ಅರಬ್ ಮುಸ್ಲಿಮರ ಬೆಂಬಲ ಪಡೆದ ಟ್ರಂಪ್ ಶಾಂತಿಯ ಪ್ರತಿಪಾದಕರಾಗಲಿದ್ದಾರಾ?

0
527

ಸನ್ಮಾರ್ಗ ವಾರ್ತೆ

✍️ಅಮಾನ್ ಕೆ.

ಅಮೆರಿಕನ್ನರು ಹೊಸಮುಖ ಕಮಲ ಹ್ಯಾರಿಸ್ ರನ್ನು ತಿರಸ್ಕರಿಸಲು ಕಾರಣ ಏನು? ಹಳೆ ಮುಖ ಟ್ರಂಪ್ ಗೆ ಬೆಂಬಲ ಸಾರಿದ್ದೇಕೆ? ಟ್ರಂಪ್ ಮತ್ತೆ ಅಧ್ಯಕ್ಷರಾಗುವುದರಿಂದ ಯಾರಿಗೆ ಲಾಭ? ಗಲ್ಫ್ ರಾಷ್ಟ್ರಗಳು ಟ್ರಂಪ್ ಆಯ್ಕೆಯನ್ನು ಬೆಂಬಲಿಸಿದ್ದೇಕೆ? ಇಸ್ರೇಲ್ ನ ಪರ ಎಂದು ಗುರುತಿಸಿಕೊಂಡಿರುವ ಟ್ರಂಪ್ ರ ಮುಂದಿನ ನಡೆ ಏನಿರಬಹುದು? ಮುಸ್ಲಿಂ ಜಗತ್ತಿನಲ್ಲಿ ನಿರಾಶಾಭಾವ ಕಾಣಿಸಿಕೊಳ್ಳದಿರಲು ಕಾರಣ ಏನು?

ಅಮೆರಿಕಾದ ಚುನಾವಣೆಯಲ್ಲಿ ಟ್ರಂಪ್ ಗೆದ್ದಿದ್ದಾರೆ. ಅಮೆರಿಕಾದ ಕಪ್ಪು ವರ್ಣೀಯರು ಅವರನ್ನು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸಿದ್ದಾರೆ. ಅರಬ್ ಮುಸ್ಲಿಮರ ಬೆಂಬಲವೂ ಅವರಿಗೆ ದಕ್ಕಿದೆ. ಇದೇವೇಳೆ ದಿ ಸ್ಕ್ವಾಡ್ ಎಂದು ಗುರುತಿಸಿಕೊಂಡಿರುವ ಫೆಲೆಸ್ತೀನಿ ಮೂಲದ ಇಲ್ಹಾಮ್ ಉಮರ್ ಮತ್ತು ರಾಶಿದ ತಾಲಿಬ್ ಗೆದ್ದಿದ್ದಾರೆ.

ಆದರೆ ಅವರ ಜೊತೆಗಾರರಲ್ಲಿ ಜಮಾಲ್ ಬೊಮನ್ ಮತ್ತು ಕೋರಿ ಬುಷ್ ಪರಾಜಯಗೊಂಡಿದ್ದಾರೆ. ಇಸ್ರೇಲ್ ಪರ ಹಣ ಸಂಗ್ರಹ ಮಾಡ್ತಾ ಇದ್ದ ಸಂಘಟನೆ ಇವರ ವಿರುದ್ಧ ಪ್ರಚಾರ ನಡೆಸಿತ್ತು. ದಿ ಸ್ಕ್ವಾಡ್ ಎಂಬ ಹೆಸರಲ್ಲಿ ಗುರುತಿಸಿಕೊಂಡಿದ್ದ 8 ಮಂದಿ ಸಂಸದರು ತಮ್ಮ ಇಸ್ರೇಲ್ ವಿರೋಧಿ ನೀತಿಗಾಗಿ ಸುದ್ದಿಯಲ್ಲಿದ್ದರು. ಟ್ರಂಪ್ ಅವರ ನಿಲುವಿನ ಪ್ರಭಲ ವಿರೋಧಿಗಳಾಗಿದ್ದರು. ಇವರ ಪ್ರತಿಭಟನಾ ಧ್ವನಿಯನ್ನು ಟ್ರಂಪ್ ಹೀಗಳೆಯುತ್ತಿದ್ದರು. ಬೈಡೆನ್ ಸರಕಾರದ ಸಂಸದರಾಗಿದ್ದುಕೊಂಡೇ ಬೈಡನ್ ಅವರ ಇಸ್ರೇಲ್ ಪರ ನೀತಿಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದವರಲ್ಲಿ ಈ ಇಲ್ಹಾಮ್ ಉಮರ್ ಮತ್ತು ರಾಶಿದಾ ಮುಖ್ಯವಾಗಿದ್ದಾರೆ. ಇವರಿಬ್ಬರು ಗೆದ್ದಿದ್ದರೂ ಇವರ ಜೊತೆಗಾರರಲ್ಲಿ ಹೆಚ್ಚಿನವರು ಸೋಲೊಪ್ಪಿಕೊಂಡದ್ದು ಅಮೇರಿಕಾದಲ್ಲಿ ಇಸ್ರೇಲ್ ಪರ ಲಾಭಿ ಎಷ್ಟು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ ಅನ್ನೋದನ್ನ ಸೂಚಿಸುತ್ತದೆ.

