ಮದ್ಯ ವಿರೋಧಿ ಪ್ರವಾದಿ(ಸ)

0
49

ಸನ್ಮಾರ್ಗ ವಾರ್ತೆ

✍️ ಸಿಹಾನ ಬಿ.ಎಂ.

ಯುದ್ಧ, ಹೆಣ್ಣು, ಮದ್ಯಗಳಲ್ಲಿ ಮುಳುಗಿರುವ ಅರಬೀ ಪ್ರದೇಶವು ಬದಲಾವಣೆಗೆ ತೆರೆದುಕೊಂಡ ಮಹಾ ಕ್ರಾಂತಿಯು ವಿಶ್ವದಾದ್ಯಂತ ಮಾದರಿಯಾಗಿದೆ. ಮಾನವೀಯತೆಯ ಸಂದೇಶಗಳನ್ನು ಒಳಗೊಂಡ ಈ ಕ್ರಾಂತಿಯು ದಿಢೀರನೆ ಪ್ರತ್ಯಕ್ಷವಾದುದಲ್ಲ. ಮಾತು, ನಡತೆಯಲ್ಲಿ ಮಾನವೀಯತೆಯನ್ನು ಜಿನುಗಿಸಿದ, ತನ್ನ ವೈಚಾರಿಕತೆಯಲ್ಲಿ ಅಂತರಂಗ, ಬಹಿರಂಗವನ್ನು ಶೋಧಿಸಿದ ಲೋಕನಾಯಕ ಪ್ರವಾದಿ ಮುಹಮ್ಮದರು(ಸ) ದೇವಾಜ್ಞೆಯನುಸಾರ ನಡೆಸಿದ ಈ ಕ್ರಾಂತಿಯು ಲೋಕಾಂತ್ಯದವರೆಗೂ ನೆಲೆ ನಿಲ್ಲುವಂತೆ ರೂಪಿಸಿದ ವೈಖರಿ ಮಹಾದ್ಭುತ.

ಇಸ್ಲಾಮಿನ ಆದೇಶಗಳು, ನಿಯಮ ನಿರ್ದೇಶನಗಳು ತಾತ್ಕಾಲಿಕವಾದುದಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗುವಂತದಲ್ಲ. ಕಾಲಕ್ಕೆ ತಕ್ಕಂತೆ ಕೋಲ ಕಟ್ಟುವಂತದಲ್ಲ. ಅವು ಶಾಶ್ವತವಾಗಿ ಉಳಿಯುವಂತಹದ್ದು. ಹೊರನೋಟಕ್ಕೆ ಕಟ್ಟುನಿಟ್ಟಾಗಿ, ಕಟು ಕಠಿಣವಾಗಿ ಗೋಚರಿಸಿದರೂ ಅದರಾಳಕ್ಕೆ ಇಳಿದಾಗ ಅದರ ಯುಕ್ತಿಯನ್ನು ಅರ್ಥ ಮಾಡಬಹುದು.

ಕೆಡುಕಿನಿಂದ ಒಳಿತಿನೆಡೆಗಿನ ಪಯಣದಲ್ಲಿ ದುಷ್ಟತೆಗಳ ಸಂಹಾರ, ಸುಧಾರಣೆಯ ಬಾಗಿಲುಗಳು ಕಾಣ ಸಿಗುವುವು. ಈ ಬಾಗಿಲುಗಳೊಳಗಿನ ಪ್ರವೇಶವು ದೇವನ ಮೇಲಿನ ಅಚಲವಾದ ವಿಶ್ವಾಸ, ನಂಬಿಕೆ, ಭರವಸೆಯ ತಳಹದಿಯಲ್ಲಿ ನಿಂತಿದೆ.

ಅಂತಹದೇ ಒಂದು ಕ್ರಾಂತಿ ಮದ್ಯ ನಿಷೇಧದಲ್ಲಿಯೂ ನಡೆದಿದೆ. ಪಾನಮತ್ತರಾಗಿ ತೇಲಾಡುತ್ತಿದ್ದ ಒಂದಡೀ ಜನಾಂಗವನ್ನು ಮದ್ಯದಿಂದ ವಿಮೋಚನೆಗೊಳಿಸುವಲ್ಲಿ ನಡೆಸಿದ ಪ್ರಯತ್ನಗಳು, ಹೋರಾಟಗಳು ಇಡೀ ಜಗತ್ತಿಗೆ ಮಾದರಿ. ಬದಲಾವಣೆಯೆಂಬುದು ಕಣ್ರೆಪ್ಪೆ ತೆರೆಯುವ ಅಂತರದಲ್ಲಿ ನಡೆಯುವುದಿಲ್ಲ. ಅದಕ್ಕೂ ಕಾಲ, ಸಮಯಗಳ ಅವಕಾಶಗಳೂ ಬೇಕು. ಒಮ್ಮೆಲೆ ಬದಲಾಯಿಸುವುದೆಂದರೆ ಅದಷ್ಡು ಪರಿಣಾಮಕಾರಿಯಾಗಿ ನಿಲ್ಲದು.

