ಬಂದರ್ ರೋಡ್ ಒನ್‍ ವೇ ಘೋಷಣೆ: ಬೆಂಗರೆ ವೆಲ್ಫೇರ್ ಪಾರ್ಟಿಯ ಹೋರಾಟದ ಫಲ

0
991

ಮಂಗಳೂರು: ಕೆಲವು ದಿನಗಳ ಮೊದಲು ಬಂದರಿನ ಗೋಳಿಕಟ್ಟೆ ಬಝಾರ್‍ನಿಂದ BMD FERRY BOATನ ಬಂದರ್ ಬೋಟ್ ಜೆಟ್ಟಿಯವರೆಗೆ ಸಂಚರಿಸುವ ರಸ್ತೆಯಲ್ಲಿ, ದಿನವಿಡೀ ಎರಡೂ ಬದಿಯಲ್ಲಿ ಭಾರೀ ಗಾತ್ರದ ಘನ ವಾಹನಗಳನ್ನು ನಿಲ್ಲಿಸಿ ಸರಕುಗಳನ್ನು ಲೋಡ್-ಅನ್‍ಲೋಡ್ ಮಾಡಲಾಗುತ್ತಿತ್ತು. ಇದರಿಂದಾಗಿ, ದಿನಂಪ್ರತಿ ಟ್ರಾಫಿಕ್ ಜಾಮ್‍ಗಳು, ಪರಸ್ಪರ ವಾಗ್ವಾದಗಳು ಆಗುತ್ತಲೇ ಇದ್ದವು. ಈ ದಾರಿಯಲ್ಲಿ ಬೆಂಗರೆಯ 3,000ಕ್ಕಿಂತಲೂ ಹೆಚ್ಚು ಜನರು ಪ್ರತೀದಿನ ಸಂಚರಿಸುತ್ತಿದ್ದು, ಸಮಸ್ಯೆಯಿಂದಾಗಿ ಪಾದಾಚಾರಿಗಳು, ರಿಕ್ಷಾ ಚಾಲಕರು, ಲಘು ವಾಹನ ಸವಾರರು, ವಯಸ್ಕರು, ರೋಗಿಗಳು, ವಿದ್ಯಾರ್ಥಿಗಳು ಕಂಗೆಟ್ಟು ಹೋಗಿದ್ದರು. ಹಲವು ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ಹೋಗುವ ರೋಗಿಗಳಿರುವ ವಾಹನ ಟ್ರಾಫಿಕ್ ಜಾಮ್‍ನಲ್ಲಿ ಬಾಕಿಯಾಗಿ ಜೀವಕ್ಕೆ ಅಪಾಯವಾದದ್ದೂ ಇದೆ. ವಿದ್ಯಾರ್ಥಿಗಳಿರುವ ವಾಹನ ಬ್ಲಾಕ್‍ನಲ್ಲಿ ಬಾಕಿಯಾಗಿದದ್ದು ಇದೆ. ಕೆಲವೊಂದು ರಿಕ್ಷಾ ಚಾಲಕರು ಆ ಕಡೆ ಸವಾರಿಗೆ ಬರಲು ನಿರಾಕರಿಸುತ್ತಿದ್ದದ್ದು ಕೂಡಾ ಇದೇ ಕಾರಣದಿಂದಾಗಿತ್ತು.

ಇದನ್ನು ಅನುಭವಿಸುತ್ತಿದ್ದ ಹಾಗೂ ಇವೆಲ್ಲದರಿಂದ ರೋಸಿ ಹೋದ ಬೆಂಗರೆ ಜನತೆಯ ಅಹವಾಲಿನಂತೆ ವೆಲ್ಫೇರ್ ಪಾರ್ಟಿ ಬೆಂಗರೆ ಸಮತಿಯು ನಗರದ ಪೊಲೀಸ್ ಆಯುಕ್ತರಿಗೂ, ಅಪರ ಜಿಲ್ಲಾಧಿಕಾರಿಯವರಿಗೂ, BMD FERRY BOATನ ಬಂದರ್ ಬೋಟ್ ಜೆಟ್ಟಿಯಿಂದ ಗೋಳಿಕಟ್ಟೆ ಬಝಾರ್‍ವರೆಗಿನ ರಸ್ತೆಯಲ್ಲಿ ಘನ ವಾಹನಗಳನ್ನು ಒಂದು ಬದಿಯಲ್ಲಿ ನಿಲ್ಲಿಸಲು ಹಾಗೂ ಈ ರಸ್ತೆಯನ್ನು ಒನ್‍ವೇ ಮಾಡಲು 2 ತಿಂಗಳ ಮೊದಲು ಮನವಿಯನ್ನು ಸಲ್ಲಿಸಿತ್ತು.

ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆಯ ಪಾಂಡೇಶ್ವರ ಸಬ್ ಇನ್ಸ್‍ಪೆಕ್ಟರ್ ಮರುದಿನ ಪಕ್ಷದ ನಿಯೋಗವನ್ನು ಕರೆಸಿ ಮಾತುಕತೆಯನ್ನು ನಡೆಸಿ, ಒಂದು ತಿಂಗಳೊಳಗೆ ಎಲ್ಲಾ ಸರಿಪಡಿಸುವುದಾಗಿ ಭರವಸೆ ನೀಡಿದ್ದರು.

ಫಲಶೃತಿ: “ವೆಲ್ಫೇರ್ ಪಾರ್ಟಿಯ ಈ ಕಾರ್ಯದಿಂದಾಗಿ ಫೆ. 23ಕ್ಕೆ ಪೊಲೀಸ್ ಇಲಾಖೆಯು ಲಾರಿಗಳನ್ನು ಒಂದು ಬದಿಯಲ್ಲಿ ನಿಲ್ಲಿಸಲು ಆದೇಶಿಸಿ, ಅಧಿಕೃತವಾಗಿ ಈ ರಸ್ತೆಯನ್ನು ಒನ್‍ವೇ ಎಂದು ಘೋಷಿಸಿದೆ. ಇದೀಗ ಈ ರಸ್ತೆಯಲ್ಲಿ ಬೆಂಗರೆ ಜನರು ಸುಗಮವಾಗಿ ಸಂಚರಿಸುವಂತಾಗಿದ್ದು, ವೆಲ್ಫೇರ್ ಪಾರ್ಟಿ ಬೆಂಗರೆ ಸಮಿತಿಯು ಮಂಗಳೂರು ಪೊಲೀಸ್ ಆಯುಕ್ತರಿಗೂ, ಪಾಂಡೇಶ್ವರ ಸಬ್ ಇನ್ಸ್‌ಪೆಕ್ಟರ್‍ರಿಗೂ ಇದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಬೆಂಗರೆ ಜನತೆಗೆ ಅಭಿನಂದನೆಯನ್ನು ನೀಡುತ್ತಿದೆ” ಎಂದು ಪಕ್ಷದ ಬೆಂಗರೆ ಪ್ರಧಾನ ಕಾರ್ಯದರ್ಶಿ ಫೈಝಲ್ ಬಿನ್ ಇಸ್ಮಾಈಲ್ ತಿಳಿಸಿದರು.