ಈ ಹಿಂದೆ ಅಧ್ಯಕ್ಷರಾಗಿದ್ದ ವೇಳೆ ಟ್ರಂಪ್ ಜೆರುಸಲೇಮ್ ಗೆ ಇಸ್ರೇಲ್ ನ ರಾಜಧಾನಿಯಾಗಿ ಮಾನ್ಯತೆ ನೀಡಿದ್ದರು. ಇದು ನಡೆದಿರುವುದು 2017ರಲ್ಲಿ. 1967ರ ಯುದ್ಧದಲ್ಲಿ ಇಸ್ರೇಲ್ ಗೋಲಾನ್ ಬೆಟ್ಟವನ್ನು ಸಿರಿಯಾದಿಂದ ವಶಪಡಿಸಿಕೊಂಡಿತ್ತು. ಟ್ರಂಪ್ ಈ ಪ್ರದೇಶದ ಮೇಲಿನ ಇಸ್ರೇಲ್ ನ ಸಾರ್ವಭೌಮತೆಗೆ ಮಾನ್ಯತೆಯನ್ನ ನೀಡಿದ್ದರು. ಇರಾನ್ ಜೊತೆಗಿನ ಅಣು ಒಪ್ಪಂದದಿಂದ ಹಿಂದೆ ಸರಿದಿದ್ದರು. ಅಲ್ಲದೆ ಇಸ್ರೇಲ್ ಜೊತೆ ಅರಬ್ ರಾಷ್ಟ್ರಗಳ ಸಂಬಂಧವನ್ನು ಸಹಜಗೊಳಿಸುವುದಕ್ಕೆ ಅವರು ಯಶಸ್ವಿಯಾಗಿದ್ದರು. ಅರಬ್ ರಾಷ್ಟ್ರಗಳು ಇಸ್ರೇಲ್ ನ ಬಗ್ಗೆ ಮೃದು ನೀತಿಯನ್ನು ತಳೆಯುವುದಕ್ಕೆ ಕಾರಣವಾಗಿದ್ದರು. ಮಾತ್ರ ಅಲ್ಲ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರದ ಕೂಗನ್ನು ಬಹುತೇಕ ಮಟ್ಟ ಹಾಕಿದ್ದರು. ತಾನು ಅಧ್ಯಕ್ಷನಾಗಿ ಆಯ್ಕೆಯಾದ ತಕ್ಷಣ ಮೊಟ್ಟಮೊದಲ ವಿದೇಶಿ ಪ್ರವಾಸವನ್ನು ಸೌದಿಗೆ ಮಾಡುವ ಮೂಲಕ ಅವರು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದರು. ಇರಾನ್ ವಿರುದ್ಧ ಸೌದಿ ಮತ್ತು ಅರಬ್ ರಾಷ್ಟ್ರಗಳನ್ನು ಎತ್ತಿ ಕಟ್ಟಿದ್ದರು. ಇದೇ ವೇಳೆ ನಾನು ಅಧಿಕಾರದಲ್ಲಿ ಇರುತ್ತಿದ್ದರೆ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡುತ್ತಿರಲಿಲ್ಲ ಎಂದೂ ಮೊನ್ನೆ ಮೊನ್ನೆ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು.