ಅದೇ ರೀತಿ ಇಸ್ಲಾಮಿನಲ್ಲಿ ಮದ್ಯ ನಿಷೇಧವು ಮೂರು ಹಂತಗಳಲ್ಲಿ ನಡೆದಿದೆ. “ಎಲ್ಲಾ ಕೆಡುಕುಗಳಿಗೆ ಮೂಲ ಕಾರಣ ಮದ್ಯ” ಎಂಬ ದೇವವಾಣಿ ಮೊದಲ ಬಾರಿ ಹೊರಟರೆ ನಂತರ “ನಮಾಝ್ ನಿರ್ವಹಿಸುವಾಗ ಮದ್ಯ ಮುಕ್ತರಾಗಿರಬೇಕು” ಎಂಬ ದೇವಾಜ್ಞೆ ಎರಡನೆಯ ಬಾರಿ ಹೊರಟಿತು. ಕೊನೆಯದಾಗಿ “ಸತ್ಯ ವಿಶ್ವಾಸಿಗಳೇ, ಮದ್ಯವನ್ನು ಸಂಪೂರ್ಣವಾಗಿ ನಿಷೇಧಗೊಳಿಸಲಾಗಿದೆ” ಎಂಬ ಆಜ್ಞೆಯೊಂದಿಗೆ ಮದ್ಯವನ್ನು ನಿಷೇಧಗೊಳಿಸಲಾಯಿತು.

ಮದ್ಯ ಎಂಬುದು ವ್ಯಸನಿಗೆ ಮಾತ್ರವಲ್ಲ. ಅದು ಇಡೀ ಕುಟುಂಬ, ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಲವು ಕುಟುಂಬಗಳ ಭದ್ರತೆಗೆ ಕಳಂಕವಾಗಿದೆ. ಒಂದು ಕುಟುಂಬದಲ್ಲಿ ಒಬ್ಬ ಮದ್ಯವ್ಯಸನಿಯಾದರೆ ಆ ಕುಟುಂಬ ಜೀವನಪೂರ್ತಿ ಕಣ್ಣೀರಿನಲ್ಲಿ ಕಳೆಯುವಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ವಿಚ್ಛೇದನೆ, ಆತ್ಮಹತ್ಯೆ, ಕೊಲೆಗಳಿಗೂ ಮದ್ಯ ಕಾರಣವಾಗುವುದೂ ಇದೆ. ಹೆಣ್ಣು ತನ್ನೆಲ್ಲ ಕನಸುಗಳನ್ನು ಹೆರಿಸಿದ, ಹೊರಿಸಿದ, ಜನ್ಮವಿತ್ತ ತನ್ನವರೊಂದಿಗೆ ಕಾಣುವವಳು. ತನ್ನವರೇ ದಾರಿ ತಪ್ಪಿದಾಗ, ಕೆಡುಕುಗಳ ದಾಸರಾದಾಗ ಆಕೆ ಕಟ್ಟಿದ ಆಶಾಗೋಪುರ ಆ ಕ್ಷಣವೇ ನೆಲಕಚ್ಚಿದಂತಾಗುವುದು.

ಮದ್ಯವ್ಯಸನಿಗಳ ಮನೆಯ ವಾತಾವರಣ ಕಲಹ, ಅಶಾಂತಿ, ಅಭದ್ರತೆಯಲ್ಲಿ ತುಂಬಿದೆ. ಅಲ್ಲಿರುವುದು ಬರೀ ಹೊಡೆದಾಟ, ಬಡಿದಾಟ, ಸೆಣಸಾಟಗಳು. ಅಂತಹ ಬದುಕಿನೊಂದಿಗೆ ಕಣ್ಣೀರು ಸುರಿಸುವ ಅದೆಷ್ಟೋ ಸಹೋದರಿಯರು ನಮ್ಮ ಮುಂದಿದ್ದಾರೆ. ಇನ್ನವರ ಮಕ್ಕಳ ಗತಿಯಂತೂ ಕೇಳುವುದೇ ಬೇಡ. ಅಲ್ಲಿ ಪ್ರೀತಿ, ಕರುಣೆ, ವಾತ್ಸಲ್ಯಗಳು ಅವರಿಗೆ ಕಾಣ ಸಿಗದು. ಬರೀ ನೋವು, ಕಣ್ಣೀರಿನ ಕರಿಛಾಯೆ ಅವರನ್ನಾವರಿಸಿರುತ್ತದೆ. ಮಕ್ಕಳು ಸಹ ಹಿರಿಯರ ಅದೇ ದಾರಿಯತ್ತ ಹಿಡಿದು ಹಾದಿ ತಪ್ಪಿದವರ ಸಾಲಿನಲ್ಲಿ ಸೇರಿರುವುದು ನಮ್ಮ ಸುತ್ತಮುತ್ತಲಿವೆ. ಇದರಿಂದಾಗಿ ಅಂತಹವರ ಮನೆಯ ಹೆಣ್ಣು ಮಕ್ಕಳು ಸಮಾಜದ ಮುಂದೆಯೂ ತಲೆತಗ್ಗಿಸುವಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಅಷ್ಟು ಮಾತ್ರವಲ್ಲ, ಅಂತಹ ಕುಟುಂಬಗಳು ಶಿಕ್ಷಣದ ಕೊರತೆ, ಆರೋಗ್ಯದ ಕೊರತೆ, ಆರ್ಥಿಕ ಕೊರತೆಗಳಿಂದಲೂ ಬಳಲುತ್ತಾರೆ. ಇವುಗಳಿಗೆಲ್ಲ ಮದ್ಯ ಕಾರಣವೆಂಬುದನ್ನು ಅಲ್ಲಗೆಳೆಯುವಂತಿಲ್ಲ.

