ಜಪ್ಪು ಪ್ರದೇಶದಲ್ಲಿ ರೈಲ್ವೆ ಅಂಡರ್ ಪಾಸ್ ಗೆ 68 ಕೋಟಿ ರೂ.: ಯು ಟಿ ಖಾದರ್

0
529

ಸನ್ಮಾರ್ಗ ವಾರ್ತೆ

ಮಂಗಳೂರು: ಜಪ್ಪು ಪ್ರದೇಶದಲ್ಲಿ ರೈಲ್ವೆ ಅಂಡರ್ ಪಾಸ್ ಗೆ 68 ಕೋಟಿ ರೂ.ನಾನು ಸಚಿವನಾಗಿದ್ದಾಗಲೇ ಬಿಡುಗಡೆ ಮಾಡಿದ್ದೆ ಅದೀಗ ಕೆಲಸ ನಡೆಯುತ್ತಿದೆ ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.

ನಗರದ ಜೆಪ್ಪು ಮೋರ್ಗನ್ಸ್ ಗೇಟ್ ನಲ್ಲಿ ಎಸ್.ಎಂ.ಆರ್. ಕಾರ್ಪೊರೇಶನ್ ಹಾಗೂ ಬ್ಯಾರೀಸ್ ಅಸೋಸಿಯೇಟ್ಸ್ ಎಲ್.ಎಲ್.ಪಿ. ಜಂಟಿಯಾಗಿ ನಿರ್ಮಿಸಲಿರುವ ‘ಗೇಟ್ ವೇ’ ಕಮರ್ಶಿಯಲ್ ಕಮ್ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಗೆ ರವಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಮಂಗಳೂರು ನಗರಕ್ಕೆ ಪ್ರವೇಶ ಪ್ರದೇಶವಾದ ಇಲ್ಲಿ ರೈಲ್ವೆ ಗೇಟ್ ನಿಂದಾಗಿ ನಿತ್ಯ ಓಡಾಡುವವರಿಗೆ ಸಮಸ್ಯೆ ಆಗಿತ್ತು. ನಾನು ಪ್ರತಿನಿಧಿಸುವ ಉಳ್ಳಾಲ ಪ್ರದೇಶದ ನಾಗರಿಕರೇ ಈ ಮಾರ್ಗದ ಓಡಾಟಗಾರರರಾಗಿದ್ದಾರೆ. ಫ್ಲೈ ಓವರ್ ಮಾಡುವ ಬೇಡಿಕೆ ಇತ್ತು ಆದರೆ ಅದಕ್ಕೆ 120 ಕೋಟಿ ರೂ. ಬಜೆಟ್ ಹೆಚ್ಚು ಅನಿಸಿದ್ದರಿಂದ 68 ಕೋಟಿ ರೂಪಾಯಿಯ ಅಂಡರ್ ಪಾಸ್ ಗೆ ಅನುಮತಿ ನೀಡಲಾಯಿತು. ಈಗ ಕಾಮಗಾರಿ ಪ್ರಗತಿಯಲ್ಲಿದೆ. ಈ ಕೆಲಸ ಪೂರ್ಣಗೊಂಡರೆ ಈ ಪ್ರದೇಶ ಇನ್ನಷ್ಟು ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು.

ಅಂಡರ್ ಪಾಸ್ ನಿರ್ಮಾಣಕ್ಕೆ ಯೆನೆಪೋಯ ಅಬ್ದುಲ್ಲಾ ಕುಂಞ, ರೋಹನ್ ಮೋಂತೇರೋ ಸಹಿತ ಹಲವರು ಜಾಗ ಬಿಟ್ಟುಕೊಟ್ಟಿದ್ದಾರೆ ಎಂದು ಯು.ಟಿ. ಖಾದರ್ ನೆನಪಿಸಿದರು.

ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ‘ಗೇಟ್ ವೇ’ ಗೆ ದುಆಗೈದರು.

ಮಾಹಿತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಯೆನೆಪೊಯ ವಿವಿಯ ಕುಲಪತಿ ಡಾ.ವೈ.ಅಬ್ದುಲ್ಲಾ ಕುಂಞ ಸ್ಮಾರ್ಟ್ ಸಿಟಿ ಯೋಜನೆಯಿಂದಾಗಿ ಮಂಗಳೂರು ಶೀಘ್ರವಾಗಿ ಬೆಳೆಯುವ ನಗರವಾಗಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ವಾಣಿಜ್ಯ ಸಂಕೀರ್ಣಗಳು ಮತ್ತು ವಸತಿ ಸಮುಚ್ಚಯಗಳ ಅಗತ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾರಿಸ್ ಅಸೋಸಿಯೇಟ್ಸ್ ಎಲ್.ಎಲ್.ಪಿ. ಆಡಳಿತ ನಿರ್ದೇಶಕ ಎಸ್.ಎಂ.ರಶೀದ್ ಹಾಜಿ ಪ್ರಸ್ತಾವಿಕವಾಗಿ ಮಾತನಾಡಿ, 36 ಸೆಂಟ್ಸ್ ಜಾಗದಲ್ಲಿ ‘ಗೇಟ್ ವೇ’ ವಾಣಿಜ್ಯ ಮತ್ತು ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ. ತಳ ಅಂತಸ್ತಿನಲ್ಲಿ ಕಾರು ಪಾರ್ಕಿಂಗ್, ನೆಲ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳು, ಮೇಲಿನ 4 ಮಹಡಿಗಳಲ್ಲಿ 30 ಫ್ಲ್ಯಾಟ್ ಗಳು ಇರಲಿವೆ ಎಂದು ಮಾಹಿತಿ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಭಾನುಮತಿ ಪಿ.ಎಸ್., ಮಾಜಿ ಶಾಸಕ ಮೊಯ್ದಿನ್ ಬಾವಾ ಶುಭ ಹಾರೈಸಿದರು. ಹಾಫಿಲ್ ಆಶಿಕ್ ಹಸನ್ ಕಿರಾಅತ್ ಪಠಿಸಿದರು. ಬಿ.ಎಂ.ಮಮ್ತಾಝ್ ಅಲಿ ವಂದಿಸಿದರು. ಅಬ್ದುಲ್ ಖಾದರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.