ಅಫ್ಘಾನಿಸ್ತಾನದಲ್ಲಿ ಬಂದೂಕುಧಾರಿ ತಂಡದಿಂದ ದಾಳಿ: 100 ಮಂದಿ ನಾಗರಿಕರು ಮೃತ್ಯು

0
548

ಸನ್ಮಾರ್ಗ ವಾರ್ತೆ

ಕಂದಹಾರ: ಅಫ್ಘಾನಿಸ್ತಾನದಲ್ಲಿ ಬಂದೂಕುಧಾರಿ ತಂಡ ನಡೆಸಿದ ದಾಳಿಯಲ್ಲಿ 100 ಮಂದಿ ನಾಗರಿಕರು ಹತ್ಯೆಯಾಗಿದ್ದಾರೆ. ಕಂದಹಾರ್ ಪ್ರಾಂತದ ಸ್ಪಿನ್ ಬೊಲ್ಡಾಕ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಟೋಲೊ ನ್ಯೂಸ್ ವರದಿ ಮಾಡಿದೆ.

ಅಫ್ಘಾನ್ ಇಂಟಿರಿಯರ್ ಮಿನಿಸ್ಟ್ರಿ ದಾಳಿಯನ್ನು ದೃಢಪಡಿಸಿದೆ. ತಾಲಿಬಾನ್ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಭಯೋತ್ಪಾದಕರು ಸ್ಪಿನ್ ಬೊಲ್ಡಾಕ್ ಜಿಲ್ಲೆಯಲ್ಲಿ ನಿರಪರಾಧಿಗಳ ಮೇಲೆ ದಾಳಿ ನಡೆಸಿದರು. ಗುಂಡು ಹಾರಾಟದಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆ. ಇವರು ಜನರ ಮನೆಯನ್ನು ದರೋಡೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಸ್ಪಿನ್ ಬೋಲ್ಡಾಕ್​​ನಲ್ಲಿ ಹಲವಾರು ನಾಗರಿಕರ ಮೃತದೇಹಗಳು ಇನ್ನೂ ನೆಲದ ಮೇಲೆ ಬಿದ್ದಿವೆ ಎಂದು ಅಫಘಾನ್ ಭದ್ರತಾ ಸಂಸ್ಥೆಗಳು ತಿಳಿಸಿವೆ. “ಅವರು (ತಾಲಿಬಾನ್) ಸಾರ್ವಜನಿಕರ ಮೂಲಸೌಕರ್ಯಗಳ ನಾಶ ಸೇರಿದಂತೆ ನಾಗರಿಕರ ಮತ್ತು ಸರ್ಕಾರಿ ಕಚೇರಿಗಳ ಮನೆಗಳನ್ನು ಲೂಟಿ ಮಾಡಿದ್ದಾರೆ” ಎಂದು ರಕ್ಷಣಾ ಸಚಿವಾಲಯದ ವಕ್ತಾರ ರೋಹುಲ್ಲಾ ಅಹ್ಮದ್ಜಾಯಿ ಹೇಳಿದ್ದಾರೆ. ಆದಾಗ್ಯೂ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ಆರೋಪಗಳನ್ನು ತಿರಸ್ಕರಿಸಿದ್ದಾರೆ.

ಕಳೆದ ವಾರ ತಾಲಿಬಾನ್ ಸ್ಪಿನ್ ಬೋಲ್ಡಾಕ್ ಅನ್ನು ವಶಪಡಿಸಿಕೊಂಡಿದೆ. ಫ್ರಾನ್ಸ್ 24 ಬಿಡುಗಡೆ ಮಾಡಿದ ವಿಡಿಯೊ ತುಣುಕಿನಲ್ಲಿ, ತಾಲಿಬಾನ್ ಸದಸ್ಯರು ಪಟ್ಟಣದಾದ್ಯಂತ ಅಡ್ಡಾಡುವುದು, ಮನೆಗಳನ್ನು ಲೂಟಿ ಮಾಡುವುದು ಮತ್ತು ಪ್ರದೇಶದಿಂದ ಪರಾರಿಯಾಗಿದ್ದ ಸರ್ಕಾರಿ ಅಧಿಕಾರಿಗಳ ವಾಹನಗಳನ್ನು ವಶಪಡಿಸಿಕೊಳ್ಳುವುದು ಕಂಡುಬಂದಿದೆ.

ಕಳೆದ ವಾರ ಜಿಲ್ಲೆಯ ಅಧಿಕಾರವನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಿತ್ತು. ಇದರ ನಂತರ ಭಯೋತ್ಪಾದಕರು ನಗರದ ಅಂಗಡಿ, ಮನೆಗಳನ್ನು ದೋಚುತ್ತಿರುವ ದೃಶ್ಯಗಳು ಪ್ರಚಾರವಾಗುತ್ತಿದೆ.