ರಸ್ತೆಗೆ ಮಂಜೂರಾದ ಹಣ ಬೇರೆಡೆಗೆ ವರ್ಗಾವಣೆ: ಬಬ್ಬುಕಟ್ಟೆ- ಸೇವಂತಿಗುಡ್ಡೆ 19 ನೇ ವಾರ್ಡ್ ನ ನಾಗರಿಕರಿಂದ ಪ್ರತಿಭಟನೆ

0
934

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆಯ 19 ನೇ ವಾರ್ಡ್ ನ ರಸ್ತೆ ಅಭಿವೃದ್ಧಿಗೆ ಮಂಜೂರಾಗಿದ್ದ ಮೊತ್ತವನ್ನು ಉಸ್ತುವಾರಿ ಸಚಿವ ಯು ಟಿ ಕಾದರ್ ಅವರು ಬೇರೆ ವಾರ್ಡ್ ಗೆ ವರ್ಗಾಯಿಸಿರುವುದನ್ನು ಪ್ರತಿಭಟಿಸಿ ಇಲ್ಲಿನ ಬಬ್ಬುಕಟ್ಟೆ ಹಿರಾ ಕಾಲೇಜಿನ ಪ್ರವೇಶ ರಸ್ತೆಯ ಪಟ್ಲ ಹಾರ್ಡ್ ವೇರ್ ಮುಂಭಾಗದಲ್ಲಿ ನಾಗರಿಕರಿಂದ ಪ್ರತಿಭಟನೆ ನಡೆಯಿತು.

ಉಳ್ಳಾಲ ನಗರಸಭಾ ವ್ಯಾಪ್ತಿಯ ಬಬ್ಬುಕಟ್ಟೆ ಸೇವಂತಿಗುಡ್ಡೆ, ತಾರಿಪಡ್ಪು, ಕಲ್ಲಾಪು ಸಂಪರ್ಕ ರಸ್ತೆ ಅಭಿವೃದ್ದಿಗೆಂದು ಸರಕಾರದಿಂದ 50 ಲಕ್ಷ ರೂಪಾಯಿ ಮಂಜೂರಾಗಿದ್ದು, 2018, ಮಾರ್ಚ್ ನಲ್ಲಿ ಕ್ಷೇತ್ರದ ಶಾಸಕ ಯು ಟಿ ಕಾದರ್ ಗುದ್ದಲಿ ಪೂಜೆ ನಡೆಸಿದ್ದರು. ಆದರೆ ಆ ಬಳಿಕ ಉಳ್ಳಾಲ ನಗರ ಸಭೆಗೆ ಚುನಾವಣಾ ನಡೆದು ಈ 19 ನೇ ವಾರ್ಡ್ ನಲ್ಲಿ ಹಾಲಿ ಕಾಂಗ್ರೆಸ್ ಪ್ರತಿನಿಧಿ ಪರಾಜಯಗೊಂಡರಲ್ಲದೆ, ಪಕ್ಷೇತರ ಅಭ್ಯರ್ಥಿಯಾದ ಮುಸ್ತಾಕ್ ಪಟ್ಲ ಅವರು ಆಯ್ಕೆಯಾಗಿದ್ದರು. ಈ ಕಾರಣದಿಂದಲೇ, 2018, ನವಂಬರ್ ನಲ್ಲಿ ಶಾಸಕರು ಈ ಯೋಜನೆಯನ್ನು ಬೇರೆ ವಾರ್ಡ್ ಗೆ ವರ್ಗಾಯಿಸಿದ್ದಾರೆ ಎಂಬುದು ಈ ವಾರ್ಡ್ ನ ನಾಗರಿಕರ ದೂರು. ಈ ಕುರಿತಂತೆ ಮುಸ್ತಾಕ್ ಪಟ್ಲ ಪತ್ರಿಕಾ ಗೋಷ್ಠಿ ನಡೆಸಿರುವರಲ್ಲದೆ, ಜಿಲ್ಲಾಧಿಕಾರಿಗಳ ಗಮನಕ್ಕೆ ಮತ್ತು ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ ರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೂ ತಂದಿರುವರು. ಈ ಬಗ್ಗೆ ದಾಖಲೆಗಳನ್ನೂ ಅವರು ಬಿಡುಗಡೆಗೊಳಿಸಿದ್ದಾರೆ. ಪ್ರತಿಭಟನಾ ಸಭೆಯಲ್ಲಿ ಶಾಸಕರ ಕ್ರಮದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಶಾಸಕರು ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಲಾಯಿತು. 19 ನೇ ವಾರ್ಡ್ ಗೆ ಮಂಜೂರಾದ ಮೊತ್ತವನ್ನು ಶೀಘ್ರ ಮರಳಿಸುವ ಮೂಲಕ ರಸ್ತೆ ಕಾಮಗಾರಿ ಆರಂಭಕ್ಕೆ ಚಾಲನೆ ನೀಡದಿದ್ದರೆ, ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾದೀತೆಂದು ಎಚ್ಚರಿಸಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ, ಉಳ್ಳಾಲ ನಗರಸಭೆಯ 19 ನೇ ವಾರ್ಡ್ ನ ಸದಸ್ಯ ಮುಸ್ತಾಕ್ ಪಟ್ಲ, 18 ನೇ ವಾರ್ಡ್ ನ ಸದಸ್ಯ ದಿನಕರ್ ಉಳ್ಳಾಲ್, ಸೇವಂತಿಗುಡ್ಡೆಯ ಕೊರಗತನಿಯ ಸೇವಾ ಸಮಿತಿಯ ಕಾರ್ಯದರ್ಶಿ ಮೋಹನ್ ಸಾಲಿಯಾನ್ ಮತ್ತು ಏ ಕೆ ಕುಕ್ಕಿಲ ಮಾತಾಡಿದರು. ಸದ್ದಾಮ್ ಮೇಲಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು.