ಜ‌. 26ರಂದು ಟ್ರಾಕ್ಟರ್ ರ‌್ಯಾಲಿ ಖಚಿತ: ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದ ರೈತರು

0
449

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿ ಪೊಲೀಸರು ಹಾಗೂ ಕೇಂದ್ರ ಸರಕಾರದ ಎಲ್ಲ ವಿರೋಧಗಳನ್ನು ಲೆಕ್ಕಿಸದೆ ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್ಯಾಲಿ ನಡೆಸಲು ಸಿಂಘು ಗಡಿಯಲ್ಲಿ ಸೇರಿದ ರೈತ ಯೂನಿನನ್ ಸಭೆ ನಿರ್ಧರಿಸಿದೆ. ನಾಳೆ ರೈತರೊಂದಿಗೆ ಹತ್ತನೆಯ ಹಂತದ ಚರ್ಚೆ ನಡೆಯಲಿದೆ. ವಿವಾದ ಕೃಷಿ ಕಾನೂನು ಹಿಂಪಡೆಯುವುದೊಂದೇ ಚರ್ಚೆಯ ವಿಷಯವೆಂದು ರೈತರು ಹೇಳಿದ್ದಾರೆ. ಆದರೆ, ಅದನ್ನು ಬಿಟ್ಟು ಬೇರೆ ವಿಷಯಗಳನ್ನು ಮುಂದಿಡಬೇಕೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರವಿವಾರ ಆಗ್ರಹಿಸಿದ್ದರು.

ವಾತಾವರಣ ಕೆಡಿಸುವುದು ಕೃಷಿ ಸಚಿವರ ಉದ್ದೇಶ ಎಂದು ರೈತ ಯೂನಿಯನ್ ನಾಯಕರು ಸಚಿವರ ಮನವಿಯನ್ನು ತಿರಸ್ಕರಿಸಿದ್ದಾರೆ. ಇದೇ ವೇಳೆ ಸುಪ್ರೀಂ ಕೋರ್ಟು ನಿಶ್ಚಯಿಸಿದ ತಜ್ಞ ಸಮಿತಿಯ ಮೊದಲ ಸಭೆ ಜನವರಿ 19ಕ್ಕೆ ನಡೆಯಲಿದೆ. ಕಾನೂನು ಹಿಂಪಡೆಯುವುದು ಮಾತ್ರ ತಮ್ಮ ಬೇಡಿಕೆಯೆಂದು ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಸುಪ್ರೀಂ ಕೋರ್ಟಿನ ಸಮಿತಿಗೆ ಒಬ್ಬರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ವಿವಾದ ಕಾನೂನನ್ನು ಬೆಂಬಲಿಸುವ ಮೂವರನ್ನು ಹಿಂಪಡೆದುಕೊಳ್ಳಬೇಕೆಂದು ರೈತ ಯೂನಿಯನ್ ಸುಪ್ರೀಂ ಕೋರ್ಟನ್ನು ಆಗ್ರಹಿಸಿದೆ.

ರೈತರ ಹೋರಾಟ 2024ರವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ನಾಗ್‍ಪುರದಲ್ಲಿ ತಿಳಿಸಿದ್ದಾರೆ. ಹೋರಾಟವನ್ನು ಬೆಂಬಲಿಸಿದ 40 ಜನರಿಗೆ ಎನ್‍ಐಎ ಸಮನ್ಸ್ ಕಳುಹಿಸಿದ್ದು ಹೋರಾಟವನ್ನು ಬುಡುಮೇಲುಗೊಳಿಸುವ ಷಡ್ಯಂತ್ರವಿದು ಎಂದು ರೈತ ನಾಯಕ ಬಲ್‍ಬೀರ್ ಸಿಂಗ್ ರಾಜೆವಾಲ್ ಆರೋಪಿಸಿದ್ದಾರೆ.