‘ಅಲ್ಪಸಂಖ್ಯಾತ’ ಶಬ್ದಕ್ಕೆ ಹೊಸ ವ್ಯಾಖ್ಯಾನ ನೀಡಲು ಸುಪ್ರೀಂ ಕೋರ್ಟಿನಿಂದ 3 ತಿಂಗಳ ಗಡುವು

0
970

ಹೊಸದಿಲ್ಲಿ: ‘ಅಲ್ಪಸಂಖ್ಯಾತ’ ಶಬ್ದಕ್ಕೆ ಹೊಸ ಪರಿಭಾಷೆಯನ್ನು( ವ್ಯಾಖ್ಯಾನ) ನೀಡುವುದರ ಕುರಿತು ನಿರ್ಧರಿಸಲು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ(ಎನ್‍ಸಿಎಂ)ಕ್ಕೆ ಸರ್ವೋಚ್ಛ ನ್ಯಾಯಾಲಯವು(ಸುಪ್ರೀಂ ಕೋರ್ಟು) ಮೂರು ತಿಂಗಳ ಸಮಯವಕಾಶವನ್ನು ನೀಡಿದೆ.

ಸೋಮವಾರ ಅಮರ್‍ ಉಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯ ಪ್ರಕಾರ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂಕೋರ್ಟಿನ ಪೀಠ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯರಿಗೆ ಅಲ್ಪಸಂಖ್ಯಾತ ಸಮಿತಿಗೆ ತನ್ನ ಮನವಿಯನ್ನು ಪುನಃ ಸಲ್ಲಿಸುವಂತೆ ಸೂಚಿಸಿದೆ. ಈ ಅರ್ಜಿ ಸಲ್ಲಿಕೆಯಾದ ಮೂರು ತಿಂಗಳ ಒಳಗೆ ಅಲ್ಪಸಂಖ್ಯಾತ ಆಯೋಗ ‘ಅಲ್ಪಸಂಖ್ಯಾತ’ ಶಬ್ದಕ್ಕೆ ಪುನರ್‍ ವ್ಯಾಖ್ಯೆ ನೀಡುವ ಕುರಿತು ನಿರ್ಧರಿಸಬೇಕಾಗಿದೆ.

ಉಪಾಧ್ಯಾಯರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ “ರಾಷ್ಟ್ರ ವ್ಯಾಪಿ ಜನಸಂಖ್ಯೆಯ ಅಂಕಿ ಅಂಶಗಳ ಬದಲಾಗಿ ರಾಜ್ಯದಲ್ಲಿ ಒಂದು ಸಮುದಾಯದ ಜನಸಂಖ್ಯೆಯ ಆಧಾರದಲ್ಲಿ ಅಲ್ಪಸಂಖ್ಯಾತ ಶಬ್ದವನ್ನು ಮರು ವ್ಯಾಖ್ಯಾನಿಸಬೇಕು ಮತ್ತು ಅದರಲ್ಲಿ ಮರು ಅವಲೋಕನ ನಡೆಸುವ ಅಗತ್ಯವಿದೆ” ಎಂದು ಹೇಳಿದ್ದರು. ಅರ್ಜಿದಾರರು “ಹಿಂದೂ ರಾಷ್ಟ್ರವ್ಯಾಪಿ ಸಂಖ್ಯೆಯಾಧಾರದಲ್ಲಿ ಬಹುಸಂಖ್ಯಾತರಾಗಿದ್ದಾರೆ. ಆದರೆ ಪೂರ್ವೋತ್ತರದ ಕೆಲವು ರಾಜ್ಯಗಳಲ್ಲಿ ಮತ್ತು ಜಮ್ಮು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ.ಹಿಂದೂ ಸಮುದಾಯ ಅಲ್ಪಸಂಖ್ಯಾತರಾಗಿರುವಲ್ಲಿ ಅಲ್ಲಸಂಖ್ಯಾತರಿಗೆ ಸಿಗುವ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ” ಎಂದು ಅವರು ವಾದಿಸಿದ್ದರು.

ಆದ್ದರಿಂದ ಅಲ್ಪಸಂಖ್ಯಾತರ ಸಮಿತಿ ‘ಅಲ್ಪಸಂಖ್ಯಾತ’ ಶಬ್ದಕ್ಕೆ ಹೊಸ ಪರಿಭಾಷೆ ನೀಡುವ ಕುರಿತು ಅವಲೋಕನ ನಡೆಸಬೇಕೆಂಬ ಅರ್ಜಿದಾರರ ಸದ್ರಿ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಅಲ್ಪಸಂಖ್ಯಾತ ಆಯೋಗಕ್ಕೆ ಮರುವ್ಯಾಖ್ಯಾನದ ಕುರಿತು ನಿರ್ಧರಿಸಲು ಮೂರು ತಿಂಗಳ ಸಮಯವಕಾಶ ನಿಗದಿ ಪಡಿಸಿದೆ.