ಮಾತಿಗಾಗಿ ವಿವಾಹದ ವರೆಗೆ ಕಾಯಿರಿ, ನಿಶ್ಚಿತಾರ್ಥಕ್ಕೆ ಮೊಬೈಲ್ ಉಡುಗೊರೆ ಕೊಡಬೇಡಿ

0
2278

ಖದೀಜ ನುಸ್ರತ್ ಅಬು ಧಾಬಿ

ಸಾಮಾಜಿಕ ಜಾಲತಾಣಗಳು ಜಗತ್ತಿನ ಮೂಲೆಯಲ್ಲಿರುವ ಎಲ್ಲಾ ನಮ್ಮ ಬಂಧುಗಳನ್ನು ಮತ್ತು ಹಳೆಯ ಮಿತ್ರರನ್ನು ಒಟ್ಟುಗೂಡಿಸಿದೆಯೆಂಬುದು ಅದರ ಮುಖ್ಯ ವಿಶೇಷತೆಯಾಗಿದೆ. ಅವುಗಳನ್ನು ಪ್ರಯೋಜನಕಾರಿಯಾಗಿಯೂ, ರಚನಾತ್ಮಕವಾಗಿಯೂ ಅಥವಾ ವಿನಾಶಕಾರಿಯಾಗಿ ಬಳಸಬಹುದೆಂಬುದು ಉಪಯೋಗಿಸುವವರ ಕೈಯಲ್ಲಿದೆ. ವ್ಯವಸ್ಥಿತವಾಗಿ ಉಪಯೋಗಿಸದಿದ್ದರೆ ವಿನಾಶ ಖಂಡಿತ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಹೆತ್ತವರ ಮತ್ತು ಮಕ್ಕಳ ನಡುವಿನ ಸಂಬಂಧ, ಸಮಸ್ಯೆ, ಮಕ್ಕಳು ದಾರಿತಪ್ಪುವಲ್ಲಿ ಮತ್ತು ಪತಿಪತ್ನಿಯರ ಸಂಬಂಧ ಕೆಡಿಸುವಲ್ಲಿ ಹಾಗು ವಿವಾಹ ವಿಚ್ಛೇದನೆಯಲ್ಲಿ ಮೊಬೈಲ್ ನ ದುರ್ಬಳಕೆ ಒಂದು ಮುಖ್ಯ ಕಾರಣವಾಗಿದೆ. ಪ್ರತಿಯೊಂದು ತಲೆಮಾರುಗಳಲ್ಲಿ ಬೇರೆಬೇರೆ ರೀತಿಯ ಸಮಸ್ಯೆಗಳಿರುತ್ತದೆ. ಇಂದಿನ ಸಮಸ್ಯೆ ಸಣ್ಣ ವಯಸ್ಸಿನಲ್ಲಿ ಅಶ್ಲೀಲ ಚಿತ್ರಗಳನ್ನು (pornography) ಕಾಣುವುದು, ಭಯಾನಕವಾದ ವಿಡಿಯೋ ಗೇಮ್, ಪರಿಚಯವಿಲ್ಲದವರೊಂದಿಗೆ ಚಾಟಿಂಗ್ ಮಾಡುತ್ತಾ ಸಮಯ ಕಳೆಯುವುದು ಇತ್ಯಾದಿ.

