ಭಜರಂಗದಳವೆಂಬುದೇ ಬಳಸಿ ಬಿಸಾಡಲ್ಪಡುವ ಸಂಘಟನೆ ಎಂಬುದು ಅದರ ನಾಯಕ ಮತ್ತು ಕಾರ್ಯಕರ್ತರಿಗೆ ಅರಿವಿದೆಯೇ ?- ಪತ್ರಕರ್ತ ನವೀನ್ ಸೂರಿಂಜೆ ಬರೆಯುತ್ತಾರೆ… ✍️

0
141

ಸನ್ಮಾರ್ಗ ವಾರ್ತೆ

ಭಜರಂಗದಳಕ್ಕೂ ಚೈತ್ರಾ ಕುಂದಾಪುರಗೂ ಸಂಬಂಧವಿಲ್ಲ. ಅವರನ್ನು ಭಾಷಣಕ್ಕೆ ಬಳಸುತ್ತಿದ್ದೆವಷ್ಟೆ ಎಂದು ಶರಣ್ ಪಂಪ್ ವೆಲ್ ಹೇಳಿದ್ದಾರೆ. ಇದು ಬಳಸಿ ಬಿಸಾಡುವ ಕೆಲಸವಲ್ಲವೇ ? ಇಷ್ಟಕ್ಕೂ ಭಜರಂಗದಳವೆಂಬುದೇ ಬಳಸಿ ಬಿಸಾಡಲ್ಪಡುವ ಸಂಘಟನೆ ಎಂಬುದು ಅದರ ನಾಯಕ ಮತ್ತು ಕಾರ್ಯಕರ್ತರಿಗೆ ಅರಿವಿದೆಯೇ ? ಇವತ್ತು ಚೈತ್ರಾ ಕುಂದಾಪುರಗೆ ಆದ ಗತಿಯೇ ನಾಳೆ ಭಜರಂಗದಳಕ್ಕೂ ಆಗಲಿದೆ ಎಂಬುದನ್ನು ಭಜರಂಗದಳ ಇತಿಹಾಸ ಮತ್ತು ವರ್ತಮಾನದಿಂದ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು.

2008 ಸೆಪ್ಟೆಂಬರ್ 14 ರಂದು ಭಜರಂಗದಳವು ಮಂಗಳೂರಿನಲ್ಲಿ ಚರ್ಚ್ ಗಳ ಮೇಲೆ ದಾಳಿ ನಡೆಸಿತ್ತು. ನಾನು ಪ್ರತ್ಯಕ್ಷದರ್ಶಿಯಾಗಿದ್ದ ಈ ಚರ್ಚ್ ದಾಳಿಯಲ್ಲಿ ನೂರಾರು ಕ್ರಿಶ್ಚಿಯನ್ ನನ್ ಗಳ ಮೇಲೆ ಭಜರಂಗದಳ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದರು. ಕೆಲ ಪತ್ರಕರ್ತರ ಪ್ರಚೋದನೆಯೂ ಈ ದಾಳಿಯಲ್ಲಿ ಕೆಲಸ ಮಾಡಿತ್ತು. ಇಡೀ ಜಗತ್ತು ಭಾರತವನ್ನು ಖಂಡಿಸುವಷ್ಟರ ಮಟ್ಟಿಗೆ ದಾಳಿ ಭೀತಿಯ ವಾತಾವರಣ ಸೃಷ್ಟಿಸಿತ್ತು. ಆಗ ಭಜರಂಗದಳದ ರಾಜ್ಯ ಸಂಚಾಲಕರಾಗಿದ್ದವರು ಮಹೇಂದ್ರ ಕುಮಾರ್.

ಮಹೇಂದ್ರ ಕುಮಾರ್ ನೇರವಾಗಿ ಚರ್ಚ್ ದಾಳಿಯಲ್ಲಿ ಭಾಗಿಯಾಗದೇ ಇದ್ದರೂ ಪತ್ರಿಕಾಗೋಷ್ಟೀ ನಡೆಸಿ “ಭಜರಂಗದಳವೇ ಚರ್ಚ್ ದಾಳಿ ನಡೆಸಿದೆ. ಮತಾಂತರ ತಡೆಯಲು ದಾಳಿ ಅನಿವಾರ್ಯ” ಎಂದಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಎಂ ಬಿ ಪುರಾಣಿಕ್ ಕೂಡಾ ಭಾಗವಹಿಸಿದ್ದರು. ಅವರು ಇನ್ನೂ ಮುಂದುವರೆದು “ಈ ದಾಳಿ ಮಾತ್ರವಲ್ಲ, ಮತಾಂತರ ನಿಲ್ಲದೇ ಇದ್ದರೆ ದಾಳಿಯೂ ಇನ್ನೂ ಮುಂದುವರೆಯಲಿದೆ” ಎಂದು ಬೆದರಿಕೆ ಒಡ್ಡಿದ್ದರು.

