ನೆತನ್ಯಾಹುಗೆ ಕ್ಷಮೆ ಸಿಗಲಿದೆಯೇ?

0
415

✍️ ಶಾಝಿಲ್ ಉಸ್ಮಾನ್

ತನ್ನ ವಿರುದ್ಧ ಇರುವ ಮೂರು ಪ್ರಕರಣಗಳಲ್ಲಿ ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಕ್ಷಮೆ ಯಾಚಿಸಿದ್ದಾರೆ. ಅಧ್ಯಕ್ಷ ಇಸಾಕ್ ಹೆರ್‌ಸೊಗಿನ್‌ರಲ್ಲಿ ತನ್ನನ್ನು ಕ್ಷಮಿಸ ಬೇಕೆಂದು ಕೋರಿಕೆ ಇಟ್ಟಿದ್ದಾರೆ. ಭ್ರಷ್ಟಾಚಾರದ ಆರೋಪದಲ್ಲಿ ತನ್ನ ವಿಚಾರಣೆ ಮಾಡುತ್ತಿರುವುದು ದೇಶದೊಳಗೆ ಭಿನ್ನಮತ ಮತ್ತು ಆಂತರಿಕ ಛಿದ್ರತೆಗೆ ಕಾರಣವಾಗುತ್ತಿದೆ ಎಂದಿದ್ದಾರೆ. ಹೀಗೆ ಮುಂದುವರಿದರೆ ದೇಶಕ್ಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತನ್ನ ಕ್ಷಮಾಯಾಚನೆಯ ಮನವಿಯಲ್ಲಿ ಬರೆದಿದ್ದಾರೆ. ಜೊತೆಗೆ ತನ್ನನ್ನು ಯಾಕೆ ಕ್ಷಮಿಸಬೇಕಾಗಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದು, ಹೀಗೆ ತನಗೆ ಕ್ಷಮೆ ನೀಡಿದರೆ ಪರಸ್ಪರ ಶತ್ರುತ್ವದ ಬೆಂಕಿಯನ್ನು ಆರಿಸಿ ಬಿಡಲು ಸಾಧ್ಯವಿದೆ ಎಂದಿದ್ದಾರೆ.

ಇವೆಲ್ಲವನ್ನೂ ವೀಡಿಯೊ ಮಾಡಿ ಅಧ್ಯಕ್ಷ ಇಸಾಕ್‌ರಿಗೆ ನೆತನ್ಯಾಹು ಕಳುಹಿಸಿಕೊಟ್ಟಿದ್ದಾರೆ. ಇತ್ತೀಚೆಗಿನ ವರೆಗೂ ಕ್ಷಮೆ ಯಾಚಿಸುವುದಿಲ್ಲ, ತಾನು ಭ್ರಷ್ಟಾಚಾರ ಎಸಗಿಯೇ ಇಲ್ಲ ಎನ್ನುತ್ತಿದ್ದ ನೆತನ್ಯಾಹು ದಿಢೀರ್ ಬದಲಾಗಿದ್ದಾರೆ. ಈ ಪ್ರಕರಣದಲ್ಲಿ ಅವರು ಶಿಕ್ಷಿಸಲ್ಪಡುವುದು ಗ್ಯಾರಂಟಿ ಎಂಬುದು ಖಾತರಿ ಇದ್ದುದರಿಂದ ಮಾತ್ರವಲ್ಲ ಹೀಗೆ ಕ್ಷಮೆ ಯಾಚಿಸಬೇಕೆಂದು ಟ್ರಂಪ್ ಒತ್ತಡ ಹಾಕುತ್ತಿದ್ದರು ಎಂದೂ ವರದಿಯಿದೆ.

