ವ್ಯಾಪಾರದ ಝಕಾತ್?

0
2727

ವ್ಯಾಪಾರದ ಝಕಾತ್?
@ ಅಬೂರಾಯಿಫ್, ಮಡಿಕೇರಿ
? ವ್ಯಾಪಾರದ ಝಕಾತನ್ನು ಲೆಕ್ಕ ಮಾಡಿ ನೀಡುವುದು ಹೇಗೆ?
ವ್ಯಾಪಾರದ ಝಕಾತನ್ನು ವಾರ್ಷಿಕವಾಗಿ ಲೆಕ್ಕ ಹಾಕಿ ನೀಡಬೇಕಾಗಿದೆ. ನಾಣ್ಯ ಅಥವಾ ಚಿನ್ನದ ನಿಸಾಬ್ (ಝಕಾತ್ ಅನ್ವಯಿಸುವ ಪ್ರಮಾಣ) ವ್ಯಾಪಾರದ ನಿಸಾಬ್ ಅಗಿದೆ. ವ್ಯಾಪಾರ ಪ್ರಾರಂಭಿಸಿ ಒಂದು ವರ್ಷ ಕಳೆಯುವಾಗ ವ್ಯಾಪಾರದ ಸರಕು, ಕೈಯಲ್ಲಿರುವ ಮೊತ್ತ, ಹೊರಗಿನಿಂದ ದೊರೆಯಲಿಕ್ಕೆ ಬಾಕಿ ಇರುವುದು ಇತ್ಯಾದಿಗಳನ್ನೆಲ್ಲ ಲೆಕ್ಕ ಹಾಕಬೇಕು. ದೊರೆಯಲಿಕ್ಕಿರುವ ಸಾಲದಿಂದ ದೊರೆಯಬಹುದು ಎಂಬ ನಿರೀಕ್ಷೆ ಇಲ್ಲದೆ ಇದ್ದರೆ ಅಂತಹ ಸಾಲಗಳನ್ನು ಇದರಿಂದ ಹೊರಗಿರಿಸಬಹುದಾಗಿದೆ. ಅದೇ ರೀತಿ ನೀಡಲಿಕ್ಕಿದ್ದರೆ ಅದನ್ನೂ ಲೆಕ್ಕದಿಂದ ಹೊರಗಿರಿಸಬಹುದಾಗಿದೆ. ವ್ಯಾಪಾರದ ಸರಕನ್ನು ಲೆಕ್ಕ ಹಾಕುವಾಗ ಅಂಗಡಿಯ ಕಟ್ಟಡ, ಶೆಲ್ಫ್‍ಗಳು, ತಕ್ಕಡಿ, ಅಳತೆಯ ಉಪಕರಣಗಳು ಮುಂತಾದ ಖಾಯಂ ವಸ್ತುಗಳ ಮೌಲ್ಯವನ್ನು ಸೇರಿಸಬೇಕಾಗಿಲ್ಲ. ಉಪಕರಣಗಳು ಎಂಬ ನೆಲೆಯಲ್ಲಿ ಅವುಗಳು ಝಕಾತ್‍ನಿಂದ ಹೊರಗು ಳಿಯುತ್ತದೆ. ಇವುಗಳನ್ನೆಲ್ಲಾ ಹೊರಗಿರಿಸಿ ವ್ಯಾಪಾರದ ಸರಕು, ಕೈಯಲ್ಲಿರುವ ಸಂಖ್ಯೆ ಸಿಗಬಹುದೆಂದು ಖಾತ್ರಿ ಇರುವ ಸಾಲಗಳು ಸೇರಿ ಒಟ್ಟು 85 ಗ್ರಾಂ ಚಿನ್ನಕ್ಕೆ ಸಮಾನ ಅಥವಾ ಅದಕ್ಕಿಂತ ಹೆಚ್ಚಾದರೆ ಅದಕ್ಕೆ ಎರಡೂವರೆ ಶೇಕಡಾ ಝಕಾತ್ ನೀಡಬೇಕಾಗಿದೆ. ಝಕಾತ್‍ನ ಹಣವನ್ನೇ ನೀಡಬೇಕೆಂದೇನಿಲ್ಲ. ವ್ಯಾಪಾರದ ಸರಕುಗಳನ್ನೂ ಆಗಬಹುದು. ಅಂದರೆ, ಧಾನ್ಯದ ವ್ಯಾಪಾರಿಯು ಧಾನ್ಯವನ್ನು, ಬಟ್ಟೆ ವ್ಯಾಪಾರಿಯು ಬಟ್ಟೆಯನ್ನು ಝಕಾತಾಗಿ ನೀಡಬಹುದಾಗಿದೆ.
ಈ ವಿಷಯದಲ್ಲಿ ಹಿಂದಿನಿಂದಲೇ ವಿದ್ವಾಂಸರ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಉದಾಹರಣೆಗೆ, ನಿಸಾಬ್ ವರ್ಷಾರಂಭದಲ್ಲೂ ವರ್ಷಾಂತ್ಯದಲ್ಲೂ ಇರಬೇಕು ಎಂದು ಕೆಲವರು ಅಭಿಪ್ರಾಯ ಹೊಂದಿದ್ದಾರೆ. ವರ್ಷವು ಪೂರ್ತಿಯಾಗುವುದರ ಮಧ್ಯೆ ಯಾವಾಗಲಾದರೂ ನಿಸ್ವಾಬ್ ಕಡಿಮೆಯಾದರೆ ಆ ವರ್ಷ ಝಕಾತ್ ನೀಡಬೇಕಾಗಿಲ್ಲ ಎಂದು ಅಭಿಪ್ರಾಯ ಹೊಂದಿದವರೂ ಇದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ ನಿಸಾಬ್‍ನಲ್ಲಿ ಕಡಿಮೆಯಾಗದ ಮೌಲ್ಯವನ್ನು ವರ್ಷಪೂರ್ತಿಯಾಗಿ ನಿರ್ವಹಣೆ ಮಾಡಿದರೆ ಮಾತ್ರ ಝಕಾತ್ ಅನ್ವಯವಾಗುತ್ತದೆ. ಇಂತಹ ಅಭಿಪ್ರಾಯವನ್ನು ಪ್ರಕಟ ಪಡಿಸಿದವರು ಶ್ರೇಷ್ಠ ವಿದ್ವಾಂಸರೇ ಆಗಿದ್ದಾರೆ. ಅವರಿಗೆ ಅವರದೇ ಆದ ಸಮರ್ಥನೆಗಳಿವೆ. ಭಿನ್ನಾಭಿಪ್ರಾಯಗಳ ಮಧ್ಯೆ ಒಂದು ಏಕೀಕರಣವಾದ ಸ್ಥಿತಿಯಲ್ಲಿ ಓರ್ವ ಸಾಮಾನ್ಯ ವ್ಯಕ್ತಿಗೆ ತನ್ನ ಬಾಧ್ಯತೆಯನ್ನು ಸರಳವಾಗಿ ನಿರ್ವಹಿಸಲು ಮೇಲೆ ತಿಳಿಸಲಾದ ರೀತಿಯು ಸಾಕಾಗಬಹುದು.