ಕಾರು ತಡೆದು ದರೋಡೆ ಯತ್ನ; ಸಮಸ್ತದ ಸೌದಿಅರೇಬಿಯ ನಾಯಕ ಅದೃಷ್ಟವಶಾತ್ ಪಾರು

0
850

ರಿಯಾದ್,ಎ.5: ಕಾರು ತಡೆದು ದರೋಡೆಗೆ ಯತ್ನಿಸಿದ ದುಷ್ಕರ್ಮಿಯ ಕೈಗೆ ಸಿಗದೆ ಸಮಸ್ತಕೇರಳ ಇಸ್ಲಾಮಿಕ್ ಸೆಂಟರ್ (ಎಸ್‍ಐಸಿ) ಸೌದಿ ಅರೇಬಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲವಿಕುಟ್ಟಿ ಒಳವಟ್ಟೂರ್ ಎಂಬವರು ಅದೃಷ್ಟವಶಾತ್ ಪಾರಾಗಿದ್ದಾರೆ. ಬತ್‍ಹಾದ ದರಕ್ತರ್ ಸ್ಟ್ರೀಟ್‍ನಲ್ಲಿ ಮಂಗಳವಾರ ಮಧ್ಯರಾತ್ರೆ ಘಟನೆ ನಡೆದಿದೆ. ಅಲವಿಕುಟ್ಟಿ ದುಷ್ಕರ್ಮಿಯ ಕೈಗೆ ಸಿಗದೆ ಪಾರಾಗುವಲ್ಲಿ ಅದೃಷ್ಟವಶಾತ್ ಯಶಸ್ವಿಯಾಗಿದ್ದಾರೆ.

ಫರದಸ್ಕ್ ಸ್ಟ್ರೀಟ್‍ಗೆ ಸಂಧಿಸುವ ಸಿಗ್ನಲ್‍ನ ಸಮೀಪದ ಪ್ಲಾಟ್‍ನ ಮುಂದೆ ರಾತ್ರೆ ಹನ್ನೆರಡು ಗಂಟೆಗೆ ತನ್ನ ಫಾಚ್ರ್ಯೂನ್ ಕಾರನ್ನು ನಿಲ್ಲಿಸಿ ಇಳಿಯುತ್ತಿದ್ದ ವೇಳೆ ಅರಬ್ ಪ್ರಜೆಯಾದ ಯುವಕನೊಬ್ಬ ಅಲವಿಕುಟ್ಟಿಯ ಕಾರಿನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿದ್ದಾನೆ. ಆತ ಅಲವಿಕುಟ್ಟಿಯನ್ನು ಡೋರ್ ತೆರೆಯುವಂತೆ ಹೇಳಿದನು. ಅಪಾಯದ ಅರಿವಾಗಿ ಅಲವಿಕುಟ್ಟಿ ಕಾರಿನೊಳಗೆ ಕೂತಿದ್ದರು. ನಂತರ ವಿಂಡೊಗ್ಲಾಸ್ ಸ್ವಲ್ಪ ತೆರೆದು ಐನೂರು ರಿಯಾಲ್ ಹೊರಗೆ ಹಾಕಿ ಇದನ್ನು ತೆಗೆದುಕೊಂಡು ಹೋಗುವಂತೆ ಅವರು ದುಷ್ಕರ್ಮಿಗೆ ಹೇಳಿದರು.ಆದರೆ ಅದಕ್ಕೊಪ್ಪದ ಆತ ಕಾರಿನ ಡೋರ್ ತೆಗೆಯುವಂತೆ ಹೇಳಿದ್ದಾನೆ. ಗಾಜುಗಳನ್ನು ಒಡೆದಿದ್ದಾನೆ. ಇದೇ ವೇಳೆ ಅಲವಿ ಕುಟ್ಟಿ ಸೌದಿಯಲ್ಲಿರುವ ಗೆಳೆಯರಿಗೆ ಫೋನ್ ಕರೆ ಮಾಡಿ ವಿವರ ನೀಡಿದರು. ಡೋರ್ ತೆರೆಯದ್ದರಿಂದ ದುಷ್ಕರ್ಮಿ ಬಾನೆಟ್‍ಗೆ ಹತ್ತಿ ಕಬ್ಬಿಣದ ದಂಡದಿಂದ ಗಾಜು ಒಡೆಯಲು ಯತ್ನಿಸಿದ್ದಾನೆ. ಆದರೆ ಗಾಜಿಗೆ ಕೂಲಿಂಗ್ ಸ್ಟಿಕ್ಕರ್ ಅಂಟಿಸಿದ್ದರಿಂದ ಗಾಜು ಒಡೆದು ಕೆಳಗೆ ಬೀಳಲಿಲ್ಲ. ಇಷ್ಟರಲ್ಲಿ ಸಾಹಸಿಕವಾಗಿ ಡೋರ್ ತೆಗೆದು ಅಲವಿ ಕುಟ್ಟಿ ಓಡಿ ತಪ್ಪಿಸಿಕೊಂಡರು. ಇದೇ ದಾರಿಯಲ್ಲಿ ಬಂದ ಟ್ಯಾಕ್ಸಿಯೊಂದರಲ್ಲಿ ಕುಳಿತು ಅಲ್ಲಿಂದ ಪಾರಾದರು. ಟ್ಯಾಕ್ಸಿ ಚಾಲಕನಿಗೆ ವಿಷಯ ತಿಳಿಸಿದಾಗ ಘಟನಾ ಸ್ಥಳಕ್ಕೆ ಕೂಡಲೆ ಹಿಂದಿರುಗಿ ಅವರಿಬ್ಬರು ಬಂದಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿ ಅಲ್ಲಿಂದ ತಪ್ಪಿಸಿಕೊಂಡಿದ್ದನು. ಅಲವಿ ಕುಟ್ಟಿಯವರ ಗೆಳೆಯರು ಪೊಲೀಸರಿಗೆ ಫೋನ್ ಮಾಡಿದ್ದರಿಂದ ತಕ್ಷಣ ಪೊಲೀಸರು ಕೂಡಾ ಅಲ್ಲಿಗೆ ಧಾವಿಸಿ ಬಂದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.