ರಾಜ್ಯಸಭಾ ಟಿವಿಯನ್ನು BJP ಟಿವಿಯಾಗಿಸಿದ ಉಪರಾಷ್ಟ್ರಪತಿ ನಾಯ್ಡು! ಹಾಮಿದ್ ಅನ್ಸಾರಿ ಏನ್ಮಾಡಿದ್ದರು ಗೊತ್ತೇ?

0
1324

ಶೋಭನಾ ಕೆ. ನಾಯರ್

ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಮತ್ತು ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ನಡುವೆ ವ್ಯತ್ಯಾಸ ಏನು ಅನ್ನುವುದನ್ನು ರಾಜ್ಯಸಭಾ ಟಿವಿ ಚೆನ್ನಾಗಿ ವಿವರಿಸುತ್ತದೆ. ಉಪರಾಷ್ಟ್ರಪತಿಯಾದವರು ಸಹಜವಾಗಿ ರಾಜ್ಯಸಭೆಯ ಸಭಾಪತಿಯಾಗುತ್ತಾರೆ ಮತ್ತು ರಾಜ್ಯಸಭಾ ಟಿವಿಯ ಆಡಳಿತಾತ್ಮಕ ಮುಖ್ಯಸ್ಥರಾಗುತ್ತಾರೆ. ವೆಂಕಯ್ಯ ನಾಯ್ಡು ಅವರು ರಾಜ್ಯಸಭಾ ಟಿವಿಯ ಆಡಳಿತಾತ್ಮಕ ಮುಖ್ಯಸ್ಥರಾದ ಬಳಿಕ ಪ್ರಧಾನಿ ಮೋದಿಯವರ ಕಾರ್ಯಕ್ರಮಗಳನ್ನು ನೇರವಾಗಿ ಪ್ರಸಾರಮಾಡುವುದರಲ್ಲಿ ಅಭೂತಪೂರ್ವ ಹೆಚ್ಚಳ ಉಂಟಾಗಿದೆ. ಹಾಮಿದ್ ಅನ್ಸಾರಿಯವರು ಮುಖ್ಯಸ್ಥರಾಗಿದ್ದಾಗ ಮೋದಿಯವರ ಸರಕಾರಿ ಕಾರ್ಯಕ್ರಮಗಳು ಮಾತ್ರ ರಾಜ್ಯಸಭಾ ಟಿವಿಯಲ್ಲಿ ಪ್ರಸಾರವಾಗುತ್ತಿದ್ದುವು. ಅವರ ರಾಜಕೀಯ ರಾಲಿ ಮತ್ತು ಭಾಷಣಗಳ ಪ್ರಸಾರಕ್ಕೆ ನಿಷೇಧ ಇತ್ತು.
ಫೆ. ತಿಂಗಳಲ್ಲಿ ಮೋದಿಯವರ 21 ಕಾರ್ಯಕ್ರಮಗಳನ್ನು ರಾಜ್ಯಸಭಾ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಯಿತು. ಇದರಲ್ಲಿ ಅವರು ತ್ರಿಪುರ ಮತ್ತು ಇಟಾನಗರದಲ್ಲಿ ನಡೆಸಿದ ಚುನಾವಣಾ ರಾಲಿ ಮುಖ್ಯವಾದುವು. ತ್ರಿಪುರ ರಾಲಿಯನ್ನಂತೂ 3 ನಿಮಿಷಗಳ ಕಾಲ ನಿರಂತರ ನೇರ ಪ್ರಸಾರ ಮಾಡಲಾಯಿತು.
ಮಾರ್ಚ್ ತಿಂಗಳಲ್ಲಿ ಮೋದಿಯವರ ಕನಿಷ್ಟ 17 ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡಲಾಯಿತು. ಇದರಲ್ಲಿ, ಮೋದಿಯವರ ಉಪಸ್ಥಿತಿಯಲ್ಲಿ ನಡೆದ ತ್ರಿಪುರದ ಹೊಸ ಮುಖ್ಯಮಂತ್ರಿಯ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೋನ್ ಅವರ ಜೊತೆ ವಾರಣಾಸಿಯಲ್ಲಿ ಮಾಡಲಾದ ಸಾರ್ವಜನಿಕ ರಾಲಿ ಮುಖ್ಯವಾಗಿದೆ.
ಈ ಬೆಳವಣಿಗೆಯ ಬಗ್ಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ರಾಜ್ಯಸಭಾ ಟಿವಿಯು ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂದಿರುವ ತ್ರಣಮೂಲ ಕಾಂಗ್ರೆಸ್ ನ ಡೆರೆಕ್ ಒಬ್ರಿಯಾನ್ ಮತ್ತು ಕಾಂಗ್ರೆಸ್ ಮುಖಂಡ ಗುಲಾಂ ನೆಬಿ ಆಝಾದ್ ರು, ರಾಜ್ಯಸಭಾ ಟಿವಿಯನ್ನು ಕೇಂದ್ರಸರಕಾರವು BJP ಟಿವಿಯಾಗಿ ಪರಿವರ್ತಿಸಿದೆ ಎಂದು ಟೀಕಿಸಿದ್ದಾರೆ.