ಸುಳ್ಯ ಕೆ.ವಿ.ಜಿ.‌ ಲಾ ಕಾಲೇಜಿನ ಸ್ಕಾರ್ಫ್ ವಿವಾದ: ಪ್ರಕರಣ ಸುಖಾಂತ್ಯ ಕಂಡದ್ದು ಹೀಗೆ

0
990

ಸನ್ಮಾರ್ಗ ಗ್ರೌಂಡ್ ರಿಪೋರ್ಟ್

ಸುಳ್ಯ (ದ‌.ಕ.): ಸುಳ್ಯದ ಖಾಸಗಿ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಸ್ಕಾರ್ಫ್ ಧರಿಸಿದ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದ ವಿವಾದವು ವಿದ್ಯಾರ್ಥಿನಿಯ ಪೋಷಕರು ಮತ್ತು ಸಂಘಟನೆಗಳ ಮಧ್ಯ ಪ್ರವೇಶದಲ್ಲಿ ಸುಖಾಂತ್ಯವಾಗಿತ್ತು. ವಿವಾದ ಉಂಟಾದದ್ದು ಹೇಗೆ ಹಾಗೂ ಹೇಗೆ ಸುಖಾಂತ್ಯಗೊಂಡಿತು ಎಂಬ ಬಗ್ಗೆ ಸನ್ಮಾರ್ಗ ತಂಡ ಕಂಡುಕೊಂಡ ಮಾಹಿತಿಯ ವಿಶೇಷ ವರದಿ ಇದು.

ವಿವಾದದ ಹಿನ್ನೆಲೆ ಏನು?

ಸುಳ್ಯದ ಖಾಸಗಿ ಕಾನೂನು ಕಾಲೇಜಿನಲ್ಲಿ ಎಪ್ರಿಲ್ 16 ರಂದು ಪರೀಕ್ಷೆಯು ಆರಂಭಗೊಂಡಿತ್ತು. ಮೊದಲ ಪರೀಕ್ಷೆಗೆ ಸ್ಕಾರ್ಫ್ ಧರಿಸಿಕೊಂಡು ಬಂದ ನಾಲ್ವರು ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲ ಉದಯ ಕೃಷ್ಣ ಮುಂದಿನ ಪರೀಕ್ಷೆಯಲ್ಲಿ ಸ್ಕಾರ್ಫ್ ಧರಿಸಿಕೊಂಡು ಬಂದರೆ ಹಾಲ್ ಟಿಕೆಟ್ ನಿರಾಕರಿಸುವುದೆಂದು ಎಚ್ಚರಿಕೆಯನ್ನು ನೀಡಿದರು.

ನಂತರ ಈ ವಿಷಯವನ್ನು ಓರ್ವ ವಿದ್ಯಾರ್ಥಿನಿಯು ತನ್ನ ಪೋಷಕರಿಗೆ ತಿಳಿಸಿದಳು. ಪೋಷಕರು ಫ್ರೆಟರ್ನಿಟಿ ಮೂವ್ಮೆಂಟ್ ಸಂಘನೆಯೊಡಗೂಡಿ ಮರುದಿನ ಎರಡನೇ ಪರೀಕ್ಷೆಗಿಂತ ಮೊದಲು ಸುಳ್ಯಕ್ಕೆ ಆಗಮಿಸಿದ್ದರು. ಅಲ್ಲಿ ಅವರೊಂದಿಗೆ ಜಮಾಅತೆ ಇಸ್ಲಾಮೀ ಹಿಂದ್ ಸುಳ್ಯದ ಕಾರ್ಯಕರ್ತರಾದ ಉಸ್ಮಾನ್ , ವೆಲ್ಫೇರ್ ಪಾರ್ಟಿ ಸುಳ್ಯದ ಇಬ್ರಾಹಿಂ ಮತ್ತು ಕ್ಯಾಂಫಸ್ ಫ್ರಂಟಿನ ಸಿದ್ದೀಕ್ ರವರಿಗೆ ಮಾಹಿತಿ ನೀಡಿ ಸೇರಿಕೊಂಡರು.

ಎರಡನೇ ಪರೀಕ್ಷೆಗೆ ಮೂವರು ವಿದ್ಯಾರ್ಥಿನಿಯರು ಸ್ಕಾರ್ಫ್ ಕಳಚಿ ಪರೀಕ್ಷೆಗೆ ಹಾಜರಾದರೆ ಓರ್ವ ವಿದ್ಯಾರ್ಥಿನಿ ಸ್ಕಾರ್ಫ್ ಧರಿಸಿದ ಕಾರಣಕ್ಕೆ ಹಾಲ್ ಟಿಕೆಟ್ ನಿರಾಕರಣೆಗೊಳಗಾಗಿ ಪರೀಕ್ಷಾ ಹಾಲಿಂದ ಹೊರಗುಳಿಯ ಬೇಕಾಯಿತು.