ನೆತನ್ಯಾಹುರ ವಾದ ಏನೆಂದರೆ, ದೇಶದಲ್ಲಿ ಆಡಳಿತ ನೋಡಿಕೊಳ್ಳುವಾಗ ಆಗಾಗ ಕೋರ್ಟಿಗೆ ಹಾಜರಾಗಬೇಕಾಗಿದೆ, ಇದು ತನಗೆ ಕಷ್ಟವಾಗುತ್ತಿದೆ ಎಂದಾಗಿದೆ. ಭ್ರಷ್ಟಾಚಾರ ಎಸಗುವಾಗ ಅವರಿಗೆ ಕಷ್ಟವಾಗಿಲ್ಲ. ಇಷ್ಟವಿದ್ದೇ ಮಾಡಿದ್ದಾರೆ. ಈಗ ವಿಚಾರಣೆಯ ಕಟಕಟೆ ಹತ್ತಲು ಅವರಿಗೆ ಕಷ್ಟವಾಗುತ್ತಿದೆ ಎಂದು ಅವರ ರಾಜಕೀಯ ಎದುರಾಳಿಗಳು ಪ್ರಶ್ನಿಸುತ್ತಿದ್ದಾರೆ. ಏನಿದ್ದರೂ ಭ್ರಷ್ಟಾಚಾರ ಮಾಡಿದ್ದೌದು ಎಂದು ನೆತನ್ಯಾಹು ಕ್ಷಮೆಯಾಚನೆ ಸ್ಪಷ್ಟಪಡಿಸುತ್ತದೆ. ಹೀಗಾಗಿ ನೆತನ್ಯಾಹುರ ಬಹಿರಂಗ ಕ್ಷಮೆಯಾಚನೆಯು ಅವರ ರಾಜಕೀಯ ಪ್ರತಿಸ್ಪರ್ಧಿಗಳು ಪ್ರತಿಭಟನೆ ನಡೆಸಲು ದೊಡ್ಡ ಮಟ್ಟದಲ್ಲಿ ದಾರಿ ಮಾಡಿಕೊಟ್ಟಂತಾಯಿತು. ಜನರು ಗೋ ನೆತನ್ಯಾಹು ಎಂದು ಕೂಗು ಹಾಕುತ್ತಿದ್ದಾರೆ.

ನೋಡಿ, ಇಸ್ರೇಲಿನಲ್ಲಿ ಮೂರು ಭ್ರಷ್ಟಾಚಾರ ಪ್ರಕರಣ ನೆತನ್ಯಾಹು ವಿರುದ್ಧ ನಡೆಯುತ್ತಿದೆ. ಒಂದನೆಯ ಪ್ರಕರಣ ಬೈಸಾಕ್ ಎಂಬ ಟೆಲಿಕಾಂ ಕಂಪೆನಿಗೆ ಅಕ್ರಮ ವಿಧಾನದಲ್ಲಿ ನೆರವಾದದ್ದು. ಇದಕ್ಕೆ ಪ್ರತಿಫಲವನ್ನು ನೆತನ್ಯಾಹು ಅವರ ನ್ಯೂಸ್ ವೆಬ್‌ಸೈಟಿನಲ್ಲಿ ಸಾಕಷ್ಟು ಕವರೇಜು ಪಡೆಯುವ ಮೂಲಕ ಪಡೆದಿರುವುದು ಆಗಿದೆ.

ಇನ್ನೊಂದು ಸಿಗರೇಟುಗಳು, ಶಾಂಪೆಯಿನ್, ಆಭರಣಗಳ ಎರಡು ಲಕ್ಷ ಅಮೆರಿಕನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ಉಡುಗೊರೆ ಪಡೆದದ್ದು.
ಸಂಸ್ಥೆಯು ಬೃಹತ್ ಪ್ರಮಾಣದ ಪ್ರಚಾರ ನೀಡುವ ಒಪ್ಪಂದದಲ್ಲಿ ಆ ಸಂಸ್ಥೆಯ ಪ್ರತಿಸ್ಪರ್ಧಿಯ ಮಾಧ್ಯಮವನ್ನು ದುರ್ಬಲಗೊಳಿಸುವಂತೆ ಕಾನೂನು ರೂಪಿಸುವ ಭರವಸೆ ನೀಡಿದ್ದು ಮೂರನೆಯ ಪ್ರಕರಣವಾಗಿದೆ. ಈ ಭ್ರಷ್ಟಾಚಾರ ಆರೋಪಗಳು 2020ರಲ್ಲಿ ಕೋರ್ಟಿನ ಪರಿಗಣನೆಗೆ ಬಂದಿತ್ತು. ದೇಶಾದ್ಯಂತ ಈ ವರೆಗೂ ಅವರ ಸರಕಾರದ ವಿರುದ್ಧ ನಿರಂತರವಾಗಿ ಜನತಾ ಪ್ರತಿಭಟನೆಗಳು ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ 2023 ಅಕ್ಟೋಬರ್ ಏಳರಂದು ಹಮಾಸ್ ದಾಳಿ ನಡೆಸಿತು. ಇದರ ನಂತರ ಗಾಝದಲ್ಲಿ ವಂಶಹತ್ಯೆಗಿಳಿದ ನೆತನ್ಯಾಹು ಫೆಲಸ್ತೀನಿಯರ ವಿರುದ್ಧ ಮಾತ್ರವಲ್ಲ ತನ್ನ ದೇಶದಲ್ಲಿ ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು ಕೂಡ ಯಶಸ್ವಿಯಾಗಿ ಮಟ್ಟ ಹಾಕಿದರು.

