ಪತ್ರಕರ್ತ, ಸಮಾಜ ಸುಧಾರಕ ಡಾ.ಶಾಹ್ ಮುಸ್ಲಿಯಾರ್‌ರ ಒಂದು ನೆನಪು

0
1740

ಇಸ್ಮತ್ ಪಜೀರ್

ನನಗೆ ಡಾ.ಶಾಹ್ ಮುಸ್ಲಿಯಾರರ ಜೊತೆ ವೈಯಕ್ತಿಕ ಸಂಪರ್ಕವಿರಲಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ಮದರಂಗಿ ಪತ್ರಿಕೆಯಲ್ಲಿ ನಾನು ನಾಡಿಮಿಡಿತ ಎಂಬ ಅಂಕಣ ಬರೆಯುತ್ತಿದ್ದೆ. ಆಗ ಮದರಂಗಿ ಪತ್ರಿಕೆ ಮುಸ್ಲಿಂ ಓದುಗರ ವಲಯದಲ್ಲಿ ಜನಪ್ರಿಯತೆಯ ತುತ್ತ‌ ತುದಿಯಲ್ಲಿತ್ತು. ಅಂದು ಮದರಂಗಿ ಪತ್ರಿಕೆಗೆ ಬರೆಯುತ್ತಿದ್ದ ಬರಹಗಾರರನ್ನೆಲ್ಲಾ ಒಟ್ಟು ಸೇರಿಸಿ ಮದರಂಗಿ ಸಾಹಿತ್ಯ ಬಳಗವನ್ನು ಅದರ ಪ್ರಕಾಶಕ ಡಿ.ಐ.ಅಬೂಬಕರ್ ಕೈರಂಗಳ ಸ್ಥಾಪಿಸಿದ್ದರು. ನಾನು ಅದರ ಸ್ಥಾಪಕಾಧ್ಯಕ್ಷನಾಗಿದ್ದೆ. ಆಗ ನಾವು ಪ್ರತೀ ವರ್ಷ ಒಬ್ಬೊಬ್ಬ ಮುಸ್ಲಿಂ ಸಾಹಿತಿಗೆ ಮದರಂಗಿ ಸಾಹಿತ್ಯ ಪ್ರಶಸ್ತಿ ನೀಡುವುದೆಂದು ತೀರ್ಮಾನಿಸಿದ್ದೆವು. (ದುರದೃಷ್ಟವಶಾತ್ ಆ ಯೋಜನೆ ಕೇವಲ ಒಂದೇ ವರ್ಷಕ್ಕೆ ನೆನೆಗುದಿಗೆ ಬಿತ್ತು) ಅಂದು ನಾವು ಮದರಂಗಿ ಸಾಹಿತ್ಯ ಪ್ರಶಸ್ತಿಯನ್ನು ಡಾ.ಶಾಹ್ ಮುಸ್ಲಿಯಾರರಿಗೆ ನೀಡುವುದೆಂದು ತೀರ್ಮಾನಿಸಿದಾಗ ಅದು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವೂ ಆಗಿತ್ತು.

ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಯುಕ್ತ ಸರಕಾರಿ ಫ್ರೌಡಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಅಂದು ನಾನು ಅವರ ಬಗ್ಗೆ ಅರಿತುಕೊಂಡ ಕೆಲ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುವೆ.1935ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆಯ ಕುಂಬೋಲ್‌ ಎಂಬಲ್ಲಿ ಶಾಹ್ ಮುಸ್ಲಿಯಾರ್ ಜನಿಸಿದರು. ಧರ್ಮಗುರುಗಳಾಗಿದ್ದ ಅವರ ತಂದೆ ಅಲ್ಹಾಜ್‌.ಕೆ.ಅಬ್ದುಲ್ಲಾ ಮುಸ್ಲಿಯಾರ್ ಕುಂಬೋಲ್‌ನಿಂದ ಬಂದು‌ ಪುತ್ತೂರು ತಾಲೂಕಿನ ಆತೂರಿನಲ್ಲಿ ನೆಲೆ ನಿಂತರು. ಕೊಯಿಲ ಸರಕಾರಿ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಮತ್ತು ತಂದೆಯವರಿಂದಲೇ ಆರಂಭಿಕ ಧಾರ್ಮಿಕ ಶಿಕ್ಷಣ ಪಡೆದರು. ಆ ಬಳಿಕ ಕಾಸರಗೋಡು ಜಿಲ್ಲೆಯ ವಿವಿದೆ‍ಡೆ ಕಲಿತರು.

