‘ಅವರು ನನ್ನ ಧರ್ಮವನ್ನು ನನ್ನ ಅಪರಾಧವನ್ನಾಗಿಸಿದರು’: ದಿಲ್ಲಿ ಗಲಭೆಯಲ್ಲಿ ಜೈಲುವಾಸ ಅನುಭವಿಸಿದ ಇಲಿಯಾಸ್ ಬಿಚ್ಚಿಟ್ಟ ಸತ್ಯ

0
375

ಸನ್ಮಾರ್ಗ ವಾರ್ತೆ

ನವದೆಹಲಿ: ಇಪ್ಪತ್ತೆಂಟು ವರ್ಷದ ಇಲಿಯಾಸ್ ಐದು ತಿಂಗಳಿಗಿಂತಲೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದರು. ಆದರೆ ಈಗ ಜಾಮೀನು ಮೇರೆಗೆ ಮನೆಯಲ್ಲಿದ್ದಾರೆ.

ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಗಲಭೆಯ ಸಂದರ್ಭದಲ್ಲಿ ಶಿವ್ ವಿಹಾರ್‌ನ ರಾಜಧಾನಿ ಪಬ್ಲಕ್ ಸ್ಕೂಲ್‌ನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಅವರನ್ನು (ಎಫ್‌ಐಆರ್ 137/2020) ಮಾರ್ಚ್ 17ರಂದು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತ ನಂತರ, ಶಿವ್ ವಿಹಾರ್‌ನ ಡಿಆರ್‌ಪಿ ಮಾಧ್ಯಮಿಕ ಶಾಲೆಯ ಆಸ್ತಿನಾಶ, ವಿಧ್ವಂಸಕ ಕೃತ್ಯ ಮತ್ತು ಅತಿಕ್ರಮಣ ಆರೋಪದ ಮೇಲೆ(ಎಫ್‌ಐಆರ್ 134/2020)ಮೇ. 14ರಂದು ಮತ್ತೆ ಬಂಧಿಸಲಾಗಿತ್ತು.

ಎರಡನೇಯ ಬಾರಿ ಜಾಮೀನು ಪಡೆದ ನಂತರ ಸೆಪ್ಟೆಂಬರ್ 3ರಂದು ಇಲಿಯಾಸ್ ಮನೆಗೆ ಮರಳಿದಾಗ, ‘ತಾನು ಮುಸ್ಲಿಂ ಆಗಿರುವುದರಿಂದ ತನ್ನನ್ನು ಗುರಿಯಾಗಿಸಲಾಗುತ್ತಿದೆ” ಎಂದು ನುಡಿದರು.

“ಯೆ ಮಾಂಗ ರಹೇ ಥೇ ನಾ, ಆಜಾದಿ?”(ಇವರು ಸ್ವಾತಂತ್ರ್ಯ ಕೇಳ್ತಾ ಇದ್ದರಲ್ಲವೇ? ) ಎಂಬುದಾಗಿ ನನ್ನೊಂದಿಗೂ ಜೈಲಿನಲ್ಲಿದ್ದ ಸಹ ಮುಸ್ಲಿಮರೊಂದಿಗೆ ಪೊಲೀಸರು ಹೇಳುತ್ತಲೇ ಇದ್ದರು ಎಂದು ದಿ ವಯರ್‌ಗೆ ನೀಡಿದ ಸಂದರ್ಶನದಲ್ಲಿ ಇಲಿಯಾಸ್ ತಿಳಿಸಿದರು.

