ಹಣದ ಬರ: ಆಂಧ್ರ, ತೆಲಂಗಾಣಗಳಲ್ಲಿ ಬ್ಯಾಂಕುಗಳು ತತ್ತರ

0
1150

ಹೈದರಾಬಾದ್: ಆಂದ್ರ ಪ್ರದೇಶ ಮತ್ತು ತೆಲಂಗಾಣ ಹಣದ ಬರ ಅನುಭವಿಸುತ್ತಿದೆ. ದೈನಂದಿನ ಖರ್ಚುಗಳಿಗೆ ಹಣವಿಲ್ಲದೆ ಬ್ಯಾಂಕುಗಳು ಪರದಾಡುವ ಸ್ಥಿತಿ ಉದ್ಭವಿಸಿದೆ. ಸಮಸ್ಯೆ ನೀಗಿಸಲು ಕೇರಳ ಮತ್ತಿತರ ರಾಜ್ಯಗಳನ್ನು ಸಾಲಕ್ಕಾಗಿ ಅವಲಂಭಿಸಬೇಕಾಗಿದೆ. ಕಳೆದೆರಡು ತಿಂಗಳಿಂದ ಏ.ಟಿ.ಎಮ್ ಮತ್ತು ಬ್ಯಾಂಕುಗಳಲ್ಲಿ ಹಣ ಲಭ್ಯವಿಲ್ಲ.
ಕೇರಳ, ಮಹಾರಾಷ್ಟ್ರ ಮುಂತಾದೆಡೆಗಳಿಂದ ತೆಲಂಗಾಣಕ್ಕೆ ಹಣ ಕಳುಹಿಸಲಾಗುತ್ತಿದೆ. ಆಂಧ್ರ ಪ್ರದೇಶವು ಒಡಿಶಾ, ತಮಿಳುನಾಡಿನಿಂದ ಹಣವನ್ನು ಬಳಸುತ್ತಿದೆ. ಕಳೆದ ಮೂರು ತಿಂಗಳಿಂದ ಸ್ಥಳೀಯ ಸಣ್ಣ ಸಣ್ಣ ಬ್ಯಾಂಕುಗಳ ಏ.ಟಿ.ಎಂ ಗಳು ಮುಚ್ಚಿವೆ.
2017 ಸೆಪ್ಟ೦ಬರ್ ನಿಂದ ರಿಸರ್ವ್ ಬ್ಯಾಂಕು 2 ಸಾವಿರದ ನೋಟು ಬಿಡುಗಡೆ ಮಾಡುತ್ತಿಲ್ಲ. ಇದರಿಂದಾಗಿ ಎರಡು ಸಾವಿರದ ನೋಟಿಗೆ ತೀವ್ರ ಕೊರತೆ ಉಂಟಾಗಿದೆ. ನೋಟು ರದ್ದತಿಯ ನಂತರದ ಸಮಸ್ಯೆಗಳಿಂದ ಇನ್ನೂ ಹೊರ ಬರಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನವರ ಸಂಬಳಗಳು ಬ್ಯಾಂಕುಗಳ ಮೂಲಕವೇ ರವಾನೆಯಾಗುತ್ತಿರುವುದರಿಂದ ಇದು ಹೆಚ್ಚು ತ್ರಾಸದಾಯಕವಾಗಿದೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣದ ಬಳಿಕ ದಿವಾಳಿಯಾಗುತ್ತಿರುವ ಆರ್ಥಿಕ ಸಂಸ್ಥೆಗಳ ನೆರವಿಗಾಗಿ ಕೇಂದ್ರ ಸರಕಾರವು ತಂದ (ಎಫ್.ಆರ್.ಡಿ.ಐ)ಮಸೂದೆಯಿಂದಾಗಿ ಜನರು ಬ್ಯಾಂಕುಗಳಿಂದ ದೂರವಾಗತೊಡಗಿದರು. ಇದು ಬ್ಯಾಂಕುಗಳಲ್ಲಿ ಹಣದ ಕ್ಷಾಮ ತಲೆದೋರಲು ಕಾರಣವಾಗಿದೆ. ಫಿಕ್ಸಿಂಗ್ ಡೆಪಾಸಿಟ್ ಮತ್ತು ಸೇವಿಂಗ್ ಖಾತೆಗಳನ್ನು ಸ್ಥಗಿತ ಗೊಳಿಸಿದ ಜನರು ವ್ಯಾಪಕವಾಗಿ ತಮ್ಮ ಹಣವನ್ನು ಹಿಂಪಡೆದರು. ಇದು ದಿನೇ ದಿನೇ ವರ್ಧಿಸಿತು. ಅನಿರೀಕ್ಷಿತವಾದ ಈ ಬೆಳವಣಿಗೆಗಳು ಬ್ಯಾಂಕಿಂಗ್ ರಂಗಕ್ಕೆ ಮಾರಕ ಏಟು ನೀಡಿದೆ.