ಮುಸ್ಲಿಮ್ ದ್ವೇಷ: ಸರ್ವ ಕೊಳೆಯನ್ನೂ ತೊಳೆದು ಬಿಡುವ ಸಾಬೂನು

0
4

ಸನ್ಮಾರ್ಗ ಸಂಪಾದಕೀಯ

ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಅವರು ನವೆಂಬರ್ 8ರಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡರು. ಮುಸ್ಲಿಮ್ ಕುಟುಂಬವೊಂದರ ಮನೆಯನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸುವ ವೀಡಿಯೋ. ಈ ಬುಲ್ಡೋಜರ್‌ನ ಧ್ವಂಸಕಾರ್ಯವನ್ನು ಅಸಹಾಯಕತೆಯಿಂದ ಓರ್ವ ಯುವಕ ನೋಡುತ್ತಿದ್ದಾನೆ. ಹಿನ್ನೆಲೆಯಲ್ಲಿ ಹಬ್ಬದ ಸಂಗೀತವೂ ಕೇಳಿ ಬರುತ್ತದೆ. ಈ ವೀಡಿಯೋಗೆ ಹಿಮಂತ್ ಬಿಸ್ವ ಶರ್ಮ ಕೊಟ್ಟ ಶೀರ್ಷಿಕೆ ಹೀಗಿತ್ತು: ‘ದೀಪಾವಳಿಗಿಂತ ಮೊದಲು ಮನೆ ಸಜ್ಜುಗೊಳಿಸಲಾಗುತ್ತಿದೆ.’

ಮುಖ್ಯಮಂತ್ರಿಯ ಈ ಹೇಳಿಕೆಯ ಎರಡು ದಿನಗಳ ಬಳಿಕ ನವೆಂಬರ್ 10ರಂದು ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಥವಾ APCR ಸಂಸ್ಥೆಯು ದಂಗುಬಡಿಸುವ ವರದಿಯೊಂದನ್ನು ಬಿಡುಗಡೆಗೊಳಿಸಿತು. 2026 ಜನವರಿಯಿಂದ ಸೆಪ್ಟೆಂಬರ್ ಅಂತ್ಯದ ವರೆಗೆ ಈ ದೇಶದಲ್ಲಿ ಎಷ್ಟು ದ್ವೇಷ ಭಾಷಣಗಳು ನಡೆದಿವೆ ಮತ್ತು ಎಷ್ಟು ದ್ವೇಷ ಅಪರಾಧಗಳು ನಡೆದಿವೆ ಎಂಬ ದಾಖಲೆ ಆಧಾರಿತ ಪಟ್ಟಿಯನ್ನು ಬಿಡುಗಡೆಗೊಳಿಸಿತು. ಇದೇನೂ ಕದ್ದು ಮುಚ್ಚಿ ಬಿಡುಗಡೆ ಮಾಡಿದ ಪಟ್ಟಿಯಲ್ಲ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಾನ್ ದಯಾಲ್ ಮತ್ತು ಸೈಯದಾ ಹಮೀದ್ ವರದಿಯನ್ನು ಬಿಡುಗಡೆ ಮಾಡಿದರು. ಫವಾಝ್ ಶಾಹೀನ್, ನಿತೀಶ್ ತ್ಯಾಗಿ ಮತ್ತು ಅಕ್ಸಾ ಸೈಯದ್ ಇದಕ್ಕೆ ಸಾಕ್ಷಿಯಾಗಿ ಮಾತಾಡಿದರು.

ಎರಡು ದಿನಗಳ ಅಂತರದಲ್ಲಿ ನಡೆದ ಈ ಎರಡು ಬೆಳವಣಿಗೆಗಳನ್ನು ನೋಡಿದರೆ, ಈ ದೇಶದಲ್ಲಿ ದ್ವೇಷವನ್ನು ಹೇಗೆ ಸಹಜಗೊಳಿಸಲಾಗುತ್ತಿದೆ ಮತ್ತು ಸಂಭ್ರಮಿಸಲಾಗುತ್ತಿದೆ ಎಂಬುದು ವ್ಯಕ್ತವಾಗುತ್ತದೆ.