ಇದೀಗ ಟ್ರಂಪ್ ಮರಳಿ ಅಧಿಕಾರಕ್ಕೆ ಏರಿದ್ದಾರೆ. ನೆತನ್ಯಾಹು ಅಪಾರ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ನಿಜವಾಗಿ ಫೆಲೆಸ್ತೀನ್ ಗೆ ಸಂಬಂಧಿಸಿ ಬೈಡನ್ ನೀತಿ ಅತ್ಯಂತ ಏಕಮುಖವಾಗಿತ್ತು. ಅಪಾಯಕಾರಿಯಾಗಿತ್ತು ಮತ್ತು ಅಸಹಾಯಕತೆಯಿಂದಲೂ ಕೂಡಿತ್ತು. ಆದ್ದರಿಂದ ಟ್ರಂಪ್ ಆಯ್ಕೆಯ ಬಗ್ಗೆ ನಿರಾಶೆ ವ್ಯಕ್ತಪಡಿಸುವಂತದ್ದೇನೂ ಇಲ್ಲ. ಫೆಲೆಸ್ತೀನ್ ಈಗಾಗಲೇ ಅನುಭವಿಸಬೇಕಾದ ಸಂಕಟವನ್ನೆಲ್ಲ ಅನುಭವಿಸಿಯಾಗಿದೆ. ಟ್ರಂಪ್ ಬಂದು ಅದನ್ನು ಹೆಚ್ಚು ಗೊಳಿಸುವುದಕ್ಕೆ ಅಲ್ಲಿ ಏನೇನೂ ಉಳಿದಿಲ್ಲ. ಆದ್ದರಿಂದಲೇ ಟ್ರಂಪ್ ಗೆಲುವಿನಲ್ಲಿ ಆಶಾವಾದವನ್ನು ಇಟ್ಟುಕೊಳ್ಳಬಹುದು. ಅವರು ಇಸ್ರೇಲ್ ಮತ್ತು ಫೆಲೆಸ್ತೀನ್ ಯುದ್ಧವನ್ನು ಸ್ಥಗಿತಗೊಳಿಸುವುದಕ್ಕೆ ಮುಂದಾಗಬಹುದು. ಅವರಿಗೆ ಖ್ಯಾತಿಯ ಹುಚ್ಚು ಇದೆ. ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಬೇಕೆಂಬ ಬಯಕೆಯೂ ಇದೆ. ಹಾಗೆಯೇ ಪುಟಿನ್ ಜೊತೆಗೆ ಒಳ್ಳೆಯ ಸಂಬಂಧವೂ ಇದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಅವರು ಇಸ್ರೇಲ್ ಫೆಲೆಸ್ತೀನಿ ಲೆಬನಾನ್ ಸಂಘರ್ಷವನ್ನು ಕೊನೆಗೊಳಿಸುವುದಕ್ಕೆ ಮುಂದಾಗಬಹುದು. ಉಕ್ರೇನ್ ಮತ್ತು ರಷ್ಯಾ ನಡುವಿನ ಘರ್ಷಣೆಯನ್ನು ನಿಲ್ಲಿಸುವುದಕ್ಕೂ ಮಧ್ಯಸ್ಥಿಕೆ ವಹಿಸಬಹುದು. ಇದರ ಜೊತೆಗೆ ಇರಾನ್ ವಿರುದ್ಧ ಇನ್ನಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಇರಾನ್ ತೈಲ ರಫ್ತಿನ ವಿರುದ್ಧ ಇನ್ನಷ್ಟು ನಿರ್ಬಂಧವನ್ನು ಅವರು ಹೇರಬಹುದು.

ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಬೈಡನ್ ಪರ ಅನೇಕರು ಒಲವು ವ್ಯಕ್ತಪಡಿಸಿದ್ದರು. ಅವರ ವಿಕ್ಷಿತ ಸ್ವಭಾವಕ್ಕಿಂತ ಬೈಡನ್ ಅವರ ತಾಳ್ಮೆಯ ಸ್ವಭಾವ ಉತ್ತಮ ಎಂದು ಅಂದುಕೊಂಡಿದ್ದರು. ಆದರೆ ಬೈಡನ್ ಉದ್ದಕ್ಕೂ ಟ್ರಂಪ್ ಗಿಂತಲೂ ಕ್ರೂರಿಯಂತೆ ವರ್ತಿಸಿದ್ದಾರೆ. ಕಮಲ ಹ್ಯಾರಿಸನ್ನು ಬೆಂಬಲಿಸುವುದೆಂದರೆ ಬೈಡನ್ ನೀತಿಯ ಮುಂದುವರಿಕೆಗೆ ಅವಕಾಶ ಮಾಡಿಕೊಟ್ಟಂತೆ ಎಂದು ಅಮೆರಿಕನ್ನರು ಭಾವಿಸಿರಬಹುದು. ನಿರ್ಧಾರಗಳಲ್ಲಿ ಸ್ಪಷ್ಟತೆ ಇಲ್ಲದ ಮತ್ತು ದೃಢವಾಗಿಲ್ಲದ ಬೈಡನ್ ನೀತಿಯ ಮುಂದುವರಿಕೆಗಿಂತ ಟ್ರಂಪ್ ಉತ್ತಮ ಎಂದು ಅಮೆರಿಕನರು ಭಾವಿಸಿರಬಹುದು. ಬೈಡನ್ ವಿದೇಶ ನೀತಿಯನ್ನು ನೋಡಿದ ಯಾರು ಕೂಡ ಟ್ರಂಪ್ ಆಯ್ಕೆಯ ಬಗ್ಗೆ ವಿಷಾದ ವ್ಯಕ್ತಪಡಿಸುವ ಸಾಧ್ಯತೆ ಇಲ್ಲ.

