ಯಡಿಯೂರಪ್ಪ ಅವಸರಕ್ಕೆ ಬ್ರೇಕ್ ಹಾಕಿದ ಬಿಜೆಪಿ ಹೈಕಮಾಂಡ್; ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಇನ್ನೂ 2-3 ದಿನ ಕಾಯಬೇಕು?

0
894

ಬೆಂಗಳೂರು: ವಿಶ್ವಾಸ ಮತ ಯಾಚನೆಯಲ್ಲಿ ಮೈತ್ರಿ ಸರಕಾರ ವಿಫಲವಾದ ಬಳಿಕ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಬ್ರೇಕ್ ಹಾಕಿದೆ ಎಂದು ವರದಿಯಾಗಿದೆ.

ಯಡಿಯೂರಪ್ಪನವರು ಇಂದೇ ಶಾಸಕಾಂಗ ಪಕ್ಷದ ಸಭೆ ನಡೆಸುತ್ತಾರೆ ಮತ್ತು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಮನವಿ ಮಾಡುತ್ತಾರೆ ಎಂದು ಬಿಜೆಪಿ ವಿಚಾರ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಆದರೆ ಹೈಕಮಾಂಡ್ ಈ ಬಗ್ಗೆ ಬಹಳ ಸೂಕ್ಷಮವಾಗಿದ್ದು, ಮುಂದಿನ ಸೂಚನೆ ನೀಡುವವರೆಗೆ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದು ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

ಬಿಎಸ್‍ವೈ ನಿವಾಸ ಎದುರು ಶಾಸಕ ಜೆಸಿ ಮಾಧುಸ್ವಾಮಿ ಆಡಿದ ಮಾತಿನಲ್ಲೂ ಈ ಸೂಚನೆಯ ಅಂಶ ಕಾಣಿಸಿದೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ನಮ್ಮದೇ ಆದ ಕೆಲ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಆದ್ದರಿಂದ ಹೈಕಮಾಂಡಿನ ಸೂಚನೆಗೆ ಎದುರು ನೋಡುತ್ತಿದ್ದೇವೆ. ಅಮಿತ್ ಶಾ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ಪಕ್ಷದ ವೀಕ್ಷಕರನ್ನು ಕಳುಹಿಸಲಿದ್ದು, ಆ ವೀಕ್ಷಕರ ಎದುರೇ ಶಾಸಕಾಂಗ ಸಭೆಯಲ್ಲಿ ಪಕ್ಷದ ನಾಯಕರ ಆಯ್ಕೆಯನ್ನು ಮಾಡಲಾಗುತ್ತದೆ ಎಂದಿದ್ದಾರೆ.

ಸಂಸದೀಯ ಮಂಡಳಿಯಲ್ಲಿ ಸರ್ಕಾರ ರಚನೆಯ ಕುರಿತು ತೀರ್ಮಾನ ಆಗಬೇಕಿದೆ. ಆ ಬಳಿಕ ಅವರು ಶಾಸಕಾಂಗ ಸಭೆ ನಡೆಸಲು ಸೂಚನೆ ನೀಡುತ್ತಾರೆ. ಇಲ್ಲಿಗೆ ವೀಕ್ಷಕರು ಆಗಮಿಸಿದ ಬಳಿಕ ಶಾಸಕಾಂಗ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಆ ಬಳಿಕವೇ ರಾಜ್ಯಪಾಲರ ಭೇಟಿ ನಡೆಯಲಿದೆ. ಆ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಮಯ ನಿಗದಿ ಮಾಡಲಾಗುವುದು. ಇದಕ್ಕೆ 1 ಅಥವಾ 2 ದಿನಗಳು ಬೇಕಾಗುತ್ತದೆ ಎಂದಿದ್ದಾರೆ.