ಮೌಲ್ವಿ ರವೂಫ್ : ಸುಳ್ಳಾರೋಪ ಮಾಡಿರುವ ಮಾಧ್ಯಮಗಳ ಮೇಲೆ ಪೋಲೀಸರು ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಲಿ- ಎಸ್ ಡಿಪಿಐ ಆಗ್ರಹ

0
548

ಬೆಂಗಳೂರು: ಆಗಸ್ಟ್ 20- ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಮೂಲಕ ಫೋನ್ ಕರೆಗಳು ಹೋಗಿದ್ದವು ಎಂಬ ಮಾಹಿತಿಯ ಪ್ರಕಾರ ಅಲರ್ಟ್ ಆದ ಪೊಲೀಸರು ತಾಲೂಕಿನಾದ್ಯಂತ ತೀವ್ರ ತಪಾಸಣೆ ನಡೆಸಿ ಕೇರಳದಲ್ಲಿ ಮೌಲ್ವಿ ವೃತ್ತಿಯನ್ನು ನಿರ್ವಹಿಸುತ್ತಿದ್ದ ರವೂಫ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದು ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಒಪ್ಪಿಸಿದ್ದಾರೆ ಎಂಬ ಹಸಿ ಹಸಿ ಸುಳ್ಳನ್ನು ಬಿತ್ತರಿಸಿದ ಕರ್ನಾಟಕದ ನ್ಯೂಸ್ ಚಾನಲ್ ಗಳ ಮೇಲೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮತ್ತು ಎಸ್ ಡಿಪಿಐ ದ ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

ರವೂಫ್ ಎಂಬವರು ಇತ್ತೀಚೆಗೆ ನಿಧನ ಹೊಂದಿದ ಮಂಜನಾಡಿ ಉಸ್ತಾದರ ಶಿಷ್ಯ, ಅಪ್ಪಟ ಸೌಮ್ಯವಾದಿ ಎಂಬ ಕಾರಣಕ್ಕಾಗಿ ಉಸ್ತಾದರ ವಿಶ್ವಾಸಗಳಿಸಿ ಅವರ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂತಹ ಮುಗ್ಧ ಯುವ ಧಾರ್ಮಿಕ ಪಂಡಿತನ ಮೇಲೆ ಪೂರ್ವಾಗ್ರಹ ಪೀಡಿತ ಮಾದ್ಯಮಗಳು “ಉಗ್ರ ಪಟ್ಟ” ಕಟ್ಟಿರುವುದನ್ನು ನೋಡಿದರೆ ಜಾಗತಿಕ ಮಟ್ಟದಲ್ಲಿದ್ದ “ಇಸ್ಲಾಮೀ ಫೋಭಿಯಾ” ಭಾರತದ ಮಾಧ್ಯಮ ಲೋಕಕ್ಕೂ ಕಾಲಿಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಧ್ಯಮಗಳು ನಡೆಸುವ ಈ ಮಹಾ ತಪ್ಪುಗಳಿಗೆ ಪದೇ ಪದೇ ಅದೆಷ್ಟೋ ಮುಗ್ಧರು ಬಲಿಯಾಗುತ್ತಿದ್ದಾರೆ. ಆದರೆ ಮಾಧ್ಯಮಗಳು ಮಾತ್ರ ತನ್ನ ಚಾಳಿಯನ್ನು ಮುಂದುವರಿಸುತ್ತಲೇ ಇದೆ. ಪೋಲೀಸ್ ಅಧೀಕ್ಷಕರೇನೋ ಈ ಘಟನೆಯನ್ನು ಅಲ್ಲಗಳೆಯುವ ಮೂಲಕ ತನ್ನ ಕೈಯನ್ನು ತೊಳೆದುಕೊಂಡರು. ಆದರೆ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ತನ್ನ ಬಗ್ಗೆ ತಪ್ಪು ಕಲ್ಪನೆಗಳು ರವಾನೆಯಾಗಿ ಮುಖಭಂಗಕ್ಕೊಳಗಾದ ರವೂಫ್ ರವರ ಘನತೆಯನ್ನು ಮರಳಿಸುವವರು ಯಾರು ಎಂದವರು ಪ್ರಶ್ನಿಸಿದ್ದಾರೆ.

ಮಾಧ್ಯಮಗಳ ಈ ಸರ್ವಾಧಿಕಾರಿ ನಿಲುವುಗಳನ್ನು ಕೊನೆಗೊಳಿಸವ ಸಲುವಾಗಿ ಪೋಲೀಸ್ ಇಲಾಖೆಯು ಇಂತಹ ಮಾಧ್ಯಮಗಳ ಮೇಲೆ ಕೇಸುಗಳನ್ನು ದಾಖಲಿಸಿ ತನ್ನ ಕರ್ತವ್ಯ ಪ್ರಜ್ಞೆಯನ್ನು ಮೆರೆಯಬೇಕಾಗಿದೆ. ಹಾಗೂ ಸಂಬಂಧಪಟ್ಟ ಇಲಾಖೆಯು ಇಂತಹ ಮಾಧ್ಯಮಗಳ ಪರವಾನಿಗೆಯನ್ನೇ ರದ್ದು ಪಡಿಸುವ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ ಎಂದು ಎಂದವರು ಕೋರಿದ್ದಾರೆ.