ಈ ಸಂದರ್ಭದಲ್ಲಿ ಫ್ರೆಟರ್ನಿಟಿ ಮೂಮೆಂಟ್ ನ ನೇತೃತ್ವದಲ್ಲಿ ವಿದ್ಯಾರ್ಥಿನಿಯ ಪೋಷಕರೂ ಸೇರಿದ ಈ ನಿಯೋಗವು ಕಾಲೇಜಿನ ಪ್ರಾಂಶುಪಾಲರೊಂದಿಗೆ ಮಾತುಕತೆಯನ್ನು ನಡೆಸಿತು. ಮಾತುಕತೆಯು ವಿಫಲವಾದಾಗ ಈ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ನಡೆಸುವ ತೀರ್ಮಾನವನ್ನು ನಿಯೋಗವು ಮಾಡಿತು. ಜತೆ ಜತೆಗೇ ಆಡಳಿತ ಮಂಡಳಿಯನ್ನು ಸಂಪರ್ಕಿಸುವ ಪ್ರಯತ್ನವನ್ನೂ ಮಾಡಿತು. ಈ ಸಂದರ್ಭದಲ್ಲಿ ಕೆಲವು ಮಂದಿ ಕ್ಯಾಂಪಸ್ ಫ್ರಂಟ್ ನ ಕಾರ್ಯಕರ್ತರು ಕಾಲೇಜು ಗೇಟ್ ಬಳಿ ಜಮಾಯಿಸಿದ್ದರಿಂದ ಪೊಲೀಸರು ಕೂಡಾ ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸರ‌ ಜೊತೆಗೆ ಸ್ವಲ್ಪಮಟ್ಟಿಗೆ ಮಾತಿನ ಜಟಾಪಟಿಯಾಗಿ ಅದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅದಾಗಲೇ ವೈರಲ್ ಆಯಿತು.

ಈ ಒಟ್ಟು ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಆಡಳಿತ ಮಂಡಳಿಯು ಪ್ರತಿನಿಧಿಯಾಗಿ ಅಕಾಡಮಿಯ ಸಲಹೆಗಾರ ಪ್ರೊ. ಬಾಲಚಂದ್ರಗೌಡರನ್ನು ಕಳುಹಿಸಿಕೊಟ್ಟು ಪ್ರಾಂಶುಪಾಲ ಮತ್ತು ನಿಯೋಗದೊಂದಿಗೆ ಮಾತುಕತೆ ನಡೆಸಿ ವಿದ್ಯಾರ್ಥಿನಿಗೆ ಸ್ಕಾರ್ಫ್ ಧರಿಸಿ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಿತು. ಮತ್ತು ಮುಂದಕ್ಕೆ ಸ್ಕಾರ್ಫ್ ಧರಿಸುವವರಿಗೆ ನಿರ್ಬಂಧವನ್ನು ವಿಧಿಸುವುದಿಲ್ಲ. ಆದರೆ ಒಂದು ವೇಳೆ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸ್ಕ್ವಾಡಿನವರು ತಪಾಸಣೆಗೆ ಬಂದಾಗ ಸಹಕರಿಸಬೇಕಾದದ್ದು ನಿಮ್ಮ ಜವಾಬ್ದಾರಿ ಎಂದು ತಿಳಿಸಿದ್ದಾರೆ. ಅದಕ್ಕೆ ವಿದ್ಯಾರ್ಥಿನಿ ಹಾಗೂ ಪೋಷಕರು ಮತ್ತು ನಿಯೋಗವು ಒಪ್ಪಿಕೊಂಡಿತು. ಈ ಮೂಲಕ ಸಂಸ್ಥೆಯ ಆಡಳಿತವು ಸಮಯೋಚಿತ ತೀರ್ಮಾನವನ್ನು ಕೈಗೊಳ್ಳುವ ಮೂಲಕ ಪ್ರಕರಣವನ್ನು ಸೌಹಾರ್ದಯುತವಾಗಿ ಸುಖಾಂತ್ಯ ನೀಡಿದರು.

ನಿಯೋಗದಲ್ಲಿ ವಿದ್ಯಾರ್ಥಿನಿಯ‌ ಪೋಷಕರ ಸಹಿತ ಫ್ರಟರ್ನಿಟಿ ಮೂಮೆಂಟ್ ನ ನಾಯಕರುಗಳಾದ ವಸೀಮ್ ಆರ್.ಎಸ್., ಬಶೀರ್ ಮುಹಿಯುದ್ದೀನ್, ಜಮಾಅತೆ ಇಸ್ಲಾಮೀ ಹಿಂದ್ ನ ಉಸ್ಮಾನ್ ಸುಳ್ಯ , ವೆಲ್ಫೇರ್ ಪಾರ್ಟಿ ಸುಳ್ಯದ ಇಬ್ರಾಹೀಮ್, ಕ್ಯಾಂಪಸ್ ಫ್ರಂಟ್ ನ ಸಿದ್ದೀಕ್ ಉಪಸ್ಥಿತರಿದ್ದರು.