ಬೆದರಿದ ಬಿಜೆಪಿಯಿಂದ ತೇಜಸ್ವಿ ಸೂರ್ಯ ಮೂಲಕ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ: ವೆಲ್ಫೇರ್ ಪಾರ್ಟಿ ಉಡುಪಿ ಜಿಲ್ಲಾಧ್ಯಕ್ಷ ಅಝೀಝ್ ಉದ್ಯಾವರ

0
487

ಸನ್ಮಾರ್ಗ ವಾರ್ತೆ

ಉಡುಪಿ : ಕರೋನಾ ನಿರ್ವಣೆಯ ಸಂಪೂರ್ಣ ವೈಫಲ್ಯದ ಕಾರಣ ಚಾಮರಾಜನಗರದ 28 ಜನರ ಸಾವು ಅಲ್ಲದೆ ರಾಜ್ಯಾದ್ಯಂತ ಅರೋಗ್ಯ ವ್ಯವಸ್ಥೆಯಲ್ಲಿ ದೌರ್ಬಲ್ಯಗಳಿಂದ ಉಂಟಾಗಿರುವ ಜನಾಕ್ರೋಶದಿಂದ ಅಲುಗಾಡುತ್ತಿರುವ ರಾಜ್ಯ ಸರಕಾರವನ್ನು ಉಳಿಸಲು, ಬೆಂಗಳೂರು ದಕ್ಷಿಣ ವಲಯದ ವಾರ್ ರೂಮ್’ನ ಮೇಲೆ ಬೆಡ್ ಬ್ಲಾಕಿಂಗ್ ವಿರುದ್ಧ ನಕಲಿ ಕಾರ್ಯಾಚರಣೆಯನ್ನು ಸಂಸದ ತೇಜಸ್ವಿ ಸೂರ್ಯ ಜೊತೆ ಶಾಸಕ ಸತೀಶ ರೆಡ್ಡಿ ಮತ್ತು ರವಿಸುಬ್ರಹ್ಮಣ್ಯರೊಂದಿಗೆ ನಡೆಸಿ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದೇ ಹಳಸಲು ಕೋಮುದ್ವೇಷ ಅಸ್ತ್ರವನ್ನು ತನ್ನ ಬತ್ತಳಿಕೆಯಿಂದ ಹೊರತೆಗೆದಿದೆ.

ಈ ಕಾರ್ಯಾಚರಣೆ ನಕಲಿ ಎಂಬುದು ಈಗಾಗಲೇ ಸಾಬೀತಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಈ ಮೂವರ ಪೈಕಿ ಖುದ್ದು ಸತೀಶ ರೆಡ್ಡಿಯೇ ಬೆಡ್ ಬ್ಲಾಕಿಂಗ್’ನಲ್ಲಿ ನೇರವಾಗಿ ಶಾಮೀಲಾಗಿರುವುದು ವಿಜಯ ಕರ್ನಾಟಕ ದಿನಪತ್ರಿಕೆ ತನ್ನ ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಬೆಳಕಿಗೆ ತಂದಿದೆ. ಅಕ್ರಮ ಬೆಡ್ ಬ್ಲಾಕಿಂಗ್’ಗೆ ಸಂಬಂಧಪಟ್ಟಂತೆ ಈ ಮೂವರೊಂದಿಗೆ ಇನ್ನೂ 5 ಜನ ಮುಸ್ಲಿಮೇತರರೂ ಇದುವರೆಗೆ ಬಂಧಿಸಲ್ಪಟಿದ್ದಾರೆ.