ಮಕ್ಕಳಿಗೆ ಕಾಲ ಕಳೆಯಲು ಮೊಬೈಲ್, ವೀಡಿಯೋ ಗೇಂ, ಟಾಬ್, ಕಂಪ್ಯೂಟರ್, ಪಿಎಸ್ ಫೋರ್ ಕೊಟ್ಟು ಅವರು ಅವರಷ್ಟಕ್ಕೆ ಸಮಯ ಕಳೆಯಲಿ ನಮಗೆ ತೊಂದರೆ ಕೊಡದಿರಲಿ ಎಂದು ಭಾವಿಸುವ ಹೆತ್ತವರು ತಮ್ಮ ಮಕ್ಕಳಲ್ಲಿರುವ ಸ್ಕ್ರೀನ್ ಚಟಕ್ಕೆ ಕಾರಣವಾಗಿರುತ್ತಾರೆ. ಸಮಯ ಕಳೆಯಲು ಕರಕೌಶಾಲ್ಯ, ಡ್ರಾಯಿಂಗ್, ಪೈಂಟಿಂಗ್, ಕ್ಲೇ ಯಿಂದ ಬೇರೆ ಬೇರೆ ಆಕೃತಿ ಮಾಡುವುದು ಅಥವಾ ಅವರಲ್ಲಿರುವ ಇನ್ನಾವುದೇ ಪ್ರತಿಭೆಗಳನ್ನು ಹವ್ಯಾಸವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿರಿ. ಮಕ್ಕಳನ್ನು ಇನ್ ಟರ್ ನೆಟ್, ಕಂಪ್ಯೂಟರ್, ಮೊಬೈಲ್ ಗಳನ್ನು ಅಲ್ಪ ಸ್ವಲ್ಪ ಉಪಯೋಗಿಸುತ್ತಾ ಟೆಕ್ನಾಲಜಿಯ ಜತೆಯೇ ಬೆಳೆಯಲು ಬಿಡಿರಿ. ನೀತಿ ಪಾಠಗಳಿರುವ ಕಾರ್ಟೂನ್, ಅವರ ಪಠ್ಯ ಪುಸ್ತಕದ ವಿಷಯಕ್ಕೆ ಸಂಬಂಧಿಸಿದ ವೀಡಿಯೋ, ಮಕ್ಕಾ ಲೈವ್, ಬೇರೆ ಬೇರೆ ವ್ಯಕ್ತಿಗಳ ಕುರ್ ಆನ್ ಪಾರಾಯಣ, ಉತ್ತಮ ಹಾಡು, ಆನ್ ಲೈನ್ ಕ್ವಿಝ್ ಇತ್ಯಾದಿಗಳನ್ನು ಸಮಯ ನಿಶ್ಚಯಿಸಿ ನೀಡಿರಿ.

ಉತ್ತಮ ಅಂಕ ಗಳಿಸಿದ ಕಾರಣಕ್ಕಾಗಿ ಮೊಬೈಲ್ ಹೊರತು ಬೇರೆ ಯಾವ ವಸ್ತು ಬೇಕಾದರೂ ಉಡುಗೊರೆ ನೀಡಿರಿ. ಒಂಟಿ ಕೋಣೆಯಲ್ಲಿ ಕುಳಿತು ಮೊಬೈಲ್ ಹಾಗೂ ಕಂಪ್ಯೂಟರ್ ಉಪಯೋಗಿಸಲು ಬಿಡಬೇಡಿರಿ. ಅವರು ಅದರಲ್ಲಿ ಯಾವುದೇ ಸಾಧನೆಯನ್ನು ಮಾಡುವುದಿಲ್ಲ. ಅರ್ಧರಾತ್ರಿವರೆಗೆ ಮೊಬೈಲ್, ಕಂಪ್ಯೂಟರ್ ನಲ್ಲಿ ಸಮಯ ಕಳೆಯಲು ಬಿಡಬೇಡಿರಿ. ಮಲಗಿದ ನಂತರವೂ ಅವರು ನಿದ್ರೆ ಮಾಡಿದ್ದಾರೆಯೇ ಎಂದು ಕೆಲವೊಮ್ಮೆ ಖಾತ್ರಿ ಮಾಡಿಕೊಳ್ಳಿರಿ. ಮನೆಯ ಹಾಲ್ ಅಥವಾ ಡೈನಿಂಗ್ ರೂಮ್ ನಲ್ಲಿಯೇ ಕಂಪ್ಯೂಟರ್ ಗಳನ್ನಿಡಿರಿ. ಅವರ ಅತ್ಯಗತ್ಯವಿರುವ ಅಧ್ಯಯನಕ್ಕಾಗಿ ಎಲ್ಲರ ಎದುರಿನಲ್ಲಿಯೇ ಕಂಪ್ಯೂಟರ್ ಉಪಯೋಗಿಸಲಿ.

