಷ್ಟು ಮಹತ್ತರವಾದುದು. (ಡಾ. ಮುಸ್ತಫಸ್ಸಬಾಈ)

ಇಂತಹ ಎಲ್ಲಾ ರೀತಿಯ ಮನುಷ್ಯರ ಆಧ್ಯಾತ್ಮಿಕ ಗುರು ಮತ್ತು ನಾಯಕನಾಗಿ ಮಾನವ ಸಹೋದರತೆಯ ಮಾಧುರ್ಯವನ್ನು ಜನರಿಗೆ ಅನುಭವಿಸುವಂತೆ ಮಾಡಲು ಪ್ರವಾದಿಯವರಿಗೆ ಸಾಧ್ಯವಾಯಿತು. ಗೋತ್ರ ಮಹಿಮೆ, ಸಂಪತ್ತು ಮತ್ತು ಜಾತೀಯತೆಯ ಅಹಂಕಾರ ತಲೆಗೆ ಹತ್ತಿದ್ದವರಿಂದಲೂ ಮಾನವೀಯತೆಯ ಗೆರೆಯನ್ನು ಎಳೆಯಲು ಮುಹಮ್ಮದ್(ಸ)ರಿಗೆ ಸಾಧ್ಯವಾಗಿದೆ. ಕರಿಯನ ಮಗನೇ' ಎಂಬ ಒಂದು ಪದ ತನ್ನ ಓರ್ವ ಅನುಯಾಯಿಯ ಬಾಯಿಯಿಂದ ಬಂದಾಗ ಜಾಹಿಲಿಯಾ ಕಾಲದ ಚಿಹ್ನೆಗಳು ಇನ್ನೂ ನಿನ್ನಲ್ಲಿ ಬಾಕಿ ಉಳಿದಿದೆಯೇ’ ಎಂಬ ಪ್ರಶ್ನೆಯೊಂದಿಗೆ ಪ್ರವಾದಿವರ್ಯರು(ಸ) ಆ ಅನುಚರನನ್ನು ತಿದ್ದಿದರು.

ಎಲ್ಲಾ ಜಾತೀಯತೆಗೂ ಅತೀತವಾಗಿ ಮನುಷ್ಯರೇ’ ಎಂಬ ಸಮಾನತೆಯ ಕರೆಯನ್ನು ಧರ್ಮಗ್ರಂಥಗಳಂತೆ ಮುಹಮ್ಮದರೂ ಪುನರಾವರ್ತಿಸಿದರು. ಕರಿಯರೇ, ಬಿಳಿಯರೇ, ಅರಬಿಗಳೇ, ಆಫ್ರಿಕ ನ್ನರೇ… ಮುಂತಾದ ಕುಲ, ವಂಶ, ಜಾತಿ, ಭಾಷೆ, ದೇಶ, ಧರ್ಮ, ಸಮುದಾಯ ಎಲ್ಲಾ ಸಂಕುಚಿತತೆಯನ್ನು ಮನುಷ್ಯರೇ’ ಎಂಬ ಕರೆಯೊಂದಿಗೆ ಪವಿತ್ರ ಕುರ್‌ಆನ್ ರದ್ದುಗೊಳಿಸಿದೆ.

ಆದ್ದರಿಂದ ಅದರ ಆದರ್ಶ ಮತ್ತು ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕು. ಪ್ರವಾದಿಯವರು(ಸ) ಅದರ ಜೀವಂತ ಉದಾಹರಣೆಯಾಗಿದ್ದರು.

ಅನುಯಾಯಿಗಳು `ಕಲ್ಲುಗಳ ನಡುವೆ ರತ್ನಕಲ್ಲು’ ಎಂದು ವಿಶ್ಲೇಷಿಸಿದ್ದರೂ ಪ್ರವಾದಿ(ಸ)ರು ಅಲ್ಲಾಹನ ದಾಸ ಎಂದು ಹೇಳುವುದನ್ನು ಇಷ್ಟಪಟ್ಟರು. ಇದನ್ನು ಅಲ್ಲಾಹನನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗೆ ಮಾತ್ರ ಹೇಳಲು ಸಾಧ್ಯ.

