“ಪತ್ನಿ ಬಿಜೆಪಿಗೆ ಸೇರ್ಪಡೆ ಆಗುವುದಿಲ್ಲವೇ?” ಎಂಬ ಪ್ರಶ್ನೆಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಉತ್ತರಿಸಿದ್ದು ಹೀಗೆ…

0
191

ಸನ್ಮಾರ್ಗ ವಾರ್ತೆ

ನವದೆಹಲಿ: ಸೀಟು ಸಿಗದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೂ ಅವರ ಪತ್ನಿ ಇನ್ನೂ ಕಾಂಗ್ರೆಸ್ ಸಂಸದೆಯಾಗಿ ಮುಂದುವರೆದಿದ್ದಾರೆ. ಅಮರಿಂದರ್ ಅವರ ಪತ್ನಿ ಪ್ರಣೀತ್ ಕೌರ್ ಇನ್ನೂ ಕಾಂಗ್ರೆಸ್ ಸದಸ್ಯರಾಗಿದ್ದಾರೆ ಮತ್ತು ಅಧಿಕಾರವನ್ನು ಹೊಂದಿದ್ದಾರೆ. ಆದರೆ, ಅವರು ವಿರೋಧ ಪಕ್ಷಗಳಲ್ಲಿ ಇರುವುದರಲ್ಲಿ ಯಾವುದೇ ಅಸಹಜತೆ ಇಲ್ಲ ಎಂಬುದು ಕ್ಯಾಪ್ಟನ್ ಅಮರಿಂದರ್ ವಾದ‌. ಪತಿ ಮಾಡಿದಂತೆ ಎಲ್ಲವನ್ನೂ ಪತ್ನಿ ಅನುಸರಿಸಬೇಕಾಗಿಲ್ಲ ಎಂದು 81 ವರ್ಷದ ಸಿಂಗ್ ಹೇಳಿದ್ದಾರೆ.

ಪ್ರಣೀತ್ ಕೌರ್‌ರವರು 2009-2014ರ ಅವಧಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. ಅವರು ಪ್ರಸ್ತುತ ಪಟಿಯಾಲಾ ಕಾಂಗ್ರೆಸ್ ಸಂಸದರಾಗಿದ್ದಾರೆ. ಕಾಂಗ್ರೆಸ್ ಅವರ ರಾಜೀನಾಮೆಗೆ ಒತ್ತಾಯಿಸಿಲ್ಲ ಅಥವಾ ರಾಜೀನಾಮೆ ನೀಡುವ ಇಚ್ಛೆಯನ್ನು ಅವರೂ ವ್ಯಕ್ತಪಡಿಸಿಲ್ಲ.

ಆದರೆ ಕಾಂಗ್ರೆಸ್ ರಾಜೀನಾಮೆಗೆ ಒತ್ತಾಯಿಸಿದರೆ ಉಪಚುನಾವಣೆ ನಡೆಯಲಿದ್ದು, ಆ ಸ್ಥಾನ ಎಎಪಿ ಪಾಲಾಗಲಿದೆ ಎಂಬುದು ಪ್ರಣೀತ್ ಹಾಗೂ ಕಾಂಗ್ರೆಸ್‌ಗೆ ಗೊತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಇದೇ ವೇಳೆ, ಪ್ರಣೀತ್‌ ಕೌರ್‌ರವರು ಕ್ಯಾಪ್ಟನ್ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಪ್ರತಿಕ್ರಿಯಿಸಿದ್ದಾರೆ.

ಅಮರಿಂದರ್ ಸಿಂಗ್ ಜೊತೆಗೆ ಅವರ ಪುತ್ರ ರಣೀಂದರ್ ಸಿಂಗ್, ಪುತ್ರಿ ಜೈ ಇಂದರ್ ಕೌರ್ ಮತ್ತು ಮೊಮ್ಮಗ ನಿರ್ವಾನ್ ಸಿಂಗ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೀಟು ವಿವಾದದ ನಂತರ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ಪಂಜಾಬ್ ಲೋಕ ಕಾಂಗ್ರೆಸ್ ಎಂಬ ಪಕ್ಷವನ್ನು ಸ್ಥಾಪಿಸಿದ್ದರು ಈಗ ಈ ಪಕ್ಷವೂ ಬಿಜೆಪಿಯಲ್ಲಿ ವಿಲೀನವಾಗಿದೆ.

ಈ ಮಧ್ಯೆ, ಅಮರಿಂದರ್ ಅವರ ಕುಟುಂಬದ ಅನೇಕ ಸದಸ್ಯರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಬಿಜೆಪಿ ಸೇರಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
“ಒಮ್ಮೆ ಬಿಜೆಪಿ ಸೇರಿದರೆ ನಿಮ್ಮ ಎಲ್ಲಾ ತಪ್ಪುಗಳು ಕ್ಷಮಿಸಲ್ಪಡುತ್ತವೆ ಎಂಬ ಮಾತೊಂದಿದೆ. ಹಾಗಾಗಿ, ಅವರೂ ತಮ್ಮ ಕುಟುಂಬವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಆರೋಪಿಸಿದ್ದಾರೆ.