ಎರಡು ವರ್ಷಗಳ ಕಾಲ ಗಾಝದಲ್ಲಿ ಝಿಯೊನಿಸ್ಟ್ ಸರಕಾರ ದುಂಡಾವರ್ತಿ ನಡೆಸಿತು. ಅದರ ನಂತರವೂ ಇಸ್ರೇಲಿನ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ನೆತನ್ಯಾಹುರ ರಾಜಕೀಯ ಅಸ್ತಿತ್ವ ಅತಂತ್ರವಾಗಿ ಮುಂದುವರಿಯುತ್ತಿದೆ ಎಂದು ಅಂದೇ ನಿರೀಕ್ಷಕರು ಬೆಟ್ಟು ಮಾಡಿ ತೋರಿಸಿದ್ದರು. ಅವರ ವಾದವನ್ನು ಎತ್ತಿ ಹಿಡಿದಂತೆ ಗಾಝದ ವಂಶಹತ್ಯೆ ಯುದ್ಧ ವಿರಾಮ ಘೋಷಣೆಯೊಂದಿಗೆ ಸ್ವಲ್ಪಮಟ್ಟಿಗೆ ತಹಬಂದಿಗೆ ಬಂದಂತೆ ಇಸ್ರೇಲಿನೊಳಗೆ ಪುನಃ ನೆತನ್ಯಾಹು ಮತ್ತು ಸರಕಾರದ ವಿರುದ್ಧ ಅಲ್ಲಿನ ಪ್ರತಿಪಕ್ಷಗಳು ಮತ್ತು ಜನತೆ ಪ್ರತಿಭಟನೆಯಲ್ಲಿ ಸಕ್ರಿಯವಾಗಿವೆ.

ಟ್ರಂಪ್ ಹೇಳಿ ಈಗ ನೆತನ್ಯಾಹು ಬಹಿರಂಗ ಕ್ಷಮೆಯಾಚಿಸಿದ್ದಾರೆ. ಈ ನವೆಂಬರ್ ತಿಂಗಳಲ್ಲಿ ಡೊನಾಲ್ಟ್ ಟ್ರಂಪ್ ಇಸ್ರೇಲ್ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಅಂದರೆ ಟ್ರಂಪ್ ಕಣ್ಣಲ್ಲಿ ನೆತನ್ಯಾಹು ಮಾಡಿದ್ದು ಭ್ರಷ್ಟಾಚಾರ ಅಲ್ಲ. ಅದಕ್ಕೆ ಶಿಕ್ಷೆಯಿಲ್ಲ. ನಿರ್ಣಾಯಕ ಯುದ್ಧ ಕಾಲದ ಪ್ರಧಾನಿಯಾಗಿ ದೇಶ ವನ್ನು ಮುನ್ನಡೆಸಿದ್ದಾರೆ. ಹೊಸ ಕಾಲದಲ್ಲಿ ಶಾಂತಿಯೆಡೆಗೆ ಸಾಗಿಸುತ್ತಿರುವ ಬೆಂಜಮಿನ್ ನೆತನ್ಯಾಹುರಿಗೆ ಸಂಪೂರ್ಣ ಕ್ಷಮೆ ನೀಡಬೇಕೆಂದು ಟ್ರಂಪ್ ಪತ್ರದಲ್ಲಿ ಬರೆದಿದ್ದಾರೆ. ಕಳೆದ ಅಕ್ಟೋಬರಿನಲ್ಲಿ ಇಸ್ರೇಲ್ ಪಾರ್ಲಿಮೆಂಟಿನಲ್ಲಿ ಭಾಷಣ ನೀಡಿದಾಗಲೂ ನೆತನ್ಯಾಹುಗೆ ಕ್ಷಮೆ ನೀಡಬೇಕೆಂದು ಟ್ರಂಪ್ ಮನವಿ ಮಾಡಿದ್ದರು. ಆದರೆ ಇಸ್ರೇಲಿನ ಜನರಿಗೆ ಭ್ರಷ್ಟಾಚಾರ ಭ್ರಷ್ಟಾಚಾರವೇ ಆಗಿದೆ.