ಮೊದಲ ಪ್ರಕರಣದಲ್ಲಿ ಪೊಲೀಸರು ಇಲಿಯಾಸ್‌‌ರನ್ನು ಬಂಧಿಸಿದಾಗ, ಅವರನ್ನು ದಯಾಲ್‌ಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. “ಸಿಸಿಟಿವಿ ಕ್ಯಾಮೆರಾದಿಂದ ತೆಗೆದ ಜನಸಮೂಹದ ಹಿಂಸಾಚಾರದ ತುಣುಕನ್ನು ತೋರಿಸಲಾಯಿತು ಮತ್ತು ಜನಸಮೂಹದಲ್ಲಿದ್ದವರಲ್ಲಿ ತಾನು ಒಬ್ಬ ಎಂದು ಆರೋಪಿಸಿದರು. ಘಟನಾ ಸ್ಥಳದಲ್ಲಿ ತನ್ನ ಉಪಸ್ಥಿತಿಯನ್ನು ತೀವ್ರವಾಗಿ ನಿರಾಕರಿಸಿದಾಗ, ಅವರು ಆ ವೀಡಿಯೊದಲ್ಲಿರುವ 10 ಪುರುಷರನ್ನು ಹೆಸರಿಸಿದರೆ ತಕ್ಷಣ ತನ್ನನ್ನು ಬಿಡುಗಡೆ ಮಾಡಲಾಗುವುದು ಎಂಬುದಾಗಿ ಪೊಲೀಸರು ಹೇಳಿದರೆಂದು” ಆರೋಪಿಸಿದರು.

ನಾನು ವೀಡಿಯೊದಲ್ಲಿದ್ದ ಕೆಲವು ಹಿಂದೂಗಳನ್ನು ಹೆಸರಿಸಲು ಪ್ರಾರಂಭಿಸಿದಂತೆಯೇ, ಪೊಲೀಸರು ನನ್ನಲ್ಲಿ ಮುಸ್ಲಿಮರ ಹೆಸರನ್ನು ಹೇಳುವಂತೆ ಬಲವಂತಪಡಿಸಿದರು(ಜೈಸೆ ಹಿ ಮೈನೆ ಕುಚ್ ಹಿಂದೂ ಲೋಗೊನ್ ಕೆ ನಾಮ್ ದಿಯೆ, ತೋ ಪೋಲಿಸ್ ನೆ ಕಹಾ ಮುಸಲ್ಮಾನ್ ಕಾ ನಾಮ್ ಬತಾ) ಎಂದು ಇಲಿಯಾಸ್ ಹೇಳಿದರು.

ವಿಧ್ವಂಸಕ ಕೃತ್ಯದಲ್ಲಿ ಇಲಿಯಾಸ್ ಭಾಗಿಯಾಗಿರುವುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಅವರನ್ನು ಮಂಡೋಲಿ ಜೈಲಿಗೆ ಕಳುಹಿಸಲಾಯಿತು. ಅವರಿಗೆ ತೀವ್ರ ಭಯವಾಯಿತು. “ಮೇರೆ ಮಝ್ಹಬ್ ಕೊ ಮೇರಾ ಜುರ್ಮ್ ಬನಾ ದಿಯಾ (ಅವರು ನನ್ನ ಧರ್ಮವನ್ನು ನನ್ನ ಅಪರಾಧವನ್ನಾಗಿ ಮಾಡಿದರು)” ಎಂಬುದಾಗಿ ಅವರು ಹೇಳಿದರು.

ಪ್ರಸ್ತುತ ಇಲಿಯಾಸ್ ಪ್ರಕರಣವನ್ನು ನಿರ್ವಹಿಸುತ್ತಿರುವ ಅಪರಾಧ ವಿಭಾಗದ ಎಸ್.ಐ ಪಂಕಜ್ ಕುಮಾರ್ ಇಲಿಯಾಸ್‌ರವರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ದಯಾಲ್ಪುರದ ಎಸ್‌ಎಚ್‌ಒ ತರ್ಕೇಶ್ವರ ಸಿಂಗ್ ಅವರನ್ನು ಹಲವಾರು ಬಾರಿ ತಲುಪಲಾಗಿದ್ದರೂ ಪ್ರತಿಕ್ರಿಯೆಗೆ ಮುಂದಾಗಿಲ್ಲ ಎಂಬುದಾಗಿ ದಿ ವಯರ್ ಮಾಡಿದೆ.