ಬಿಜೆಪಿಯ ಟೋಪಿ ಧರಿಸಲು ನಿರಾಕರಿಸಿದ ಮುಸ್ಲಿಂ ವಿದ್ಯಾರ್ಥಿನಿಯ ಅಮಾನತು!

0
1067

ಆಗ್ರಾ, ಎ.9: ಬಿಜೆಪಿಯ ಕೇಸರಿ ಟೋಪಿ ಧರಿಸಲು ನಿರಾಕರಿಸಿದ್ದಕ್ಕಾಗಿ ಸಹಪಾಠಿಗಳಿಂದ ಅಪಮಾನಕ್ಕೊಳಗಾಗಿದ್ದ 22ವರ್ಷದ ಮುಸ್ಲಿಂ ವಿದ್ಯಾರ್ಥಿನಿಯನ್ನು ಕಾಲೇಜು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಕಳೆದ ವಾರ ಆಗ್ರಾದಲ್ಲಿ ಅಧ್ಯಯನ ಪ್ರವಾಸದ ವೇಳೆ ಸಹಪಾಠಿಗಳು ವಿದ್ಯಾರ್ಥಿನಿಯನ್ನು ಬಿಜೆಪಿ ಟೋಪಿ ಧರಿಸಲು ಬಲವಂತಪಡಿಸಿದ್ದರು. ಅದಕ್ಕೊಪ್ಪದ ವಿದ್ಯಾರ್ಥಿನಿಯನ್ನು ಸಹಪಾಠಿಗಳು ಅಪಮಾನಿಸಿದರು. ನಂತರ ವಿದ್ಯಾರ್ಥಿನಿ ಕಾಲೇಜು ಅಧಿಕಾರಿಗಳಿಗೆ ದೂರು ನೀಡಿದ್ದಳು. ಆದರೆ ದೂರು ಪರಿಹಾರ ವಿಭಾಗದಲ್ಲಿ ಹೇಳಿಕೆ ನೀಡಲು ಮುಸ್ಲಿಂ ವಿದ್ಯಾರ್ಥಿನಿ ವಿಫಲಳಾಗಿದ್ದಾಳೆ ಎಂದು ಈಗ ಅವಳನ್ನೆ ಕಾಲೇಜು ಅಧಿಕಾರಿಗಳು ಅಮಾನತು ಮಾಡಿದ್ದಾರೆ. ಇದರ ವಿರುದ್ಧ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ. ತನು ಎದುರಿಸಿದ ಕೆಟ್ಟ ಅನುಭವಗಳನ್ನು ವಿವರಿಸಿ ಮೀರತ್ ಸೀನಿಯರ್ ಎಸ್ಪಿಗೆ ವಿದ್ಯಾರ್ಥಿನಿ ದೂರು ನೀಡಿದ್ದು ದೂರು ಹಿಂಪಡೆಯಲು ತನ್ನ ಮೇಲೆ ತೀವ್ರ ಒತ್ತಡವಿದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಎಪ್ರಿಲ್ ಮೂರರಂದು ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ನಂತರ ಹಲವು ಸಲ ಹೇಳಿದರು ಕಾಲೇಜಿನ ದೂರು ಪರಿಹಾರ ವಿಭಾಗದಲ್ಲಿ ಅವಳು ಹಾಜರಾಗಿಲ್ಲ. ಇದು ಕಾಲೇಜಿನಿಂದ ಅಮಾನತುಗೊಳಿಸಲು ಕಾರಣವೆಂದು ಕಾಲೇಜು ನಿರ್ದೇಶಕ ಎಸ್‍ಎಂ ಶರ್ಮ ಹೇಳಿದರು. ಅಮಾನತುಗೊಳಿಸಲಾದ ಇತರ ಇಬ್ಬರು ವಿದ್ಯಾರ್ಥಿನಿಯರ ವಿರುದ್ಧ ಕ್ರಮವನ್ನು ಹಿಂಪಡೆಯಬೇಕೆಂದು ಭಜರಂಗ ದಳ,  ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕಾಲೇಜು ಅಧಿಕಾರಗಳನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಮುಸ್ಲಿಂ ವಿದ್ಯಾರ್ಥಿನಿಯ ವಿರುದ್ಧ ಕ್ರಮ ಜರಗಿಸಲಾಯಿತು ಎಂದು ವರದಿ ತಿಳಿಸಿದೆ.