ಬೈಡನ್ ಕಾಲದಲ್ಲಿ ಅರಬ್ ರಾಷ್ಟ್ರಗಳಲ್ಲಿ ಆಗಿರುವ ಮಹತ್ವದ ಬದಲಾವಣೆ ಏನೆಂದರೆ ಇರಾನ್ ಮತ್ತು ಸೌದಿ ಅರೇಬಿಯಾದ ನಡುವೆ ಸಂಭಂದ ಗಟ್ಟಿಯಾಗಿರುವುದು, ಈಗ ಟ್ರಂಪ್ ಅವಧಿಯಲ್ಲಿ ಈ ಸಂಬಂಧಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆ ಇದೆ. ಅರಬ್ ರಾಷ್ಟ್ರಗಳ ನಡುವೆ ಒಡಕು ಮೂಡಿಸಿ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರದ ದ್ವನಿ ಏಳದಂತೆ ತಡೆಯುತ್ತಾರಾ ನೋಡಬೇಕಿದೆ. ಗಾಝಾ ಮತ್ತು ಲೆಬನಾನ್ ಮೇಲಿನ ಇಸ್ರೇಲ್ ದಾಳಿಯನ್ನು ಸ್ಥಗಿತಗೊಳಿಸಿ ಇರಾನ್ ಮೇಲೆ ಜಾಗತಿಕ ದೃಷ್ಟಿಬೀಳುವಂತೆ ಮಾಡುತ್ತಾರಾ ಅನ್ನುವ ಪ್ರಶ್ನೆಯೂ ಇದೆ. ಇಸ್ರೇಲ್ ನ ಮೂಲಕ ಇರಾನ್ ಮೇಲೆ ದಾಳಿ ಮಾಡಿಸುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ.

ಅಂತೂ ಬೈಡನ್ ಆಡಳಿತವನ್ನು ನೋಡುವುದಾದರೆ ಟ್ರಂಪ್ ಬರಲೇಬೇಕಿತ್ತು. ಬೈಡನ್ ಅಧಿಕಾರ ಅವಧಿಯಲ್ಲಿ ಹೇಳಿಕೊಳ್ಳುವಂತಹ ಜಾಗತಿಕ ಪರಿವರ್ತನೆಗಳೇನೂ ನಡೆದಿಲ್ಲ. ಅವರು ಇರುವುದನ್ನು ಮುಂದುವರಿಸಿಕೊಂಡು ಹೋದರು. ಇಸ್ರೇಲ್ ಫೆಲೆಸ್ತೀನ್ ಸಮಸ್ಯೆಗೆ ಯಾವ ಪರಿಹಾರವನ್ನು ಅವರಿಂದ ಮಾಡಲಾಗಲಿಲ್ಲ. ಯೂಕ್ರೆನ್ ರಷ್ಯಾ ಸಂಘರ್ಷಕ್ಕೂ ಅವರಲ್ಲಿ ಪರಿಹಾರ ಇರಲಿಲ್ಲ. ಒಬ್ಬ ಅಸಹಾಯಕ ವ್ಯಕ್ತಿಯಾಗಿ ಅವರು ಉದ್ದಕ್ಕೂ ಕಾಣಿಸಿದ್ದಾರೆ. ಇದಕ್ಕಿಂತ ಟ್ರಂಪ್ ಉತ್ತಮ. ಅವರು ಹೇಳುವುದನ್ನು ನೇರವಾಗಿ ಹೇಳುತ್ತಾರೆ. ಅದ್ದರಿಂದ ಅವರ ಬಗ್ಗೆ ನಿರಾಶೆ ಪಡುವಂತದ್ದೇನೂ ಇಲ್ಲ.