ಆದುದರಿಂದ ಈಗ, ಇಸ್ರೇಲಿನಲ್ಲಿ ನೆತನ್ಯಾಹು ವಿರುದ್ಧ ಪ್ರತಿಭಟನೆ ತೀವ್ರವಾಗಿ ನಡೆಯುತ್ತಿದೆ. ಪ್ರಧಾನಿ ಮತ್ತು ಅವರ ಪತ್ನಿ ಸಾರ ಸೇರಿ ಸಾರ್ವಜನಿಕ ಆಸ್ತಿಗಳನ್ನು ದೋಚಿ ಕೊಂಡಿದ್ದಾರೆ ಎಂದು ಇಸ್ರೇಲಿನ ಜನರು ಆಕ್ಷೇಪ ಎತ್ತುತ್ತಿದ್ದಾರೆ. ಈ ಆರೋಪ ಸರಿ ಎಂದು ಈಗ ಅವರು ಕ್ಷಮೆ ಯಾಚಿಸುವುದರೊಂದಿಗೆ ಸಾಬೀತಾಗಿದೆ. ಮಾತ್ರವಲ್ಲ ಇಸ್ರೇಲಿನ ಆಂತರಿಕ ವಿಷಯದಲ್ಲಿ ಅಮೆರಿಕ ನಡೆಸುತ್ತಿರುವ ಹಸ್ತಕ್ಷೇಪಕ್ಕೆ ಯಹೂದಿಗಳು ಬೇಸತ್ತಿದ್ದಾರೆ. ಜನರು ನೆತನ್ಯಾಹುರ ಕ್ಷಮೆ ಯಾಚನೆ ತಿರಸ್ಕರಿಸಬೇಕೆಂದು ಅಧ್ಯಕ್ಷರ ವಸತಿಯ ಮುಂದೆ ಬೃಹತ್ ಜನಸ್ತೋಮ ರ‍್ಯಾಲಿ ನಡೆಸಿದ್ದಾರೆ. ನೆತನ್ಯಾಹುರ ಕ್ಷಮೆಯಾಚನೆಯ ವಿಷಯದಲ್ಲಿ ಕಾನೂನಿನ ಸಲಹೆ ಪಡೆಯುವುದಾಗಿ ಅಧ್ಯಕ್ಷ ಹೆರ್‌ಸೊಗ್ ಹೇಳಿದ್ದಾರೆ. ತನ್ನ ಅಭಿಪ್ರಾಯವನ್ನು ಹೇಳಿಲ್ಲ. ಅಪರಾಧ ಎಸಗದ ವ್ಯಕ್ತಿ ಯಾಕೆ ಕ್ಷಮೆ ಯಾಚಿಸಬೇಕು ಅಥವಾ ಕ್ಷಮೆಗೆ ಪರಿಗಣಿಸಬೇಕಾದರೆ ಮೊದಲು ವಿಚಾರಣೆಗೆ ಹಾಜರಾಗಿ ಅಪರಾಧವನ್ನು ಒಪ್ಪಿಕೊಳ್ಳಬೇಕು ಎನ್ನುತ್ತಾ ನೆತನ್ಯಾಹುರ ಮಾಜಿ ಡಿಫೆನ್ಸ್ ಅಟಾರ್ನಿ ಮಿಕಾಹ್ ಫೆಟ್‌ಮೆನ್ ಮುಂದೆ ಬಂದಿದ್ದಾರೆ. ಹೀಗಾದರೆ ನೆತನ್ಯಾಹು ರಾಜಕೀಯಕ್ಕೆ ಗುಡ್‌ಬೈ ಹೇಳಬೇಕಾಗುವುದು.