ಹಿಂದೂ ರಕ್ಷಾ ದಳದ ಉತ್ತರಾಖಂಡದ ಅಧ್ಯಕ್ಷ ಲಲಿತ್ ಶರ್ಮಾ ಎಂಬವರು ದೆಹಲಿಯ ಉತ್ತಮ್ ನಗರದ ಜೆಜೆ ಕಾಲೋನಿಯ ಸಂಧಿಗಳಲ್ಲಿ ಮೈಕ್ರೋಫೋನ್ ಹಿಡಿದು ಮುಸ್ಲಿಮ್ ದ್ವೇಷದ ಭಾಷಣ ಮಾಡಿರುವ ವಿವರ ಈ ಪಟ್ಟಿಯಲ್ಲಿದೆ. ‘ಈ ಬಾರಿ ಯಾವ ಮುಲ್ಲಾನಿಗೂ ಈದ್ ಆಚರಿಸಲು ಬಿಡುವುದಿಲ್ಲ’ ಎಂದು ಹೇಳುವ ಈತ, ‘ಹಾಗೆ ಆಚರಿಸಲು ಧೈರ್ಯ ತೋರುವ ಪ್ರತಿಯೊಬ್ಬರ ಎದೆಗೂ ಗುಂಡು ಹಾರಿಸಲಾಗುವುದು..’ ಎಂಬಂತೆ ಬೆದರಿಕೆ ಹಾಕುತ್ತಾನೆ. ಹಾಗಂತ, ಈತನ ಈ ಪ್ರಚೋದನಕಾರಿ ಹೇಳಿಕೆಯ ವಿರುದ್ಧ ಯಾವ ಎಫ್‌ಐಆರ್ ಕೂಡಾ ದಾಖಲಾಗುವುದಿಲ್ಲ. ಎಪಿಸಿಆರ್ ಇಂಥ 110 ವೀಡಿಯೋ ತುಣುಕುಗಳನ್ನು ದಾಖಲಿಸಿದೆ. ದೆಹಲಿಯ ಒಂದೇ ನೆರೆಹೊರೆಯ ವೀಡಿಯೋಗಳೇ ಇವುಗಳಲ್ಲಿ ಹೆಚ್ಚಿವೆ. ಇವುಗಳ ಪೈಕಿ 60 ವೀಡಿಯೋಗಳಲ್ಲಿ ಒಂದೋ ಮುಸ್ಲಿಮರನ್ನು ಗುಂಡಿಕ್ಕಿ ಹತ್ಯೆಗೈಯಲು ಅಥವಾ ಪೊಲೀಸರಿಂದ ಎನ್‌ಕೌಂಟರ್ ಮಾಡಲು ಆಗ್ರಹಿಸಲಾಗಿದೆ. ದುರಂತ ಏನೆಂದರೆ, ಈ 60 ವೀಡಿಯೋಗಳ ಪೈಕಿ ಒಂದರ ಮೇಲೂ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ. ಹಾಗಂತ, ಈ ಆಘಾತಕಾರಿ ವರದಿ ಇಲ್ಲಿಗೇ ಕೊನೆಗೊಳ್ಳುವುದಿಲ್ಲ.

ದೇಶದ ಕನಿಷ್ಠ 16 ರಾಜ್ಯಗಳಲ್ಲಿ ಒಟ್ಟು 57 ಭಾಷಣಕಾರರು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿರುವುದನ್ನು ಆಧಾರ ಸಮೇತ ಎಪಿಸಿಆರ್ ಪಟ್ಟಿ ಮಾಡಿದೆ. ಕ್ರೈಸ್ತರ ವಿರುದ್ಧವೂ ದ್ವೇಷ ಭಾಷಣ ಮಾಡಲಾಗಿದ್ದು, ಮುಸ್ಲಿಮರಿಗೆ ಹೋಲಿಸಿದರೆ ಪ್ರಮಾಣದಲ್ಲಿ ಕಡಿಮೆಯಿದೆ. ಒಟ್ಟು 83 ದ್ವೇಷ ಭಾಷಣ ಮಾಡಲಾಗಿರುವುದನ್ನು ಪಟ್ಟಿ ಮಾಡಿರುವ ಎಪಿಸಿಆರ್ ಇನ್ನೂ ಒಂದು ಆಘಾತಕಾರಿ ಮತ್ತು ಆತಂಕಕಾರಿ ಮಾಹಿತಿಯನ್ನೂ ಹಂಚಿಕೊಂಡಿದೆ. ಹೀಗೆ ದ್ವೇಷ ಭಾಷಣ ಮಾಡಿದವರು ಸಾಮಾನ್ಯರಲ್ಲ, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಾಖಂಡದ ಮುಖ್ಯಮಂತಿ ಪುಷ್ಕರ್ ಧಾಮಿ ಇವರಲ್ಲಿದ್ದಾರೆ. ಈ ನಾಯಕರು ಒಟ್ಟು 33 ದ್ವೇಷ ಭಾಷಣ ಮಾಡಿರುವುದನ್ನು ಎಪಿಸಿಆರ್ ಉಲ್ಲೇಖಿಸಿದೆ. ದುರಂತ ಏನೆಂದರೆ,

