ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 13: ದಿಲ್ಲಿ ವಿಧಾನಸಭಾ ಗೆಲುವಿನಲ್ಲಿ ಆಮ್ ಆದ್ಮಿಗೆ ಪ್ರಚಂಡ ಗೆಲುವು ಸಿಕ್ಕ 24 ಗಂಟೆಗಳೊಳಗೆ ಪಾರ್ಟಿಗೆ ಹತ್ತು ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಹೇಳಿಕೊಂಡಿದೆ. ಗುರುವಾರ ಬೆಳಗ್ಗೆ ಈ ವಿವರವನ್ನು ಅದು ಟ್ವೀಟ್ ಮಾಡಿದೆ.
ಆಮ್ ಆದ್ಮಿ ಪಾರ್ಟಿಗೆ 9871010101 ನಂಬರ್ ಗೆ ಮಿಸ್ ಕಾಲ್ ಮಾಡಿ ಪಾರ್ಟಿಗೆ ಸೇರಬಹುದೆಂದು ಆಮ್ ಆದ್ಮಿ ಟ್ವೀಟ್ ಮಾಡಿತ್ತು.
ಎಪ್ಪತ್ತು ವಿಧಾನಸಭೆ ಸೀಟಿರುವ ದಿಲ್ಲಿಯಲ್ಲಿ ಆಮ್ ಆದ್ಮಿಪಾರ್ಟಿ ಚುನಾವಣೆಯಲ್ಲಿ 62 ಸೀಟುಗಳನ್ನು ಗೆದ್ದು ಪ್ರಚಂಡ ವಿಜಯ ದಾಖಲಿಸಿತ್ತು. ಆಮ್ ಆದ್ಮಿ ಪಾರ್ಟಿ ಮೂರನೇ ಬಾರಿ ದಿಲ್ಲಿಯ ಅಧಿಕಾರ ಚುಕ್ಕಾಣಿ ಹಿಡಿದಿದೆ. ಬಿಜೆಪಿಗೆ ಕೇವಲ ಎಂಟು ಸೀಟುಗಳು ಸಿಕ್ಕಿದ್ದರೆ ಕಾಂಗ್ರೆಸ್ ಶೂನ್ಯ ಗಳಿಕೆ ಮಾಡಿತ್ತು.
2012ರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿ ಅಸ್ತಿತ್ವ ಕಂಡಿತು. ಕಾಂಗ್ರೆಸ್ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಜನರ ಭಾವನೆಯನ್ನು ಉಪಯೋಗಿಸಿ ಆಮ್ ಆದ್ಮಿ ದಿಲ್ಲಿಯಲ್ಲಿ ರಂಗಪ್ರವೇಶಿಸಿತ್ತು. ಇದರ ಫಲವಾಗಿ 2015ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬಂದಿತ್ತು. ಆಗಲೂ ಕಾಂಗ್ರೆಸ್ಗೆ ಒಂದೂ ಸೀಟು ಸಿಕ್ಕಿರಲಿಲ್ಲ.