ಇದರಲ್ಲಿ ಅಟಾರ್ನಿಯ ತಪ್ಪಿಲ್ಲ. ಅವರು ಪ್ರತಿಪಕ್ಷದ ಮತ್ತು ಸಾರ್ವಜನಿಕ ಭಾವನೆಯನ್ನು ಮುಂದಿಟ್ಟು ಹೀಗೆ ಹೇಳುತ್ತಿದ್ದಾರೆ. ಅಪರಾಧ ಒಪ್ಪುವುದು ಎಂದರೆ ಅದು ಪ್ರಧಾನಿ ಸ್ಥಾನ ಬಿಡು ವುದು. ಇದೊಂದೇ ಅವರ ಮುಂದಿ ರುವ ದಾರಿಯಾಗಿದೆ. ಪ್ರಧಾನಿ ಸ್ಥಾನ ತ್ಯಜಿಸುವುದಕ್ಕೆ ಸಿದ್ಧರಾಗುತ್ತಾರೆ ಎಂಬ ಭರವಸೆಯಲ್ಲಿ ಅಧ್ಯಕ್ಷರು ಕ್ಷಮೆ ನೀಡುವುದಾದರೆ ತನಗೆ ವಿರೋಧ ಇಲ್ಲ ಎಂದು ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಹೇಳುತ್ತಿದ್ದಾರೆ. ನೆತನ್ಯಾಹು ರಾಜೀನಾಮೆ ಕೊಟ್ಟರೆ ಅವರ ನಂತರ ನೆಫ್ತಾಲಿ ಪ್ರಧಾನಿಯಾಗಲಿದ್ದಾರೆ.

2020 ಮೇಯಲ್ಲಿ ಪ್ರಕರಣದಲ್ಲಿ ವಿಚಾರಣೆ ಆರಂಭಗೊಂಡಂದಿನಿಂದ ನೆತನ್ಯಾಹು ತಾನು ನಿರಪರಾಧಿ ಎಂದೇ ಬಿಂಬಿಸುತ್ತಾ ಬಂದಿದ್ದಾರೆ. ಸರಕಾರವನ್ನು ಬುಡಮೇಲುಗೊಳಿಸಲು ಪೊಲೀಸರು ಮತ್ತು ಪ್ರಾಸಿಕ್ಯೂಸನ್ ಸೇರಿ ಮಾಡಿದ ಸಂಚು ಇದು ಎಂದು ನೆತನ್ಯಾಹು ವಾದಿಸಿದ್ದರು. ಕಳೆದ ತಿಂಗಳ ಮೊದಲಲ್ಲಿ ಕ್ಷಮೆ ಕೇಳುವುದಿಲ್ಲ ಎಂದೇ ನೆತನ್ಯಾಹು ಹೇಳುತ್ತಿದ್ದರು. ಆದರೆ ಈಗ ನೂರಹನ್ನೊಂದು ಪುಟಗಳ ಕ್ಷಮೆ ಯಾಚನೆ ಪತ್ರ ಅಧ್ಯಕ್ಷರಿಗೆ ಒಪ್ಪಿಸಿದ್ದಾರೆ. ಇದರೊಂದಿಗೆ ಅಪರಾಧ ಒಪ್ಪಿ ರಾಜೀನಾಮೆ ಕೊಟ್ಟು ಹೊರಟು ಹೋಗಬೇಕು. ಇಲ್ಲದಿದ್ದರೆ ಕ್ಷಮಾಯಾಚನೆ ತಿರಸ್ಕೃತವಾದರೆ ವಿಚಾರಣೆ ಮತ್ತು ಶಿಕ್ಷೆಗೆ ಸಿದ್ಧರಾಗಬೇಕು. ಈಗ ನೆತನ್ಯಾಹು ಮುಂದಿರುವ ದಾರಿ ಇದೊಂದೇ.