ಚರ್ಚ್ ದಾಳಿಯ ಸಮಯದಲ್ಲಿ ಬಿಜೆಪಿ ಸರ್ಕಾರವಿತ್ತು. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಆರ್ ಎಸ್ ಎಸ್ ಕಟ್ಟಾಳು ವಿ ಎಸ್ ಆಚಾರ್ಯ ಗೃಹ ಸಚಿವರಾಗಿದ್ದರು. ರಾಜ್ಯಪಾಲರು, ಕೇಂದ್ರದ ಮಾನವ ಹಕ್ಕು, ಮಹಿಳಾ ಆಯೋಗ, ಅಲ್ಪಸಂಖ್ಯಾತ ಆಯೋಗ, ಕೇಂದ್ರ ಗೃಹ ಇಲಾಖೆ ಸೇರಿದಂತೆ ಎಲ್ಲರೂ ರಾಜ್ಯ ಸರ್ಕಾರವನ್ನು ಪ್ರಶ್ನಿಸಲು ಶುರು ಮಾಡಿದರು.

2008 ಸೆಪ್ಟೆಂಬರ್ 19 ರಂದು ರಾಜ್ಯಕ್ಕೆ ಕೇಂದ್ರ ಅಲ್ಪಸಂಖ್ಯಾತ ಆಯೋಗ ಬೇಟಿ ನೀಡಿತ್ತು. ಮುಖ್ಯಮಂತ್ರಿ ಮತ್ತು ಗೃಹ ಸಚಿವ ವಿ ಎಸ್ ಆಚಾರ್ಯ ಜೊತೆ ಸಭೆ ನಡೆಸಿತ್ತು. ಆಗ ಗೃಹ ಸಚಿವ ವಿ ಎಸ್ ಆಚಾರ್ಯರು “ಬಿಜೆಪಿಗೂ ಭಜರಂಗದಳಕ್ಕೂ ಸಂಬಂಧ ಇಲ್ಲ. ಭಜರಂಗದಳದ ಈ ಕೃತ್ಯವನ್ನು ಸರ್ಕಾರ ಒಪ್ಪಿಕೊಳ್ಳುವುದಿಲ್ಲ. ನಾವು ತಕ್ಷಣ ಅದರ ಸಂಚಾಲಕರನ್ನು ಬಂಧಿಸುತ್ತೇವೆ” ಎಂದು ಕೇಂದ್ರಕ್ಕೆ ಭರವಸೆ ನೀಡಿದರು. ಒಕ್ಕಲಿಗ/ ಬಂಟರಾಗಿದ್ದ ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಜೈಲು ಸೇರಿದರು. ಅವರ ಜೊತೆಗೆ ಪತ್ರಿಕಾಗೊಷ್ಟೀ ಮಾಡಿದ ವಿಶ್ವಹಿಂದೂ ಪರಿಷತ್ತಿನ ಬ್ರಾಹ್ಮಣ ನಾಯಕ ಎಂ ಬಿ ಪುರಾಣಿಕ್ ಜೈಲು ಸೇರಲೇ ಇಲ್ಲ !

ಕರಾವಳಿಯ ನೈತಿಕ ಪೊಲೀಸ್ ಗಿರಿ, ಕೋಮುಗಲಭೆಯ ಇತಿಹಾಸದಲ್ಲಿ ಇಂತಹ ನೂರಾರು ಉದಾಹರಣೆಗಳು ಥಂಡಿಯಾಗಿ ಸಿಗುತ್ತದೆ.

ಬಿಜೆಪಿ ಎಂಬುದು ಆರ್ ಎಸ್ ಎಸ್ ನ ರಾಜಕೀಯ ವಿಭಾಗ. ಭಜರಂಗದಳ ಎಂಬುದು ಆರ್ ಎಸ್ ಎಸ್ ನ ಯುವ ವಿಭಾಗ. ಆದರೆ ತನಗೆ ಅಪಾಯವಿದೆ ಎಂದಾಗ ಬಿಜೆಪಿಯು ತನಗೂ ಭಜರಂಗದಳಕ್ಕೂ ಸಂಬಂಧವಿಲ್ಲ ಎಂದು ಹೇಳಿ ತಾನೇ ತನ್ನ ಹಿಂದುಳಿದ ವರ್ಗದ ಕಾರ್ಯಕರ್ತರನ್ನು ಜೈಲಿಗೆ ತಳ್ಳುತ್ತದೆ. ಹಿಂದುತ್ವದ ಕಾಲಾಳು ಸಂಘಟನೆಯಲ್ಲಿರುವ ಹಿಂದುಳಿದ ವರ್ಗದ ಯುವಕರು ಎಂತದ್ದೇ ಸ್ಥಾನಮಾನ ಹೊಂದಿದ್ದರೂ, ಭಾಷಣಗಳ ಮೂಲಕ ಎಷ್ಟೇ ಸ್ಟಾರ್ ಗಿರಿ ಪಡೆದುಕೊಂಡಿದ್ದರೂ ಅವರು ಬಳಸಿ ಬಿಸಾಡುವ ವಸ್ತುಗಳಷ್ಟೆ ! ಚೈತ್ರಾ ಕುಂದಾಪುರ ಅವರನ್ನು ಇಂದು ಭಜರಂಗದಳವು ಭಾಷಣಕ್ಕಾಗಿ ಬಳಸಿ ಬಿಸಾಡಿದೆ. ಮುಂದೆ ಭಜರಂಗದಳವನ್ನು ಬಿಜೆಪಿಯೋ, ವಿಹಿಂಪವೋ ಬಳಸಿ ಬಿಸಾಡುತ್ತದೆ. ಅಷ್ಟೆ.

ನವೀನ್ ಸೂರಿಂಜೆ