ಸನ್ಮಾರ್ಗ ವಾರ್ತೆ
ನವದೆಹಲಿ ಏಪ್ರಿಲ್ 21- ನಾಗರಿಕ ಸೇವೆಗಳು ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ರಾಜಸ್ಥಾನದ ಕೋಟಾದಲ್ಲಿ ಲಾಕ್ ಡೌನ್ ನಿಂದಾಗಿ ಸಿಲುಕಿಕೊಂಡಿರುವ ನೂರಾರು ವಿದ್ಯಾರ್ಥಿಗಳನ್ನು ಕರೆತರಲು ವಿವಿಧ ರಾಜ್ಯಗಳ ಅನುಮತಿ ನೀಡಿರುವುದನ್ನು ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಪ್ರಶ್ನಿಸಿದ್ದು ಒಂದು ದೇಶ ಎರಡು ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಅನುಸರಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. NDTV ಈ ಬಗ್ಗೆ ವರದಿ ಪ್ರಕಟಿಸಿದೆ.
ಯೋಗಿ ಆದಿತ್ಯನಾಥ್ ಅವರು ಈಗಾಗಲೇ ತಮ್ಮ ವಿದ್ಯಾರ್ಥಿಗಳನ್ನು ಕರೆತರಲು ಬಸ್ಸನ್ನು ಕಳುಹಿಸಿದ್ದರೆ ಮಧ್ಯಪ್ರದೇಶ, ಬಂಗಾಳ, ಗುಜರಾತ್, ಛತ್ತಿಸ್ ಗಢ ಮತ್ತು ಅಸ್ಸಾಂಗಳು ಕೂಡ ತಮ್ಮ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆದುಕೊಂಡು ಹೋಗಲು ಸಿದ್ಧವಾಗಿವೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಹೇಳಿದ್ದರು.
ಒಂದು ಕಡೆ ಕಠಿಣ ಲಾಕ್ ಡೌನ್ ನಿಯಮವನ್ನು ಪಾಲಿಸುವಂತೆ ಕೇಂದ್ರ ಸರಕಾರ ಒತ್ತಡ ಹೇರುತ್ತಿದೆ. ಅದಕ್ಕಾಗಿ ದೆಹಲಿಯಿಂದ ಬಂಗಾಳದಂತಹ ರಾಜ್ಯಗಳಿಗೆ ತಂಡಗಳನ್ನು ಕಳುಹಿಸಲಾಗುತ್ತಿದೆ. ಇನ್ನೊಂದು ಕಡೆ ಲಾಕ್ ಡೌನ್ ನಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳನ್ನು ಕರೆತರಲು ತನ್ನದೇ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಸರಕಾರ ಅವಕಾಶವನ್ನು ಮಾಡಿಕೊಟ್ಟು ಲಾಕ್ ಡೌನ್ ಅನ್ನು ಅಪಹಾಸ್ಯ ಮಾಡುತ್ತಿದೆ ಎಂದು ಬಿಜೆಪಿಯ ಮಿತ್ರಪಕ್ಷವಾದ ಜನತಾದಳದ ಯುನೈಟೆಡ್ ನ ಹಿರಿಯ ಮುಖಂಡರು ದೂರಿಕೊಂಡಿದ್ದಾರೆ.
ಇದೇ ವೇಳೆ, ಬಿಹಾರದ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಅವರು ಕೇಂದ್ರದ ಧೋರಣೆಯನ್ನು ಟೀಕಿಸಿದ್ದು ವಿದ್ಯಾರ್ಥಿಗಳನ್ನು ಕರೆತರಲು ಲಾಕ್ ಡೌನ್ ಅನ್ನು ಸಡಿಲಿಸಬಹುದಾದರೆ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