206 ಸಿಬ್ಬಂದಿಯಿರುವ ಬೆಂಗಳೂರು ದಕ್ಷಿಣ ವಲಯದ ವಾರ್ ರೂಮ್’ನ ಪಟ್ಟಿಯಿಂದ ಕೇವಲ 17 ಮುಸ್ಲಿಮರ ಹೆಸರನ್ನು ದುರುದ್ದೇಶ ಪೂರ್ವಕವಾಗಿ ಹೆಕ್ಕಿತೆಗೆದು ಸಾಲು ಸಾಲಾಗಿ ಓದಿಹೇಳಿ ತನ್ನ ಸಂಕುಚಿತತೆಯನ್ನು ಹೊರಹಾಕಿದ್ದಾರೆ. ಬಿಜೆಪಿ ಸರಕಾರದ ವಿರುದ್ಧ ಸಿಡಿದೆದ್ದ ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನಷ್ಟೇ ಮಾಡಿದ್ದಾರೆ ಸಂಸದ ತೇಜಸ್ವಿ ಸೂರ್ಯ.

ಯಾವ ತಪ್ಪಿಗಾಗಿ ಈ ಶಿಕ್ಷೆ ?..

ಕರೋನಾದಿಂದ ಮೃತಪಟ್ಟ ಮೃತದೇಹಗಳನ್ನು ರಕ್ತ ಸಂಬಂಧಿಗಳು, ಕುಟುಂಬಸ್ಥರೇ ಮುಟ್ಟಲು ಹಿಂಜರಿಯುತ್ತಿರುವ ಈ ಭಯಾನಕ ವಾತಾವರಣದಲ್ಲಿಮುಸ್ಲಿಮ್ ಸಂಘಟನೆಯ ಯುವಕರು ಜಾತಿ-ಮತ ಭೇದವಿಲ್ಲದೆ, ಪ್ರಾಣದ ಹಂಗು ತೊರೆದು ಶವ ಸಂಸ್ಕಾರದಲ್ಲಿ ಭಾಗಿಯಾಗುತ್ತಿರುವುದಕ್ಕೆ ಈ ಶಿಕ್ಷೆಯೇ ?..
ಈ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಹಸಿವು ನೀಗಿಸಲು ಹಗಲು-ರಾತ್ರಿ ಪ್ರಯತ್ನ ಪಡುತ್ತಿದ್ದಾರಲ್ಲಾ ಮುಸ್ಲಿಮ್ ಯುವಕರು ಅದಕ್ಕಾಗಿ ಈ ಶಿಕ್ಷೆಯೇ ?..
ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಜೊತೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ ಅವೆಲ್ಲವನ್ನೂ ಬದಿಗಿಟ್ಟು, ಈ ಸಂಕಷ್ಟದ ಸಮಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸರಕಾರಕ್ಕೆ ಸಾಥ್ ಕೊಡಬೇಕೆಂದು ಸ್ವ-ಇಚ್ಛೆಯೊಂದಿಗೆ ಸ್ವಯಂ ಸೇವಕರಾಗಿ ಜಿಲ್ಲಾಡಳಿತದೊಂದಿಗೆ ಸಂಪೂರ್ಣ ಸಹಕಾರ ಕೊಡುತ್ತಿರುವ ನಿಸ್ವಾರ್ಥ ಸೇವೆಗಾಗಿ ಈ ಶಿಕ್ಷೆಯೇ ?..

ಬೆನ್ನು ತಟ್ಟಬೇಕಾಗಿದ್ದ ಸರಕಾರ ಬೆನ್ನಿಗೆ ಚೂರಿ ಹಾಕುತ್ತಿದೆ.

ಸ್ವ- ಇಚ್ಛೆಯೊಂದಿಗೆ Volunteers ಆಗಿ ಜಿಲ್ಲಾಡಳಿತದೊಂದಿಗೆ ಸಂಪೂರ್ಣ ಸಹಕರಿಸುತ್ತಿರುವ ಮುಸ್ಲಿಂ ಸಂಘಟನೆಗಳ ಸತ್ಕಾರ್ಯವನ್ನು ಪ್ರಶಂಸಿಸಬೇಕಾಗಿದ್ದ ಸರಕಾರ, ತದ್ವಿರುದ್ಧವಾಗಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ.
ಎಲ್ಲೋ ಕರೋನಾ ಬಂದು ಮೃತಪಟ್ಟ ರೋಗಿಯ ದೇಹವನ್ನು ಶವಸಂಸ್ಕಾರ ಮಾಡಲು ಸಿಬ್ಬಂದಿಯ ಕೊರತೆ ಉಂಟಾಗಿ ಮೃತದೇಹವನ್ನು ಬೀದಿನಾಯಿಗಳು ಹರಿದು ತಿ‍ಂದರೆ ಸರಕಾರಕ್ಕೆ ಕೆಟ್ಟ ಹೆಸರಲ್ಲವೇ ? ಹೀಗಾಗಲು ಬಿಡದೇ ಸರಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿರುವ _ಮುಸ್ಲಿಮ್ ಯುವಕರನ್ನು ಖುದ್ದು ಸರಕಾರ ಪ್ರೋತ್ಸಾಹಿಸಬೇಕಲ್ಲವೇ? ಆಗುತ್ತಿರುವುದೇನು?

