ಲೇಖಕಿ: ಶಮೀರ ಜಹಾನ್
ಮಹಿಳೆ ಪುರುಷರಂತೆ ಉಡುಗೆ ಧರಿಸಿದ ಮಾತ್ರಕ್ಕೆ ಪುರುಷನಂತೆ ಆಗಲಾರಳು. ಹೆಣ್ಣಿನ ಆರೋಗ್ಯ ಮನೆ, ಕುಟುಂಬ, ಸಮಾಜ, ದೇಶದ ಆರೋಗ್ಯಕ್ಕೆ ಸಮ. ಉದ್ಯೋಗ ರಂಗಗಳಲ್ಲಿ ಹೆಣ್ಣು ಒತ್ತಡವನ್ನು ಅನುಭವಿಸುತ್ತಿರುವುದು ಖೇದಕರ. ಮಾಲ್ ಗಳಲ್ಲಿ ಉದ್ಯೋಗ ಮಾಡುವವರಿಗೆ ಕುರ್ಚಿಗಳೇ ಇರುವುದಿಲ್ಲ. ಎಂತಹ ಕ್ರೂರ ಸಂಸ್ಕೃತಿ!! ಹುಟ್ಟಿನಿಂದಲೇ ಗಂಡು ಹೆಣ್ಣಿನ ಪ್ರಕೃತಿಯಲ್ಲಿ ವ್ಯತ್ಯಾಸವಿರುತ್ತದೆ. ಹೆಣ್ಣಿನಲ್ಲಿ ತಾಯ್ತನಕ್ಕೆ ಬೇಕಾದ ಸೌಮ್ಯತೆ, ಸಹನಾಗುಣ, ವಿವೇಚನಾಶಕ್ತಿ ಇದ್ದರೆ ಗಂಡಿನಲ್ಲಿ ಬಾಹ್ಯ ಶಕ್ತಿಗಳಿಂದ ಕುಟುಂಬವನ್ನು ರಕ್ಷಿಸುವಂತಹ ದೇಹಧಾರ್ಢ್ಯತೆ,ಶಕ್ತಿ,ವಿವೇಚನೆ ಇರುತ್ತದೆ. ಇಂತಹ ವ್ಯತ್ಯಾಸ ಪಕ್ಷಿಗಳಲ್ಲಿಯೂ ಕಂಡು ಬರುತ್ತದೆ.ಪ್ರಕೃತಿಯ ವ್ಯವಸ್ಥೆಯೂ ಹಾಗೆಯೇ ಇದೆ. ಪ್ರವಾದಿಯವರು ಪ್ರಯಾಣದಲ್ಲಿರುವಾಗ ಮಹಿಳೆಯನ್ನು ಗಾಜು, ಮೆತ್ತಗೆ ಎಂದಿರುವರು.
ಮಹಿಳೆಯರ ಬಗ್ಗೆ ಮೃಧು ಧೋರಣೆ ತಾಳಬೇಕು ಎಂಬುದೇ ಇದರ ಅರ್ಥ. ವಾಹನಗಳಲ್ಲಿ,ಉದ್ಯೋಗ ಸ್ಥಳಗಳಲ್ಲಿ ಹೆಣ್ಣಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಡಬೇಕು.
ಒತ್ತಡಕ್ಕೆ ಅವಕಾಶ ಮಾಡಿಕೊಡಬಾರದು. ಅವಮಾನಿಸಬಾರದು. ಕಾರಣ ಆಕೆಗೆ ಕುಟುಂಬ ಪೋಷಣೆಯೂ ಇರುವುದರಿಂದ ಒತ್ತಡವು ಕುಟುಂಬದ ಮೇಲೆ ಪ್ರಭಾವ ಬೀರುವುದು. ಕುಟುಂಬ ಮಾನಸಿಕವಾಗಿ ಅನಾರೋಗ್ಯ ಪೀಡಿತವಾದರೆ ಸಮಾಜದ ಮೇಲೆ ಪ್ರಭಾವ ಬೀರುವುದು.ಪ್ರತೀ ಕುಟುಂಬ ದುರ್ಬಲವಾದರೆ ದೇಶವು ದುರ್ಬಲವಾಗುವುದು.
“ಸಮತೋಲನವನ್ನು ಕೆಡಿಸಬೇಡಿರಿ”
(ಕುರ್ ಆನ್)
“ನಿಮ್ಮ ಪತ್ನಿಯೊಂದಿಗೆ ಉತ್ತಮವಾಗಿರುವವನೇ ನಿಮ್ಮಲ್ಲಿ ಅತ್ಯುತ್ತಮನು”( ಪ್ರವಾದಿ ಮುಹಮ್ಮದ್ ಸ.ಅ)
ಪುರುಷನು ಮನೆಮಂದಿಗಾಗಿ ದುಡಿಯುವುದು ಕಡ್ಡಾಯ.(ಕುರ್ ಆನ್)
ಪ್ರವಾದಿ ದಾವೂದ್(ಅ) ಅರಸನಾಗಿದ್ದರೂ ತನ್ನ ಕೈಗಳಿಂದ ದುಡಿಯುತ್ತಿದ್ದರು.(ಪ್ರವಾದಿ ವಚನ)
ದುಂದುಗಾರರು ಶೈತಾನನ ಮಿತ್ರರಲ್ಲ; ಶೈತಾನನ ಸಹೋದರರು ಎಂದು ಕುರ್ ಆನ್ ಹೇಳಿರುವಾಗ ದುಂದುಗಾರರು ಶೈತಾನನಿಗೆ ಎಷ್ಟು ಹತ್ತಿರ ಎಂಬುದನ್ನು ಅರ್ಥಮಾಡಬೇಕು. ದುಡಿದ ಹಣವನ್ನು ಸೌಂದರ್ಯವರ್ಧಕಗಳಿಗೆ, ಬ್ಯೂಟಿ ಪಾರ್ಲರ್ ಗಳಿಗೆ ಖರ್ಚು ಮಾಡುವ ಮಹಿಳೆಯರೂ ಈ ಬಗ್ಗೆ ಆಲೋಚಿಸಬೇಕು. ಸೌಂದರ್ಯವರ್ಧಕಗಳಿಂದ ಆರೋಗ್ಯಕ್ಕೂ ಹಾನಿ. ನಮ್ಮ ಮೇಲೆ ಆರೋಗ್ಯದ ಹಕ್ಕೂ ಇದೆ.
ಮನೆಯಲ್ಲಿಯೂ, ಬಾಹ್ಯ ಪ್ರಪಂಚದಲ್ಲಿ,ಉದ್ಯೋಗ ಸ್ಥಳಗಳಲ್ಲಿ ಮಹಿಳೆ ಅನುಭವಿಸುವ ಒತ್ತಡ, ಅಸಮಾನತೆಯು ಗುಲಾಮಗಿರಿಯ ಭಾಗವೇ ಆಗಿದೆ.
“ಹೆಣ್ಣು ಉತ್ತಮಳಾದರೆ ಸಮಾಜ ಉತ್ತಮವಾಗುತ್ತದೆ. ಸಮಾಜ ಉತ್ತಮವಾದರೆ ದೇಶ ಉತ್ತಮವಾಗುತ್ತದೆ. ದೇಶ ಉತ್ತಮವಾದರೆ ರಾಷ್ಟ್ರ ಉತ್ತಮವಾಗುತ್ತದೆ.”
-ಸ್ವಾಮಿ ವಿವೇಕಾನಂದ