ಸುರಕ್ಷಿತೆಯ ದೃಷ್ಟಿಯಲ್ಲಿ ಮೊಬೈಲ್ ಗಿಂತಲೂ ಕಂಪ್ಯೂಟರ್ ಉತ್ತಮ. ನಮ್ಮ ಮಕ್ಕಳು ಯಾವುದೇ ಕೆಟ್ಟ ಕೆಲಸ ಮಾಡುವುದಿಲ್ಲವೆಂದು ಭಾವಿಸಬೇಡಿರಿ. ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂದು ಎಲ್ಲಾ ವಿಷಯಗಳಲ್ಲಿ ಜ್ಞಾನವಿರುವುದಿಲ್ಲ. ಹೆತ್ತವರ ಉಪದೇಶ, ಮೇಲ್ನೋಟದಲ್ಲಿ ಅತಿ ಅಗತ್ಯವಾಗಿರುತ್ತದೆ. ಕೆಲವೊಮ್ಮೆ ಗೂಗ್ಲ್ ಮತ್ತು ಯೂಟ್ಯೂಬ್ ಗಳನ್ನೂ ಪರಿಶೀಲಿಸುತ್ತಿರಿ. ಅವರು ಏನು ಏನು ಟೈಪ್ ಮಾಡುತ್ತಾರೆ, ಯಾವೆಲ್ಲಾ ವೆಬ್ ಸೈಟ್ ಸಂದರ್ಶಿಸುತ್ತಾರೆ, ಯಾವ ವೀಡಿಯೋ ನೋಡುತ್ತಾರೆಂದು ನಿಮಗೆ ಕಾಣಬಹುದಾಗಿದೆ. ಅಗತ್ಯವಿದ್ದಾಗ ತಾಯಿಯ ಮೊಬೈಲನ್ನೇ ಉಪಯೋಗಿಕೊಳ್ಳಲಿ. ಅವರಿಗೆ ಮೊಬೈಲ್ ಕೊಡುವುದಾದರೂ ತಂದೆ ತಾಯಿಗೆ ಕರೆ ಮಾಡಲು ಮಾತ್ರ ಕೊಡಿರಿ.

ಶಾಪಿಂಗ್, ರೋಗಿ ಸಂದರ್ಶನ, ಮರಣ, ಮದುವೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ನೀವು ಹೋಗುವಾಗಲೆಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗಿರಿ. ಅಥವಾ ಮನೆಯಲ್ಲಿ ಅವರ ಜತೆ ತಂದೆ ಅಥವಾ ತಾಯಿ, ಅದು ಸಾಧ್ಯವಾಗದಿದ್ದರೆ ಅಜ್ಜ ಅಥವಾ ಅಜ್ಜಿ ಹೀಗೆ ಯಾರಾದರೊಬ್ಬರು ಇರಬೇಕು. ಒಂಟಿಯಾದಾಗ ಸಹಜವಾಗಿ ಅವರು ಗ್ಯಾಜೆಟ್ ಗಳ ದಾಸರಾಗುತ್ತಾರೆ. ಸಜ್ಜನ ಮಾತಾಪಿತರು ಮನೆಯ ಹೊರಗೆ ಧಾರ್ಮಿಕ, ಸಾಮಾಜ ಸೇವೆ ಕೆಲಸ ಮಾಡುತ್ತಿರುವಾಗ ಮನೆಯಲ್ಲಿ ಮಕ್ಕಳು ದಾರಿತಪ್ಪುವ ಎಷ್ಟೋ ಉದಾಹರಣೆಗಳಿವೆ.