ಈ ಕರೋನಾ ವಿಪತ್ತನ್ನು ಪರಿಹರಿಸಲು ಮಾನವೀಯತೆಯನ್ನು ಮುಂದಿಟ್ಟುಕೊಂಡು ಸರಕಾರದ ಬೆನ್ನಿಗೆ ನಿಂತ ಮುಸ್ಲಿಮ್ ಸಮುದಾಯವನ್ನು ಕಟಕಟೆಗೆ ತಂದು ನಿಲ್ಲಿಸುವ ಕೆಲಸ ತೇಜಸ್ವಿಯ ಮೂಲಕ ಸರಕಾರ ಮಾಡಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯರನ್ನು ಮುಂದಿಟ್ಟುಕೊಂಡು ದುರುದ್ದೇಶ ಪೂರ್ವಕವಾಗಿ ದಕ್ಷಿಣ ವಲಯದ ವಾರ್ ರೂಂ ನಲ್ಲಿರುವ ಒಟ್ಟು 206 ಸಿಬ್ಬಂದಿಯ ಪೈಕಿ ಕೇವಲ 17 ಜನರು ಮುಸ್ಲಿಮರ ಹೆಸರುಗಳನ್ನು ಓದಿಸಿ ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿಸಿದೆ ಬಿಜೆಪಿ ಸರಕಾರ.

ಈ ಸಂಕಷ್ಟದ ಸಮಯದಲ್ಲಿ ಕೋಮುದಂಗೆ ಎದ್ದಿದ್ದರೆ ಅದನ್ನು ನಿಯಂತ್ರಿಸಲು ಸರಾಕರಕ್ಕೆ ಸಾಧ್ಯವಿದೆಯೇ ?

ದುರುದ್ದೇಶ ಪೂರ್ವಕವಾಗಿ ಮುಸ್ಲಿಮರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಕೋಮು ಸಾಮರಸ್ಯಕ್ಕೆ ಭಂಗ ತಂದು ಕೋಮು ಗಲಭೆಗೆ ಪ್ರಚೋದನೆ ಕೊಟ್ಟ ತೇಜಸ್ವಿಯ ಬಂಧನವಾಗಬೇಕು.
ಈ ಸಂಕಷ್ಟದ ಸಂದರ್ಭದಲ್ಲಿ ಕೋಮು ಪ್ರಚೋದನೆಯಿಂದ ಉದ್ರಿಕ್ತರಾದವರಿಂದ ಕೋಮುಗಲಭೆಗಳು ಆಗಿದ್ದಿದ್ದರೆ ಸರಕಾರಕ್ಕೆ ನಿಯಂತ್ರಿಸಲಾಗುತ್ತಿತ್ತೇ ? ಎಂಬುದನ್ನು ಈ ಸಮಯದಲ್ಲಿ ಗಮನಕ್ಕೆ ತೆಗೆದುಕೊಳ್ಳುವುದು ಸೂಕ್ತ. ಇದೊಂದು ಗಂಭೀರ ವಿಷಯವಾಗಿದ್ದು ತೇಜಸ್ವಿ ಸೂರ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ಆಗ್ರಹಿಸಿದ್ದಾರೆ.