ಇಸ್ಲಾಮ್ ಮದ್ಯವನ್ನು ನಿಷೇಧಗೊಳಿಸಿರುವುದು ಇಂತಹ ಎಲ್ಲಾ ಬಲವಾದ ಕಾರಣಗಳಿಂದಲೇ. ತನ್ನ ದೇಹವನ್ನು ತಾನೇ ಕೊಲ್ಲುವುದು ಪ್ರತಿಯೊಬ್ಬ ಮನುಷ್ಯನಿಗೂ ಇಸ್ಲಾಮ್ ನಿಷೇಧಗೊಳಿಸಿದೆ. ಮದ್ಯ ತನ್ನನ್ನು ಮಾತ್ರವಲ್ಲ ತನ್ನವರನ್ನೂ ಮಾನಸಿಕವಾಗಿಯೂ, ದೈಹಿಕವಾಗಿಯೂ ಕೊಲ್ಲುವ ಅಪಾಯಕಾರಿ ದ್ರವ. ಇಸ್ಲಾಮಿನ ಮದ್ಯ ನಿಷೇಧದಲ್ಲಿ ಹಲವಾರು ಯುಕ್ತಿಗಳು ಅಡಗಿವೆ. ಮದ್ಯವ್ಯಸನಿಯು ಕ್ರಮೇಣ ಮಾನಸಿಕವಾಗಿಯೂ, ದೈಹಿಕವಾಗಿಯೂ ತನ್ನ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ. ಜವಾಬ್ದಾರಿ, ಹೊಣೆಗಾರಿಕೆಗಳ ಬಗ್ಗೆ ನಿರ್ಲಕ್ಷ್ಯವನ್ನು ತೋರಿಸುತ್ತಾನೆ. ಆತನನ್ನು ಒಬ್ಬ ಉತ್ತಮ ವ್ಯಕ್ತಿಯಾಗಿ ರೂಪಿಸುವಲ್ಲಿ ಮದ್ಯ ತೊಡಕಾಗುತ್ತದೆ. ಕೆಡುಕುಗಳ ಆಗರವಾದ ಮದ್ಯವು ಮನೆ, ಕುಟುಂಬ, ಸಮಾಜದ ಸ್ವಾಸ್ಥ್ಯ ವನ್ನು ಹಾಳು ಮಾಡುತ್ತದೆ.

ಇಸ್ಲಾಮಿನ ಯಾವುದೇ ಆದೇಶ, ನಿರ್ದೇಶನ, ವಿಧಿಗಳು ಸುಮ್ ಸುಮ್ಮನೆ ಜಾರಿಯಾಗಿರುವುದಲ್ಲ. ಅವು ಸುಧಾರಣೆಯ ಹಾದಿಯನ್ನು ತೋರಿಸುವ ಪ್ರತೀಕಗಳು. ಸಮಾಜ, ಕುಟುಂಬದ ಸ್ವಾಸ್ಥ್ಯವನ್ನು ಕಾಪಾಡುವಂತಹವು. ಮನುಷ್ಯನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸುವಂತಹವು. ವೈಯಕ್ತಿಕ ಹಾಗೂ ಸಾಮೂಹಿಕ ಬದಲಾವಣೆಗೆ ವ್ಯತ್ಯಾಸಗಳಿವೆ. ಸಾರ್ವತ್ರಿಕವಾಗಿ ಹೊರಟ ಆಜ್ಞೆ, ಆದೇಶಗಳು ಇಡೀ ಮಾನವಕುಲ ಸಾಮೂಹಿಕ ಬದಲಾವಣೆಗೆ ತೆರೆದುಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಇಸ್ಲಾಮಿನ ಆದೇಶಗಳು ಸಾಮೂಹಿಕ ಬದಲಾವಣೆ, ಭದ್ರತೆಗೆ ಬುನಾದಿಯನ್ನು ಹಾಕಿದೆ.