ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ: ಬಿಜೆಪಿಯಲ್ಲಿ ಸ್ಫೋಟಗೊಂಡ ಭಿನ್ನಮತ

0
711

ಸನ್ಮಾರ್ಗ ವಾರ್ತೆ

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಇಂದು ಸಂಜೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಏಳು ಶಾಸಕರ ಹೆಸರನ್ನು ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ಇಂದು ಪ್ರಕಟಿಸಿದ್ದಾರೆ.

ಶಾಸಕರ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಬಿಜೆಪಿ ಸರ್ಕಾರ ರಚಿಸಲು ಪ್ರಮುಖ ಪಾತ್ರ ವಹಿಸಿದ್ದ ಎಚ್ ವಿಶ್ವನಾಥ್ ರವರ ಹೆಸರು ‌ಇಲ್ಲದ್ದರಿಂದ ಮುನಿಸಿಕೊಂಡಿದ್ದಾರೆ.

ಅಲ್ಲದೇ, ಬಳ್ಳಾರಿಯ ರೆಡ್ಡಿ ಸಹೋದರರಾದ ಸೋಮಶೇಖರರೆಡ್ಡಿ, ಕರುಣಾಕರರೆಡ್ಡಿ ಕೂಡಾ ಬಿಜೆಪಿ ನಾಯಕತ್ವದ ವಿರುದ್ಧ ಕೋಪ ಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಉಮೇಶ್ ಕತ್ತಿ, ಎಸ್. ಅಂಗಾರ, ಸಿ.ಪಿ. ಯೋಗೀಶ್ವರ್, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್, ಆರ್. ಶಂಕರ್, ಮುರುಗೇಶ್ ನಿರಾಣಿ ಅವರ ಹೆಸರುಗಳನ್ನು ರಾಜಭವನಕ್ಕೆ ಕಳುಹಿಸಲಾಗಿದ್ದು, ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಪ್ರಮಾಣವಚನ ಸ್ವೀಕರಿಸಲಿರುವ ಶಾಸಕರ ಪಟ್ಟಿಯಿಂದ ಮುನಿರತ್ನರವರವರ ಹೆಸರನ್ನು ಕೈಬಿಟ್ಟಿದ್ದಾರೆ. ಮುನಿರತ್ನಗೆ ಸಚಿವ ಸ್ಥಾನದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಯಾವುದೇ ಉತ್ತರ ಕೊಡದೆ ಯಡಿಯೂರಪ್ಪ ಮೌನವಾಗಿ ಹೋದ ಘಟನೆ ನಡೆದಿದೆ.