ಸ್ತ್ರೀಯರಾಗಲಿ, ಪುರುಷರಾಗಲಿ ಒಂಟಿಯಾಗಿರುವಾಗ ಮೊಬೈಲ್ ನೋಡಲು ಸಾಧ್ಯವಾದಷ್ಟು ಪ್ರಯತ್ನಿಸುವುದು. ಮಕ್ಕಳು ಅತಿಯಾಗಿ ಮೊಬೈಲ್ ಬಳಸಬಾರದೆಂದು ಉಪದೇಶಿಸುವುದಾದರೆ ನಾವು ಅವರಿಗೆ ಮಾದರಿಯಾಗಬೇಕು. ಸಾಮಾನ್ಯವಾಗಿ ಮಕ್ಕಳು ತಮ್ಮ ತಂದೆತಾಯಿ ತಮ್ಮೊಂದಿಗೆ ಸಮಯ ಕಳೆಯುವುದನ್ನು, ಆಟವಾಡುವುದನ್ನು ಇಷ್ಟ ಪಡುತ್ತಾರೆ. ಅದೇ ರೀತಿ ನಮ್ಮ ಹಿರಿಯ ಹೆತ್ತವರ ಮುಂದೆ ಹೆಚ್ಚು ಸಮಯವನ್ನು ಮೊಬೈಲ್ ನಲ್ಲಿ ಕುಳಿತುಕೊಳ್ಳಬೇಡಿರಿ. ನಮ್ಮ ಹೆತ್ತವರು ನಾವು ಅವರೊಂದಿಗೆ ಮುಖ ನೋಡಿ ಮಾತನಾಡುವುದನ್ನು ನಿರೀಕ್ಷಿಸುತ್ತಾರೆ. ಜನರೊಂದಿಗೆ ಮುಖ ಮತ್ತು ಕಣ್ಣು ನೋಡಿ ಮಾತನಾಡುವ ಅಭ್ಯಾಸವಿರಬೇಕು.

“ಜನರೊಡನೆ ಮುಖ ತಿರುಗಿಸಿ ಮಾತಾಡಬೇಡ.” (ಲುಕ್ಮಾನ್: 18)

ಪತಿ ಪತ್ನಿಯರು ಇಬ್ಬರು ಭೇಟಿಯಾಗುವಾಗ, ರಾತ್ರಿ ಊಟದ ನಂತರ ಅಗತ್ಯ ಕಾರಣದ ಹೊರತು ಮೊಬೈಲ್ ಉಪಯೋಗಿಸಬೇಡಿರಿ. ಇಬ್ಬರ ಮಧ್ಯೆ ಮೂರನೆಯ ಮೊಬೈಲ್ ಶೈತಾನ್ ನ ಪಾತ್ರ ವಹಿಸುತ್ತದೆ. ವಿವಾಹ ನಿಶ್ಚಯವಾದ ಕೂಡಲೇ ಮೊಬೈಲ್ ಉಡುಗೊರೆ ನೀಡಬೇಡಿರಿ. ನಿಕಾಹ್ ಆಗುವ ತನಕ ಅವರು ಪರಸ್ಪರ ಅನ್ಯರಾಗಿರುತ್ತಾರೆ. ನಿಮಗೆ ಮಾತನಾಡಲಿಕ್ಕಿರುವುದೆಲ್ಲವನ್ನು ವಿವಾಹದ ನಂತರ ಮಾತನಾಡಬಹುದು.

ಉದ್ಯೋಗದ ಸ್ಥಳಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯದೆ ನಿಷ್ಠೆಯಿಂದ ಉದ್ಯೋಗ ಮಾಡಲು ಶ್ರಮಿಸಬೇಕು. ವಿಮಾನ, ಬಸ್ಸು ಅಥವಾ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಅಥವಾ ಯಾವುದೇ ಸಭೆಯ ಸಂದರ್ಭದಲ್ಲಿ ಒಟ್ಟಿಗೆ ಕುಳಿತಿರುವಾಗ ಇನ್ನೊಬ್ಬರ ಮೊಬೈಲ್ ಸ್ಕ್ರೀನ್ ನೋಡಬೇಡಿರಿ. ಅವರು ಯಾರೊಂದಿಗಾದರೂ ವೈಯಕ್ತಿಕ ಅಥವಾ ಹಣಕಾಸಿನ ವಿಷಯ ಚಾಟ್ ಮಾಡುತ್ತಿರಬಹುದು ಅಥವಾ ಪತ್ನಿಯೊಂದಿಗೆ ಚಾಟ್ ಮಾಡುತ್ತಿರಬಹುದು. ಯಾವುದೇ ಸಂದೇಶಗಳಿಲ್ಲದ ಅನಗತ್ಯವಾಗಿ ಸ್ತ್ರೀಯರ ಫೋಟೋ ಅಥವಾ ವೀಡಿಯೋ ಗಳನ್ನು ವಾಟ್ಸಾಪ್ ಅಥವಾ ಫೇಸ್ ಬುಕ್ ಗಳಲ್ಲಿ ಶೇರ್ ಮಾಡಬೇಡಿರಿ. ಅದು ಬಡವರು ಏನಾದರೂ ಪಡೆಯುವುದು ಅಥವಾ ಶ್ರೀಮಂತರ ವಸ್ತ್ರಾಭರಣ ಪ್ರದರ್ಶನದ ಫೋಟೋವೇ ಆಗಿರಲಿ. ಇನ್ನೊಬ್ಬರ ಗೌಪ್ಯತೆಯನ್ನು (privacy) ಗೌರವಿಸಿರಿ. ಪರಪುರುಷ/ಸ್ತ್ರೀಯರನ್ನು ಫೇಸ್ ಬುಕ್ ಫ್ರೆಂಡಾಗಿ ಮಾಡಿಕೊಳ್ಳಬೇಡಿರಿ. ಅಸ್ಸಲಾಮ್ ಅಲೈಕುಮ್ (ನಿಮ್ಮ ಮೇಲೆ ಶಾಂತಿಯಿರಲಿ) ನಿಂದ ಆರಂಭವಾದ ಗೆಳೆತನದ ಅಂತ್ಯವು ಭಯಾನಕವಾಗುವ ಸಾಧ್ಯತೆಯಿದೆ.

