ಸನ್ಮಾರ್ಗ ವಾರ್ತೆ
ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಂಗಾಳದ ಕೊಡುಗೆ ಅಪಾರ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಗಾಳ ಇಲ್ಲದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ಎಂದೂ ಹೇಳಿದರು.
ರಬೀಂದ್ರನಾಥ ಟ್ಯಾಗೋರ್, ನಜ್ರುಲ್ ಇಸ್ಲಾಂ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ಮಹಾನ್ ವ್ಯಕ್ತಿಗಳನ್ನು ಬಂಗಾಳದ ಮಣ್ಣು ಸೃಷ್ಟಿಸಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ದೇಶದ ರಾಷ್ಟ್ರಗೀತೆ ಮತ್ತು ‘ಜೈ ಹಿಂದ್’ ಘೋಷಣೆ ಕೂಡ ಬಂಗಾಳಿಗಳ ಕೊಡುಗೆ ಎಂದು ಅವರು ತಿಳಿಸಿದರು. ಪೋರ್ಟ್ ಬ್ಲೇರ್‌ನ ಸೆಲ್ಯುಲಾರ್ ಜೈಲಿನಲ್ಲಿನ ಶೇ 70ರಷ್ಟು ಕೈದಿಗಳು ಬಂಗಾಳಿಗಳಾಗಿದ್ದರು ಎಂದು ಅವರು ಉದಾಹರಣೆ ನೀಡಿದರು.
ಇತ್ತೀಚೆಗೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ವಲಸೆ ಕಾರ್ಮಿಕರ ವಿರುದ್ಧ ‘ಭಾಷಾ ಭಯೋತ್ಪಾದನೆ’ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದು, ನೋಯ್ಡಾದ ಹೋಟೆಲ್‌ನಲ್ಲಿ ಬಂಗಾಳಿ ಭಾಷೆ ಮಾತನಾಡಿದ್ದಕ್ಕೆ ತಂದೆ-ಮಗನಿಗೆ ಉಳಿಯಲು ಅವಕಾಶ ನೀಡಲಿಲ್ಲ ಎಂದು ನನಗೆ ಗೊತ್ತಾಗಿದೆ. ನಾವು ನಿಮ್ಮ ಭಾಷೆಯನ್ನು ಗೌರವಿಸುತ್ತಿರುವಾಗ, ನೀವು ನಮ್ಮ ಭಾಷೆಯನ್ನು ಏಕೆ ಗೌರವಿಸುವುದಿಲ್ಲ ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ, ಬಂಗಾಳಕ್ಕೆ ಬರಬೇಕಾದ ನಿಧಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದೂ ಅವರು ಆರೋಪಿಸಿದರು. ಉನ್ನತ ಶಿಕ್ಷಣ ವಿದ್ಯಾರ್ಥಿವೇತನವನ್ನು ನಿರ್ಬಂಧಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಅವರು ಟೀಕಿಸಿದರು. ವಿಭಜನೆಯ ನಂತರ ದೇಶಕ್ಕೆ ಬಂದವರೆಲ್ಲರೂ ಈ ದೇಶದ ಪ್ರಜೆಗಳು. ದೇಶದ ಎಲ್ಲರೂ ಸಂಕುಚಿತ ಮನಸ್ಸನ್ನು ತ್ಯಜಿಸಬೇಕು. ಬಂಗಾಳ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿನಿಧಿಸುತ್ತದೆ ಎಂದು ಅವರು ತಿಳಿಸಿದರು.












