ದಾನಿಶ್ ಅಲಿಯನ್ನು ಭೇಟಿಯಾಗಿ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಎಂದ ರಾಹುಲ್!

0
5381

ಸನ್ಮಾರ್ಗ ವಾರ್ತೆ

ನವದೆಹಲಿ: ಲೋಕ ಸಭೆಯಲ್ಲಿ ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ಮುಸ್ಲಿಮ್ ಸಂಸದ, ದಾನಿಶ್ ಅಲಿ ಅವರ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಸಂಜೆ ಅವರನ್ನು ಭೇಟಿಯಾದರು.

ರಾಷ್ಟ್ರ ರಾಜಧಾನಿಯಲ್ಲಿರುವ ದಾನಿಶ್ ಅಲಿ ಅವರ ನಿವಾಸಕ್ಕೆ ಆಗಮಿಸಿದ ರಾಹುಲ್ ಗಾಂಧಿ, ದಾನಿಶ್ ಅಲಿ ಅವರನ್ನು ತಬ್ಬಿಕೊಳ್ಳುವ ಮೂಲಕ ಅವರಿಗೆ ಪ್ರೀತಿಯನ್ನು ಹಂಚಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ (ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಕಾನ್) ಎಂದು ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲೋಕಸಭೆಯಲ್ಲಿ ಮುಸ್ಲಿಮ್ ಸಂಸದ ದಾನಿಶ್ ಅಲಿಯನ್ನು ‘ಉಗ್ರ’, ‘ಪಿಂಪ್’ ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿಯಿಂದ ಅವ್ಯಾಚ ಪದಗಳಿಂದ ನಿಂದಿಸಲ್ಪಟ್ಟ ಬಳಿಕ ಈ ಭೇಟಿ ನಡೆದಿದೆ.

ದಾನಿಶ್ ಅಲಿ ವಿರುದ್ಧ ರಮೇಶ್ ಬಿಧುರಿ ಅವರ ಆಕ್ಷೇಪಾರ್ಹ ಹೇಳಿಕೆಗಳು ವಿರೋಧ ಪಕ್ಷಗಳ ಕೋಪಕ್ಕೆ ಕಾರಣವಾಗಿದ್ದು, ಬಿಧುರಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಸ್ಪೀಕರ್ ಈ ಕುರಿತು ವಿಚಾರಣೆ ನಡೆಸದಿದ್ದರೆ ಸಂಸತ್ತನ್ನು ತೊರೆಯುವುದಾಗಿ INDIA ಮೈತ್ರಿಕೂಟ ಎಚ್ಚರಿಕೆ ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ಪಿ ನಾಯಕ, ದಕ್ಷಿಣ ದೆಹಲಿಯ ಬಿಜೆಪಿ ಸಂಸದ ಬಿಧುರಿ ಅವರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಇಡೀ ರಾಷ್ಟ್ರವನ್ನು ಅವಮಾನಿಸಿದ್ದಾರೆ. ರಮೇಶ್ ಬಿಧುರಿ ವಿರುದ್ಧ ಬಿಜೆಪಿ ಯಾವ ಕ್ರಮ ತೆಗೆದುಕೊಳ್ಳುತ್ತದೆಯೇ ಅಥವಾ ಅವರನ್ನು ಬಡ್ತಿ ನೀಡಿ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸುತ್ತದೆಯೇ ಎಂಬುದು ಕಾದು ನೋಡಬೇಕಾದ ವಿಷಯವಾಗಿದೆ ಎಂದು ಹೇಳಿದರು.