ಅಪೂರ್ವ ಜ್ಞಾನ ದಾಹಿಯಾಗಿದ್ದ ಡಾ.ಶಾಹ್ ಮುಸ್ಲಿಯಾರ್ ಆ ಕಾಲದಲ್ಲೇ ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟವರು. ಸುಮಾರು ಐವತ್ತೈದು- ಅರುವತ್ತು ವರ್ಷಗಳ ಹಿಂದೆ ಮುಸ್ಲಿಂ ಮಹಿಳೆಯರು ಶಾಲೆಯ ಮೆಟ್ಟಿಲು ತುಳಿಯುವುದೇ ಅಪರಾಧವೆಂದು ಸಾಮಾಜಿಕವಾಗಿ ತಪ್ಪು ಕಲ್ಪನೆಯಿದ್ದ ಕಾಲದಲ್ಲಿ ಅವರು ಶಿಕ್ಷಣ ಪ್ರತೀಯೋರ್ವ ಪುರುಷ ಮತ್ತು ಮಹಿಳೆಯರ ಹಕ್ಕು ಎಂಬ ಪ್ರವಾದಿ ವಚನವನ್ನು ಪ್ರಾಯೋಗಿಕವಾಗಿ ಎತ್ತಿ ಹಿಡಿದಿದ್ದರು. ಶಿಕ್ಷಣ ಕೇವಲ ಪುರುಷರ ಸ್ವತ್ತಲ್ಲ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ಆ ಕಾಲಕ್ಕೆ ಅವರು ತನ್ನ ಹೆಣ್ಮಕ್ಕಳನ್ನು ಎಸ್ಸೆಸ್ಸೆಲ್ಸಿವರೆಗೆ ಓದಿಸಿದ್ದರು. ಆ ಕಾಲದ ಉಲಮಾಗಳೆಂದರೆ ಕೇವಲ ಧಾರ್ಮಿಕ ಶಿಕ್ಷಣ ಮಾತ್ರ ಪಡೆದವರಾಗಿದ್ದರು. ಆದರೆ ಡಾ.ಶಾಹ್ ಮುಸ್ಲಿಯಾರ್ ಅಂದಿನ ಕಾಲಕ್ಕೆ ಉತ್ತಮ ಲೌಕಿಕ ಶಿಕ್ಷಣವನ್ನೂ ಹೊಂದಿದ್ದರು. ಅವರ ಜ್ಞಾನ ದಾಹ ಅದೆಷ್ಟು ತೀವ್ರವಾಗಿತ್ತೆಂದರೆ ವೈದ್ಯಕೀಯ ವಿಜ್ಞಾನದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು ಹೋಮಿಯೋಪತಿ ವೈದ್ಯಕೀಯ ತರಬೇತಿ ಪಡೆದು ಡಿಪ್ಲೊಮಾ ಪದವಿ ಗಳಿಸಿ ರಿಜಿಸ್ಟರ್ಡ್ ಮೆಡಿಕಲ್‌ ಪ್ರಾಕ್ಟಿಶನರ್ ಎಂಬ ವೈದ್ಯ ವೃತ್ತಿ ನಿರ್ವಹಿಸುವ ಲೈಸೆನ್ಸ್ ಪಡೆದಿದ್ದರು. ಕನ್ನಡ ಭಾಷೆಯಲ್ಲೂ ಒಳ್ಳೆಯ ಹಿಡಿತ ಹೊಂದಿದ್ದ ಅವರು ಕನ್ನಡದಲ್ಲಿ ಭಾಷಣವನ್ನೂ ಮಾಡುತ್ತಿದ್ದರು. ಇಸ್ಲಾಮೀ ಜ್ಞಾನ ಪ್ರಸಾರಕ್ಕೆ ಕನ್ನಡ ಭಾಷೆಯನ್ನು ಬಳಸಿದ ಉಲಮಾಗಳಲ್ಲಿ ಮೊದಲಿಗರಾಗಿದ್ದರು. ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತಿದ್ದ ಅವರು “ಸತ್ಯ ವಾಣಿ” ಎಂಬ ಪತ್ರಿಕೆಯೊಂದನ್ನು ಕರ್ನಾಟಕ ಸುನ್ನಿ ಜಮೀಯತುಲ್ ಉಲಮಾ ಸಂಘಟನೆಯ ಅಧೀನದಲ್ಲಿ 1982ರಲ್ಲಿ ಪ್ರಾರಂಭಿಸಿದ್ದರು. 1983 ರಲ್ಲಿ ತಮ್ಮದೇ ಆದ “ಸರಳ ಪಥ” ಎಂಬ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿ 1990 ರ ವರೆಗೆ ಯಶಸ್ವಿಯಾಗಿ ಮುನ್ನಡೆಸಿದರು. ಆ ಬಳಿಕ ಅದರ ಹೆಸರನ್ನು “ಅಲಮುಲ್‌ ಹುದಾ” ಎಂದು ಬದಲಾಯಿಸಿ ಮತ್ತೆ ಏಳು ವರ್ಷಗಳ ಕಾಲ ನಡೆಸಿದರು. ಡಾ.ಶಾಹ್ ಮುಸ್ಲಿಯಾರರು ಪತ್ರಿಕೆ ಪ್ರಾರಂಭಿಸುವ ಕಾಲದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ಸನ್ಮಾರ್ಗ ಬಿಟ್ಟರೆ ಬೇರೆ ಕನ್ನಡ ಧಾರ್ಮಿಕ ಪತ್ರಿಕೆಗಳಿರಲಿಲ್ಲ. ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಹೊರತರುತ್ತಿದ್ದ. “ಹಸನಾತ್” ಎಂಬ ವಿಶೇಷ ವಾರ್ಷಿಕ ಸಂಚಿಕೆಯ ಸಂಪಾದಕರಾಗಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.

