ತ್ರಿಶೂರ್,ಎ.2: ತೃಶೂರಿನ ಲೋಕಸಭಾ ಕ್ಷೇತ್ರದಿಂದ ನಟ ಸುರೇಶ್ ಗೋಪಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿರುವುದರಿಂದ ಬಿಡಿಜೆಎಸ್ ಅಭ್ಯರ್ಥಿ ತುಷಾರ್ ವೆಳ್ಳಾಪ್ಪಳ್ಳಿ ತೃಶೂರಿನಿಂದ ವಯನಾಡಿಗೆ ವಲಸೆ ಹೋಗಿದ್ದಾರೆ. ಆದ್ದರಿಂದ ತೃಶೂರಿನಲ್ಲಿ ಸುರೇಶ್ ಗೋಪಿಯನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಇದೇ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸುರೇಶ್ಗೋಪಿಯನ್ನು ದಿಲ್ಲಿಗೆ ಕರೆಯಿಸಿಕೊಂಡಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್, ತೃಶೂರ್ ಜಿಲ್ಲಾಧ್ಯಕ್ಷ ನಾಗೇಶ್, ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಟಾಮ್ ವಡಕ್ಕನ್ ಮತ್ತು ಸುರೇಶ್ ಗೋಪಿಯ ಹೆಸರುಗಳು ತೃಶೂರ್ ಲೋಕಸಭಾ ಕ್ಷೇತ್ರದಿಂದ ಪರಿಗಣನೆಯಲ್ಲಿದೆ. ಆರೆಸ್ಸೆಸ್ ನಾಗೇಶ್ರ ಹೆಸರನ್ನು ಸೂಚಿಸಿದೆ ಎನ್ನಲಾಗುತ್ತಿದೆ. ಆದರೆ, ನಾಗೇಶ್ರ ಅಭ್ಯರ್ಥಿತನದ ಕುರಿತು ಕೇಂದ್ರ ನಾಯಕರಲ್ಲಿ ಸಹಮತ ಇಲ್ಲ. ಸುರೇಶ್ ಗೋಪಿಯವರ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.












