ಶಬರಿಮಲೆಯಲ್ಲಿ ಮಹಿಳೆಗೆ ಹೊಡೆದ ಪ್ರಕರಣ: ಕೋಝಿಕ್ಕೋಡ್ ಬಿಜೆಪಿ ಅಭ್ಯರ್ಥಿಗೆ ಜಾಮೀನು ನಿರಾಕರಿಸಿದ ಕೋರ್ಟ್

0
1128

ಪತ್ತನಂತಿಟ್ಟ,ಮಾ.28: ಶಬರಿಮಲೆ ಸನ್ನಿಧಾನದಲ್ಲಿ ಮಹಿಳೆಗೆ ಹೊಡೆದ ಘಟನೆಯಲ್ಲಿ ಕೇರಳ ಬಿಜೆಪಿ ಯುವ ಮೋರ್ಚ ರಾಜ್ಯ ಅಧ್ಯಕ್ಷ ಮತ್ತು ಬಿಜೆಪಿ ಕೋಝಿಕ್ಕೋಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಕೆ ಪ್ರಕಾಶ್ ಬಾಬುಗೆ ಕೋರ್ಟು ಜಾಮೀನು ನಿಷೇಧಿಸಿತು. ಗುರುವಾರ ರಾನ್ನಿ ಗ್ರಾಮ ನ್ಯಾಯಾಲಯಕ್ಕೆ ಶರಣಾಗಿದ್ದ ಈತನಿಗೆ ಕೋರ್ಟು ಹದಿನಾಲ್ಕು ದಿವಸದ ರಿಮಾಂಡ್ ವಿಧಿಸಿ ಕೊಟ್ಟಾರಕ್ಕರ ಜೈಲಿಗೆ ಕಳುಹಿಸಿದೆ.

ಶಬರಿ ಮಲೆ ಯುವತಿಯರ ಪ್ರವೇಶದ ವಿರುದ್ಧ ನಡೆದಿದ್ದ ಹಿಂಸಾಚಾರದಲ್ಲಿ ಪ್ರಕಾಶ್ ಬಾಬುವನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಪೊಲೀಸರು ಘೋಷಿಸಿದ್ದರು. ಚುನಾವಣೆಯಲ್ಲಿ ನಾಮ ಪತ್ರ ಸಲ್ಲಿಸುವುದಕ್ಕಾಗಿ ವಿವಿಧ ಕೇಸುಗಳಲ್ಲಿ ಅವರು ಜಾಮೀನು ಪಡೆಯಬೇಕಾಗಿತ್ತು .ಆದ್ದರಿಂದ ಜಾಮೀನಿಗಾಗಿ ರಾನ್ನಿ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಬಂದಾಗ ಆತನಿಗೆ ಕೋರ್ಟು ಜಾಮೀನು ನಿರಾಕರಿಸಿತು. ಈತನ ವಿರುದ್ಧ ಕೊಲೆಯತ್ನ, ಸಂಚು ಇತ್ಯಾದಿ ಆರೋಪಗಳನ್ನೊಳಗೊಂಡ ಕೇಸು ದಾಖಲುಗೊಂಡಿದೆ. ಕಳೆದ ವರ್ಷ ನವಂಬರ್ ಐದರಂದು ಶಬರಿಮಲೆ ಸನ್ನಿಧಾನಕ್ಕೆ ಬಂದಿದ್ದ ಮಹಿಳೆಯನ್ನು ಯುವತಿ ಎಂದು ಆರೋಪಿಸಿ ಪ್ರಕಾಶ್ ಮತ್ತು ಆತನ ಸಂಘಪರಿವಾರದ ಸಂಗಡಿಗರು ಹಲ್ಲೆ ನಡೆಸಿದ್ದರು. ಇದೇ ಪ್ರಕರಣದಲ್ಲಿ ಬಿಜೆಪಿ ಸಂಘಪರಿವಾರ ನಾಯಕರಾದ ಕೆ.ಸುರೇಂದ್ರನ್, ವತ್ಸನ್‍ತಿಲ್ಲಂಗೇರಿ, ಆರ್. ರಾಜೇಶ್, ವಿ.ವಿ.ರಾಜೇಶ್ ಆರೋಪಿಗಳಾಗಿದ್ದಾರೆ.