ಸುಳ್ಯದ ಅರಂತೋಡು ಎಂಬ ಒಂದೇ ಮೊಹಲ್ಲಾದಲ್ಲಿ‌‌ ಸುದೀರ್ಘ ಮೂವತ್ತನಾಲ್ಕು ವರ್ಷಗಳ ಕಾಲ ಖತೀಬರಾಗಿ ಮತ್ತು ಮುದರ್ರಿಸರಾಗಿ ಸೇವೆ ಸಲ್ಲಿಸಿದ ಡಾ.ಶಾಹ್ ಮುಸ್ಲಿಯಾರರದ್ದು ಬಹುಮುಖ ಪ್ರತಿಭೆ. ಹತ್ತಾರು ಸಾಮಾಜಿಕ ಸಂಘಟನೆಗಳನ್ನು‌‌ ಹುಟ್ಟು ಹಾಕಿದ ಕೀರ್ತಿ ಅವರದ್ದು. ಹಲವಾರು ಸಾಮಾಜಿಕ ಸಂಘಟನೆಗಳಿಗೆ ಅವರು ನೇತೃತ್ವ ನೀಡುತ್ತಿದ್ದರು. ಇನ್ನೂ ಆಸಕ್ತಿಯ ವಿಚಾರವೇನೆಂದರೆ ಮುಸ್ಲಿಂ ಧರ್ಮಗುರುಗಳೆಂದರೆ ಮಸೀದಿ-ಮದ್ರಸಾಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ಅಂದರೆ 1966ರಲ್ಲೇ ಅವರು ಕೊಯಿಲ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಓರ್ವ ಸಹಕಾರಿಯಾಗಿಯೂ ಸೈ ಎನಿಸಿಕೊಂಡಿದ್ದರು.

ಸಾವಿರಾರು ವಿದ್ಯಾರ್ಥಿಗಳ ಗುರುಗಳಾಗಿದ್ದ ಅವರ ಜ್ಞಾನ ದಾಹ ಕೊನೆಯ ದಿನಗಳವರೆಗೂ ಕಡಿಮೆಯಾಗಿದ್ದಿಲ್ಲ. ತನ್ನ ಮನೆಯಲ್ಲಿ ಗ್ರಂಥ ಭಂಡಾರವೊಂದನ್ನೇ ಹೊಂದಿದ್ದ ಅವರು ಕೊನೆಯ ದಿನಗಳವರೆಗೂ ಅಧ್ಯಯನ ನಿರತರಾಗಿರುತ್ತಿದ್ದರು. ಕನ್ನಡ ಭಾಷೆಯಲ್ಲಿ ಇಸ್ಲಾಮೀ ಜ್ಞಾನ ಪ್ರಸರಣದಲ್ಲಿ ಡಾ.ಶಾಹ್ ಮುಸ್ಲಿಯಾರ್ ಸುದೀರ್ಘ ಸಾರ್ಥಕ ಬದುಕು ಸವೆಸಿ ನಮ್ಮನ್ನಗಲಿದ್ದಾರೆ.ಅವರಿಗೆ ಅವರೇ ಸರಿಸಾಟಿ.