ಕಲಬುರ್ಗಿ To ಮಂಗಳೂರು: ನಿರುದ್ಯೋಗ, ಬೆಲೆ ಏರಿಕೆ ಖಂಡಿಸಿ ವೆಲ್ಫೇರ್ ಪಾರ್ಟಿಯಿಂದ ಜನಜಾಗೃತಿ ಜಾಥ

0
496

ಸನ್ಮಾರ್ಗ ವಾರ್ತೆ

ಬೆಂಗಳೂರು: ಇಂದು ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆದೋರಿವೆ. ಅದರಲ್ಲಿ ಬಹುಮುಖ್ಯವಾಗಿ ಬೆಲೆ ಏರಿಕೆ ಮತ್ತು ನಿರುದ್ಯೋಗ, ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ನರಕ ಸದೃಶ್ಯವಾಗಿದೆ. ಬಡಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ, ಆದಾಯ ಪಾತಾಳಕ್ಕೆ ಕುಸಿದಿದೆ.

ಬೆಲೆ ಏರಿಕೆ ಮತ್ತು ನಿರುದ್ಯೋಗದ ಕುರಿತು ಅಕ್ಟೋಬರ್ 15 ರಿಂದ 31ರವರೆಗೆ “ದೇಶದೆಲ್ಲಡೆ ಹಾಹಾಕಾರ-ನಿರುದ್ಯೋಗ ಬೆಲೆ ಏರಿಕೆಗೆ ಎಂದು ಪರಿಹಾರ” ಎಂಬ ಘೋಷ ವ್ಯಾಕ್ಯದೊಂದಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ ಆಂದೋಲನವನ್ನು ಹಮ್ಮಿಕೊಂಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೇರ್ ಹುಸೇನ್ ತಿಳಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಂದೋಲನದ ಸಂಧರ್ಭದಲ್ಲಿ ಕಲ್ಯಾಣ ಕರ್ನಾಟಕದ ಹೃದಯವಾದ ಕಲಬುರ್ಗಿಯಿಂದ ಮಂಗಳೂರಿನವರೆಗೆ ಜನ ಜಾಗೃತಿ ಜಾಥಾ ನಡೆಯಲಿದೆ ಎಂದು ಹೇಳಿದರು.

ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಬಿಕ್ಕಟ್ಟು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ಕೂಡಲೇ ಪರಿಹಾರ ಕ್ರಮ ತೆಗೆದುಕೊಳ್ಳಬೇಕು. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ತೆ ನೀಡಬೇಕು. ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಬಡವರಿಗೆ ಅವರ ಖರೀದಿ ಸಾಮರ್ಥ್ಯವನ್ನು ಸಕ್ರೀಯಗೊಳಿಸಲು ಹಣ ನೀಡಬೇಕು. ಎಲ್ಲಾ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಉಚಿತ ಸಿಲಿಂಡರ್ ಮತ್ತು ಸಬ್ಸಿಡಿ ರಿಫಿಲ್ ಸಿಲಿಂಡರ್ ಗಳು ನೀಡಬೇಕು. ಅಪೌಷ್ಟಿಕತೆ ಮತ್ತು ಹಸಿವು ತಡೆಯಲು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅನ್ನ ರೋಜ್‌ಗಾರ್ ಯೋಜನೆ ಮುಂದುವರೆಸಬೇಕು. ಅಸಂಘಟಿತ ವಲಯಗಳನ್ನು ಸಂಘಟಿಸಬೇಕು ಮತ್ತು ಭದ್ರತೆಗಳನ್ನು ನೀಡಬೇಕು. ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ಮತ್ತು ಭದ್ರತೆ ನೀಡಬೇಕು. ಕಾಳ ಸಂತೆ ಮತ್ತು ಭ್ರಷ್ಟಾಚಾರವನ್ನು ತಡೆಯಲು ಸೂಕ್ತ ಕಾನೂನು ಜಾರಿಗೊಳಿಸಬೇಕು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಈ ಆಂದೋಲನದ ಸಂದರ್ಭದಲ್ಲಿ ಆಗ್ರಹಿಸಿಲಾಗುವುದು.

ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಮುಂದಾಗಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಆಂದೋಲನ ಎಲ್ಲರೂ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಬೇಕು. ಜಾಥಾ ಸಂದರ್ಭದಲ್ಲಿ ಸಾರ್ವಜನಿಕ ಸಭೆ, ಬೈಕ್ ರ್ಯಾಲಿ, ಪತ್ರಿಕಾಗೋಷ್ಠಿ, ಬೀದಿ ನಾಟಕಗಳ ಮೂಲಕ ಜನ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತದೆ. ಜನಕಲ್ಯಾಣ ಬಿಟ್ಟು ಸ್ವಾರ್ಥದಲ್ಲಿ ಮುಳುಗಿರುವ ಸರಕಾರಕ್ಕೆ ಎಚ್ಚರಿಕೆ ನೀಡಲು ನಮ್ಮೊಂದಿಗೆ ಕೈಜೋಡಿಸಿ ಎಂದು ತಾಹೇರ್ ಹುಸೇನ್ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲ ಖಾನ್, ಖಜಾಂಜಿ ರಿಯಾಜ್ ಪಾಷಾ ಉಪಸ್ಥಿತರಿದ್ದರು.