ಈ 83 ದ್ವೇಷ ಭಾಷಣಗಳ ಪೈಕಿ ಕೇವಲ 6ರಲ್ಲಿ ಮಾತ್ರ ಎಫ್‌ಐಆರ್ ದಾಖಲಾಗಿವೆ. ಆದರೆ ಬಂಧಿಸಿರುವುದು ಕೇವಲ ಒಂದು ಪ್ರಕರಣದಲ್ಲಿ ಮಾತ್ರ. ಅದು ಕೂಡ ದ್ವೇಷ ಭಾಷಣದ ಆರೋಪದಲ್ಲಿ ಅಲ್ಲ. ಮುಸ್ಲಿಮ್ ದ್ವೇಷದ ಚಿತ್ರ ಬಿಡಿಸಿದ್ದಕ್ಕಾಗಿ ಮೂವರು ಹಿಂದೂ ರಕ್ಷಾ ದಳದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದರ ಜೊತೆಗೇ ದ್ವೇಷ ಅಪರಾಧಗಳ ಪಟ್ಟಿಯನ್ನೂ ಎಪಿಸಿಆರ್ ಬಿಡುಗಡೆಗೊಳಿಸಿದೆ. ಕಳೆದ 9 ತಿಂಗಳಲ್ಲಿ ದೇಶದಲ್ಲಿ ಒಟ್ಟು 322 ದ್ವೇಷ ಅಪರಾಧ ಪ್ರಕರಣಗಳು ನಡೆದಿವೆ ಎಂದು ಬಿಡುಗಡೆಗೊಂಡಿರುವ ವರದಿ ಹೇಳುತ್ತದೆ. ಈ 9 ತಿಂಗಳಲ್ಲಿ 54 ಜನ ಹತ್ಯೆಗೀಡಾಗಿದ್ದಾರೆ. ಇವರಲ್ಲಿ 21 ಮಂದಿ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಕನಿಷ್ಠ 488 ಮುಸ್ಲಿಮರ ಮೇಲೆ ಮತ್ತು 90 ಕ್ರೈಸ್ತರ ಮೇಲೆ ಧರ್ಮದ್ವೇಷದ ದಾಳಿಗಳು ನಡೆದಿವೆ. ಗೋಸಾಗಾಟ ಮತ್ತು ಗೋಮಾಂಸಕ್ಕೆ ಸಂಬಂಧಿಸಿ 79 ಪ್ರಕರಣ ದಾಖಲಾಗಿದೆ ಮತ್ತು 11 ಮಂದಿಯ ಹತ್ಯೆ ನಡೆದಿದೆ. ವಿಶೇಷ ಏನೆಂದರೆ, ಕೆಲವು ಪ್ರಕರಣಗಳಲ್ಲಿ ಬಲಿಪಶುಗಳ ಮೇಲೆಯೇ ಎಫ್‌ಐಆರ್ ದಾಖಲಾಗಿದೆ. ಒಟ್ಟು 83 ದ್ವೇಷ ಭಾಷಣಗಳ ಪೈಕಿ 37ರಲ್ಲಿ ಹಿಂಸೆಗೆ ಕರೆ ಕೊಡಲಾಗಿದೆ ಮತ್ತು ಹಿಂದೂಗಳು ಶಸ್ತçಧಾರಣೆ ಮಾಡಬೇಕೆಂದು ಆಗ್ರಹಿಸಲಾಗಿದೆ. ಅಂದಹಾಗೆ,

