ಲಿಫ್ಟ್‌ನಲ್ಲಿ ಮಗುವಿನ ಮೇಲೆ ದಾಳಿ ಮಾಡಿದ ಸಾಕು ನಾಯಿ: ಮಾಲಕಿಗೆ 5000 ರೂ. ದಂಡ

0
347

ಸನ್ಮಾರ್ಗ ವಾರ್ತೆ

ಲಕ್ನೋ: ಉತ್ತರ ಪ್ರದೇಶದ ಗಾಝಿಯಾಬಾದ್‌ನ ಹೌಸಿಂಗ್ ಸೊಸೈಟಿಯೊಂದರಲ್ಲಿ ಲಿಫ್ಟ್‌ನೊಳಗೆ ಸಾಕಿದ ನಾಯಿಯೊಂದು ಮಗುವಿನ ಮೇಲೆ ದಾಳಿ ಮಾಡಿದ ಘಟನೆಯಲ್ಲಿ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಾಯಿಯ ಮಾಲಕಿಗೆ 5000 ರೂಪಾಯಿ ದಂಡ ವಿಧಿಸಿದೆ.

ಟ್ವಿಟರ್ ಪೋಸ್ಟ್ ಪ್ರಕಾರ, ಈ ಘಟನೆ ಸೋಮವಾರ ರಾಜನಗರ ವಿಸ್ತರಣೆಯಲ್ಲಿರುವ ಚಾರ್ಮ್ಸ್ ಕ್ಯಾಸಲ್ ಸೊಸೈಟಿಯಲ್ಲಿ ನಡೆದಿದ್ದಾಗಿ ವರದಿಯಾಗಿತ್ತು. ವೀಡಿಯೊದಲ್ಲಿ, ನಾಯಿಯ ಮಾಲಕಿ ನೋಡು ನೋಡುತ್ತಿದ್ದಂತೆ ನಾಯಿ ಮಗುವಿನ ಮೇಲೆ ಹಾರಿ ಕಚ್ಚಿತ್ತು.

“ಲಿಫ್ಟ್‌ನಲ್ಲಿ ಮಗುವಿಗೆ ಕಚ್ಚಿದ್ದು ಸಾಕು ನಾಯಿಯಾಗಿತ್ತು. ಮಗು ನೋವಿನಿಂದ ಬಳಲುತ್ತಿದ್ದರೂ ಸಾಕು ಪ್ರಾಣಿಯ ಮಾಲಕಿ ನೋಡುತ್ತಾ ನಿಂತಿದ್ದಾರೆ” ಎಂಬ ಬರಹದೊಂದಿಗೆ ಟ್ವಿಟ್ಟರ್ ಬಳಕೆದಾರರೊಬ್ಬರು ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದರು.

ದೃಶ್ಯಾವಳಿಗಳು ವೈರಲ್ ಆದ ನಂತರ ಗಾಝಿಯಾಬಾದ್ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಪೋಷಕರ ದೂರಿನ ಮೇರೆಗೆ ನಂದಗ್ರಾಮ ಪೊಲೀಸ್ ಠಾಣೆಯು ಪೂರ್ವಭಾವಿ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದು ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.