ಅಮೇರಿಕಾದಲ್ಲಿ 5 ಲಕ್ಷದತ್ತ ಕೊರೋನಾ ಸಾವು: ಇದು ಭಯಾನಕ ಎಂದ ತಜ್ಞರು

0
647

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೇರಿಕಾದಲ್ಲಿ ಕೋರೋನಾ ಸೋಂಕಿತರಾಗಿ ಮೃತಪಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಲ್ಲಿನ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಸದ್ಯ ಮೃತಪಡುತ್ತಿರುವವರ ಸಂಖ್ಯೆ ಐದು ಲಕ್ಷ ಸಮೀಪಿಸಿದ್ದು, ಇದೊಂದು ಭಯಾನಕವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋರೋನಾದ ಪ್ರಾರಂಭದಿಂದ ನಿರ್ಲಕ್ಷ್ಯ ವಹಿಸಿದ್ದೇ ಈ ಹಂತಕ್ಕೆ ತಲುಪಿದೆ ಎಂದು ವಿಶ್ಲೇಷಿಸಲಾಗುತ್ತಿದೆಯಾದರೂ, ಪ್ರಸ್ತುತ ಅಧ್ಯಕ್ಷರಾಗಿರುವ ಜೋ ಬೈಡನ್ ಸರಕಾರಕ್ಕೆ ಕೋರೋನಾ ನಿಯಂತ್ರಣವು ದೊಡ್ಡ ಸವಾಲುಗಳನ್ನು ತಂದೊಡ್ಡಿದೆ.

“ಇದು ಭಯಾನಕವಾಗಿದೆ, ಇದು ಐತಿಹಾಸಿಕವಾಗಿದೆ. 1918 ರ ಸಾಂಕ್ರಾಮಿಕ ರೋಗದ ಬಳಿಕ ನೂರು ವರ್ಷಗಳಲ್ಲಿ ಇಂತಹ ಸಾಂಕ್ರಾಮಿಕ ರೋಗವನ್ನು ತೀರ ಹತ್ತಿರದಿಂದ ನೋಡಿರಲಿಲ್ಲ‌ ಎಂದು ಅಧ್ಯಕ್ಷ ಜೋ ಬೈಡನ್ ರವರ ಮುಖ್ಯ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ “ಮೀಟ್ ದಿ ಪ್ರೆಸ್” ನಲ್ಲಿ ಹೇಳಿದ್ದಾರೆ‌.

ಮೃತಪಡುತ್ತಿರುವವರ ಸಂಖ್ಯೆಗಳನ್ನು ನೋಡಿದಾಗ ನಮನ್ನು ಬೆರಗುಗೊಳಿಸುತ್ತದೆ.‌ ಇದು ಬಹುತೇಕ ನಂಬಲಾಗದ ಸಂಗತಿಯಾಗಿದೆ, ಆದರೆ ಇದು ನಿಜ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಟ್ರ್ಯಾಕಿಂಗ್ ವೆಬ್‌ಸೈಟ್‌ನಲ್ಲಿನ 4,98,000 ಸಾವಿನ ವರದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

ಫೆಬ್ರವರಿ 2020 ರಲ್ಲಿ ಅಮೇರಿಕಾದಲ್ಲಿ ಮೊದಲ ಕೋವಿಡ್ -19 ಸಾವು ಘೋಷಣೆಯಾದ ನಂತರ, ಮೂರು ತಿಂಗಳ ಅಂತರದಲ್ಲಿ ಸಾವಿನ ಸಂಖ್ಯೆ
ಒಂದು ಲಕ್ಷದಷ್ಟಾಗಿತ್ತು.

ರಜೆಗಳಲ್ಲಿ ನಡೆಯುವ ಜನಕೂಟಗಳಿಂದಾಗಿ ಕೋರೋನಾ ಸೋಂಕಿತರ ಮೃತರ ಸಂಖ್ಯೆಯು ಒಂದೇ ತಿಂಗಳಲ್ಲಿ 4 ಲಕ್ಷ ಹೆಚ್ಚಾಯಿತು‌ ಎಂಬುದನ್ನು ಗಮನಿಸಿರುವ ಅಮೇರಿಕಾದ ಆರೋಗ್ಯ ಸಚಿವಾಲಯ, ಇದು ಭಯಾನಕ ಎಂದು ಹೇಳಿದೆ‌.