ಪ್ರವಾದಿವರ್ಯರು(ಸ) ಓರ್ವ ಮನುಷ್ಯನೆಂಬಂತೆ ಇತರ ಜನರೊಂದಿಗೆ ಸಂವಹನ ನಡೆಸಿದರು. ದೇವನಿಂದ ಪ್ರತ್ಯಕ್ಷ ಪ್ರೇರಣೆ ಇಲ್ಲದಿದ್ದಾಗಲೆಲ್ಲಾ ತನಗೆ ತಪ್ಪು ಸಂಭವಿಸಬಹುದು ಎಂದಿದ್ದರು.

ಮುಸ್ಲಿಮರು ಮುಹಮ್ಮದ್(ಸ)ರನ್ನು ದೇವನ ಅವತಾರ ಅಥವಾ ತಮ್ಮ ರಕ್ಷಕ ಎಂಬ ಕಾರಣಕ್ಕೆ ಪ್ರೀತಿಸುವುದು ಮತ್ತು ಅನುಸರಿಸುವುದಲ್ಲ. ಅವರು ತಮ್ಮ ಧೈರ್ಯ ಮತ್ತು ಸೌಮ್ಯತೆಗಾಗಿ ಪ್ರೀತಿಸಲ್ಪಡುತ್ತಾರೆ. ಯೋಧ, ಜನನಾಯಕ, ಮಾದರಿ ಪತಿ, ತಂದೆ, ಗೆಳೆಯ, ಆಡಳಿತಗಾರ ಎಂಬ ಕಾರಣದಿಂದಲೂ ಗೌರವಿಸಲ್ಪಡುತ್ತಾರೆ. ಅತ್ಯಂತ ಕೆಳಸ್ತರದಲ್ಲಿ ಬಡತನದಿಂದ ವಾಸಿಸುವ ಹೆಣ್ಣು ಗಂಡು ಕೂಡಾ ಅವರ ಕುರಿತು ಯೋಚಿಸುವಾಗ ಅಂತಹ ಒಂದು ಗೆಳೆಯ ದೊರೆತಿದ್ದರೆ ಎಂದು ಕನಸು ಕಾಣುತ್ತಾರೆ.

ವಿವಿಧ ಜನವಿಭಾಗಗಳ ನಡುವೆ ನ್ಯಾಯವನ್ನು ಸ್ಥಾಪಿಸುವುದು ಮಾನವೀಯತೆಯ ಮುಖ್ಯ ಬೇಡಿಕೆ. ಅದರಲ್ಲಿ ದಿವ್ಯಗ್ರಂಥ ಮತ್ತು ಪ್ರವಾದಿ ಚರ್ಯೆಯು ಯಾವುದೇ ದಾಕ್ಷಿಣ್ಯ ತೋರಿಸಲಿಲ್ಲ. ನ್ಯಾಯ ನಿರಾಕರಣೆಯೇ ಅಕ್ರಮಗಳಿಗೆ ಕಾರಣವಾಗುವುದರಿಂದ ನ್ಯಾಯ ಪಾಲನೆಯು ಪ್ರವಾದಿತ್ವದ ಹೊಣೆಯ ಮಹಾ ಮಾದರಿಯಾಗಿತ್ತು.

“ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗಾಗಿ ಸತ್ಯದಲ್ಲೇ ನೆಲೆ ನಿಲ್ಲುವವರೂ, ನ್ಯಾಯದ ಸಾಕ್ಷ್ಯ ವಹಿಸುವವರೂ ಆಗಿರಿ. ಒಂದು ವಿಭಾಗದ ಮೇಲಿನ ದ್ವೇಷವು ನಿಮ್ಮನ್ನು ನ್ಯಾಯದಿಂದ ವಿಮುಖರಾಗುವಷ್ಟು ರೇಗಿಸದಿರಲಿ, ನ್ಯಾಯ ಪಾಲಿಸಿರಿ, ಇದುವೇ ದೇವಭಯಕ್ಕೆ ಹೆಚ್ಚು ಅನುಗುಣವಾಗಿರುತ್ತದೆ. (5: 8)

ಒಮ್ಮೆ ಪ್ರವಾದಿಯವರು(ಸ) ಸಹಚರರಾದ ಇಬ್ನು ಮಸ್‌ವೂದ್‌ರೊಂದಿಗೆ ತನಗೆ ಕುರ್‌ಆನ್ ಓದಿ ಕೇಳಿಸಬೇಕೆಂದು ಹೇಳಿದರು?

“ಅಲ್ಲಾಹನ ಪ್ರವಾದಿಗಳೇ, ತಮಗೆ ಅವತೀರ್ಣವಾದ ಕುರ್‌ಆನ್ ನಾನು ಓದಿ ಕೇಳಿಸಬೇಕೇ?”

“ತಾವು ಪಾರಾಯಣ ಮಾಡುವುದನ್ನು ಕೇಳಲು ನನಗೆ ಇಷ್ಟ.”

ಅದಕ್ಕಿಂತ ಹೆಚ್ಚಿನ ಸಂತೋಷ ಇಬ್ನು ಮಸ್‌ವೂದ್‌ರಿಗೆ ಬೇರೇನಿದೆ? ಅವರು ಸೂರಃ ಅನ್ನಿಸಾ ಆರಂಭಿಸಿದರು.

ಪ್ರತಿಯೊಂದು ಸಮುದಾಯದಿಂದಲೂ ಒಬ್ಬೊಬ್ಬ ಸಾಕ್ಷಿಯನ್ನು ನಾವು ಕರೆ ತರುತ್ತೇವೆ. ಈ ಸಮುದಾಯಕ್ಕೆ ಸಾಕ್ಷಿಯಾಗಿ ನಿಮ್ಮನ್ನು (ಪ್ರವಾದಿಯವರನ್ನು) ಸಾಕ್ಷಿಯಾಗಿ ನಿಲ್ಲಿಸುವಾಗಲೂ ಇವರೇನು ಮಾಡುವರೆಂದು ಯೋಚಿಸಿರಿ (ಅನ್ನಿಸಾ- 41) ಎಂಬ ಆಯತ್ ಓದುವಾಗ ಪ್ರವಾದಿವರ್ಯರು(ಸ) “ಸಾಕು, ಈಗ ಇಷ್ಟು ಸಾಕು” ಎಂದರು.

ತನ್ನ ಪಾರಾಯಣದಲ್ಲಿ ಏನಾದರೂ ಕೊರತೆಯಾಯಿತಾ ಎಂದು ಸ್ವತಃ ಯೋಚಿಸಿ ಬೆವೆತು ಹೋದ ಇಬ್ನು ಮಸ್‌ಊದ್ ತಿರುಗಿ ನೋಡಿದರು. ಆಲಿಸಿದ ಆಯತ್‌ನ ಭಾರದಿಂದ, ಕಣ್ಣುಗಳೆರಡೂ ಕೊಳಗಳಾಗಿ, ಬಿಕ್ಕುತ್ತಿರುವ ಅಲ್ಲಾಹನ ಪ್ರವಾದಿಯನ್ನು ಅವರು ಕಂಡರು. ಮನುಷ್ಯರಿಗೆ ಸಾಕ್ಷಿಯಾಗಬೇಕಾದ ಮುಹಮ್ಮದ್(ಸ) ರಂತಹ ಮನುಷ್ಯರನ್ನು ಕಂಡವರು ಯಾರಿದ್ದಾರೆ?

ಸಲ್ಲಲ್ಲಾಹು ಅಲೈಹಿವಸಲ್ಲಮ್