ವೆಲ್ಲಿಂಗ್ಟನ್,ಎ.5: ಕ್ರೈಸ್ಟ್ ಚರ್ಚ್ನ ಎರಡು ಮಸೀದಿಗಳಲ್ಲಿ ಗುಂಡು ಹಾರಿಸಿ ಐವತ್ತಕ್ಕೂ ಹೆಚ್ಚು ಮುಸ್ಲಿಮರನ್ನು ಕೊಂದು ಹಾಕಿದ ಪ್ರಕರಣದ ಆರೋಪಿ ಟೊರಂಟ್ ಹಾರಿಸನ್ ವಿರುದ್ಧ ಪೊಲೀಸರು 89 ಆರೋಪಗಳನ್ನು ಹೊರಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟೊರಂಟ್ನನ್ನು ಎರಡನೆಯ ಸಲ ಕೋರ್ಟಿಗೆ ಹಾಜರುಪಡಿಸುವಾಗ ಈ ಆರೋಪಗಳನ್ನು ಹೊರಿಸಲಾಗುವುದು. ಈ ಹಿಂದೆ ಈತನ ವಿರುದ್ಧ ಕೇವಲ ಕೊಲೆ ಆರೋಪ ಮಾತ್ರ ಹೊರಿಸಲಾಗಿತ್ತು. ಮಾರ್ಚ್ 15ರಂದು ಈತ ಎರಡು ಮಸೀದಿಗಳಲ್ಲಿ ದಾಳಿ ನಡೆಸಿ ಐವತ್ತು ಮಂದಿಯ ಸಾವಿಗೆ ಕಾರಣನಾಗಿದ್ದಾನೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕ್ರೈಸ್ಟ್ ಚರ್ಚ್ ಜಿಲ್ಲಾ ಕೋರ್ಟಿನಿಂದ ಪ್ರಕರಣವನ್ನು ಹೈಕೋರ್ಟಿಗೆ ವರ್ಗಾಯಿಸಲಾಗಿದೆ. ದಾಳಿ ನಡೆಸಿದ ಮರುದಿವಸ ಟೊರೆಂಟ್ನನ್ನು ಮೊದಲ ಸಲ ಕೋರ್ಟಿಗೆ ಪೊಲೀಸರು ಹಾಜರುಪಡಿಸಿದ್ದರು. ಆರೋಪ ಹೊರಿಸಿದ ಬಳಿಕ ಆತನನ್ನು ಅಕ್ಲೆಂಡಿನ ಅತೀವ ಸುರಕ್ಷಾ ವ್ಯವಸ್ಥೆಯಿರುವ ಜೈಲಿನಲ್ಲಿರಿಸಲು ಪೊಲೀಸರು ನಿರ್ಧರಿಸಿದ್ದಾರೆ. ಪ್ರಥಮ ವಿಚಾರಣೆ ನಡೆದಾಗ ತನಗೆ ವಕೀಲರ ಅಗತ್ಯವಿಲ್ಲ. ತಾನೇ ವಾದಿಸುತ್ತೇನೆ ಎಂದು ಆರೋಪಿ ಹೇಳಿದ್ದನು. ವಿಚಾರಣೆಯ ವೇಳೆ ತನ್ನ ವಂಶೀಯತಾ ವಾದವನ್ನು ಮಂಡಿಸುವುದಕ್ಕೆ ಈತ ವಕೀಲರನ್ನು ನಿರಾಕರಿಸಿದ್ದಾನೆ ಎನ್ನುವ ಶಂಕೆ ಪೊಲೀಸರಿಗಿದೆ.