ಸ್ಕ್ರೀನ್ ಚಟ ಕೊನೆಗೆ ಕಲಿಕೆ, ಓದು,ಆಟೋಟ, ಕುಟುಂಬ ಜೀವನ, ಉದ್ಯೋಗ ಯಾವುದರಲ್ಲಿಯೂ ಆಸಕ್ತಿಯಿಲ್ಲದವರಾಗಿ ಪರಿವರ್ತಿಸುತ್ತದೆ. ಈ ಸ್ಥಿತಿಗೆ ತಲುಪುವುದಕ್ಕಿಂತ ನಾವು ಎಚ್ಚೆತ್ತುಕೊಳ್ಳಬೇಕು. ಅವರ ಜೀವನವು ಯಾವುದೇ ಉದ್ದೇಶವಿಲ್ಲದೆ ಮುಂದೆವೆರೆಯುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಾವೆಷ್ಟು ಸಮಯ ಕಳೆಯುತ್ತಿದ್ದೇವೆ, ಅದರ ಉದ್ದೇಶವೇನು, ಅದರಿಂದ ಏನಾದರೂ ಪ್ರಯೋಜನವಾಗುತ್ತಿದೆಯೇ, ಅಷ್ಟು ಸಮಯ ಕಳೆಯುವುದು ಅಗತ್ಯವೇ ಇತ್ಯಾದಿ ವಿಷಯಗಳನ್ನು ನಾವು ಆಲೋಚಿಸುತ್ತಿರಬೇಕು. ಸಾಮಾಜಿಕ ಜಾಲತಾಣಗಳಿಂದ ನಮ್ಮ ನಿಕಟ ಸಂಬಂಧಿಕರನ್ನು ಪರಸ್ಪರ ನಿರ್ಲಕ್ಷಿಸಿ ಕುಟುಂಬದಲ್ಲಿ ಏನಾದರೂ ಸಮಸ್ಯೆ ಉಂಟಾಗಿದೆಯೇ? ಸಮಸ್ಯೆ ಉಂಟಾಗಿದ್ದರೆ ನಮಗೆ ಕುಟುಂಬ ಜೀವನ ಮುಖ್ಯವೋ ಅಥವಾ ಸಾಮಾಜಿಕ ಜಾಲತಾಣವೋ ಎಂದು ನಾವು ಆಲೋಚಿಸಬೇಕು. ಸಾಮಾಜಿಕ ಜಾಲತಾಣಗಳಿಗಿಂತಲೂ ನಮಗಿಷ್ಟವಿರುವ ನಮ್ಮ ಕುಟುಂಬದವರೊಂದಿಗೆ ಸಾಧ್ಯವಾದಷ್ಟು ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿದಾಗ ಮಾತ್ರ ನಮ್ಮ ಜೀವನ ಸಂತೋಷದಿಂದ ಮುನ್ನಡೆಯಲು ಸಾಧ್ಯ.