ಸನ್ಮಾರ್ಗ ವಾರ್ತೆ
ಲಕ್ನೊ,ಸೆ.11: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ರನ್ನು ವಿಚಾರಣೆಗೊಳಪಡಿಸಲು ಸಿಬಿಐ ವಿಶೇಷ ಕೋರ್ಟಿನ ಅನುಮತಿ ಕೋರಿದೆ. ಕಲ್ಯಾಣ್ ಸಿಂಗ್ ಈಗ ರಾಜ್ಯಪಾಲರ ಹುದ್ದೆಯಿಂದ ನಿರ್ಗಮಿಸಿದ್ದು ಅವರನ್ನು ವಿಚಾರಣೆಗೆ ಗುರಿಪಡಿಸಬಹುದಾಗಿದೆ. 1992ರಲ್ಲಿ ಅವರು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದರು. ಅದೇ ವರ್ಷ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು.
ಪ್ರಕರಣದಲ್ಲಿ ಆರೋಪಿಯಾಗಿರುವ ಅವರನ್ನು ವಿಚಾರಣೆಗೆ ಗುರಿಪಡಿಸಲು ಸಾಧ್ಯವಾಗಿರಲಿಲ್ಲ. ಆದರೆ ರಾಜ್ಯಪಾಲ ಸ್ಥಾನದಿಂದ ಕೆಳಗಿಳಿದ ಬಳಿಕ ಅವರನ್ನು ಆರೋಪಿಯಾಗಿ ಪರಿಗಣಿಸ ಬೇಕು ಎಂದು ಸುಪ್ರೀಂಕೋರ್ಟು ಆದೇಶವಿದೆ. ರಾಜಸ್ತಾನದ ರಾಜ್ಯಪಾಲರ ಕಾಲಾವಧಿ ಮುಗಿದ ಬಳಿಕ 87 ವರ್ಷದ ಕಲ್ಯಾಣ್ ಸಿಂಗ್ ಪುನಃ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ರಾಜ್ಯಪಾಲರಾಗಿದ್ದ ವೇಳೆ ಕಲ್ಯಾಣ್ ಸಿಂಗ್ರನ್ನು ವಿಚಾರಣೆಗೆ ಗುರಿಪಡಿಸುವಂತಿರಲಿಲ್ಲ. ಸಂವಿಧಾನದ ರಕ್ಷಣೆ ಅವರಿಗಿತ್ತು. ಆದ್ದರಿಂದ ಬಾಬರಿ ಪ್ರಕರಣದಲ್ಲಿ ಅವರನ್ನು ವಿಚಾರಣೆಗೊಳಪಡಿಸಲು ಸಿಬಿಐ ಕೋರ್ಟಿನ ಅನುಮತಿಯನ್ನು ಈಗ ಯಾಚಿಸಿದೆ.