ನವೆಂಬರ್ 10ರಂದು ಎಪಿಸಿಆರ್ ಬಿಡುಗಡೆಗೊಳಿಸಿರುವ ಈ ವರದಿಯು ಅಪ್ಪಟ ಸತ್ಯಾಧಾರಿತವಾಗಿದೆ ಮತ್ತು ಇದರ ಮೇಲೆ ಶಂಕೆಗೆ ಯಾವ ಕಾರಣವೂ ಇಲ್ಲ ಅನ್ನುವುದನ್ನು ನವೆಂಬರ್ 8ರಂದು ಹಿಮಂತ್ ಬಿಸ್ವ ಶರ್ಮಾ ಸಾರಿ ಹೇಳಿದ್ದಾರೆ. ತನ್ನದೇ ರಾಜ್ಯದ ನಾಗರಿಕರು ನಿರ್ವಸಿತರಾಗುವುದನ್ನು ಸಂಭ್ರಮಿಸುವ ಮುಖ್ಯಮಂತ್ರಿ ಈ ದೇಶದಲ್ಲಿ ಇರುವಾಗ ಮತ್ತು ಇದನ್ನು ದೀಪಾವಳಿಯ ಕೊಡುಗೆ ಎಂಬಂತೆ ಹೇಳಿಕೊಳ್ಳುವಾಗ ಇದರಾಚೆಗೆ ಪುರಾವೆ ಇನ್ನೇನು ಬೇಕು? ಮನೆ ಅಕ್ರಮವಾಗಿ ಕಟ್ಟಲ್ಪಟ್ಟದ್ದೇ ಆದರೂ ಅದನ್ನು ಉರುಳಿಸುವಾಗ ಮುಖ್ಯಮಂತ್ರಿಯೋರ್ವ ಸಂಭ್ರಮಿಸುವುದೆಂದರೆ ಅದು ಅನಾಗರಿಕ ವರ್ತನೆ. ತನ್ನ ರಾಜ್ಯದ ಪ್ರತಿಯೋರ್ವ ನಾಗರಿಕನಿಗೂ ಸೂರು, ಅನ್ನ, ಭದ್ರತೆಯನ್ನು ಖಾತರಿಪಡಿಸುವ ಹೊಣೆಗಾರಿಕೆ ಮುಖ್ಯಮಂತ್ರಿಯ ಮೇಲಿದೆ. ಮನೆ ಎಂಬುದು ಇವತ್ತಿನಿಂದ ನಾಳೆಗೆ ದಿಢೀರ್ ಆಗಿ ನಿರ್ಮಾಣವಾಗುವ ಮಳೆಹಾತೆಯಲ್ಲ. ಅದರ ನಿರ್ಮಾಣದ ಹಿಂದೆ ಅನೇಕರ ಶ್ರಮ ಇರುತ್ತದೆ. ವರ್ಷಗಳ ಬೆವರು ಇರುತ್ತದೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವೂ ಇರುತ್ತದೆ. ನೆಮ್ಮದಿಯ ಬದುಕಿನ ಕನಸನ್ನೂ ಆ ಮನೆ ಕಟ್ಟಿಕೊಟ್ಟಿರುತ್ತದೆ. ಇಷ್ಟು ವರ್ಷಗಳ ಕಾಲ ನೆಮ್ಮದಿ ಮತ್ತು ಭದ್ರತೆಯನ್ನು ಒದಗಿಸಿದ ಮನೆಯನ್ನು ದಿಢೀರಾಗಿ ಬೀಳಿಸುವಾಗ ಆ ಮನೆಯಲ್ಲಿದ್ದವರ ಮೇಲೆ ಅದು ಬೀರುವ ಪರಿಣಾಮ ಮತ್ತು ನೋವುಗಳನ್ನು ಊಹಿಸಿಯಾದರೂ ಮುಖ್ಯಮಂತ್ರಿ ಸುಮ್ಮನಾಗಬಹುದಿತ್ತು. ಅಥವಾ ಬೇರೆಡೆ ವಸತಿ ಸೌಲಭ್ಯ ಒದಗಿಸುವ ಭರವಸೆ ತುಂಬಿ ಸಾಂತ್ವನ ವ್ಯಕ್ತಪಡಿಸಬಹುದಿತ್ತು. ಆದರೆ, ಇವೆರಡನ್ನೂ ಮಾಡದ ಹಿಮಂತ್ ಬಿಸ್ವ ಶರ್ಮಾ ಅವರು ಅದರ ಬದಲು ಸಂಭ್ರಮಿಸಿದ್ದಾರೆ ಎಂದರೆ, ಅದರ ಹಿಂದೆ ಧರ್ಮದ್ವೇಷದ ಹೊರತು ಇನ್ನಾವ ಕಾರಣ ಇರಲು ಸಾಧ್ಯ?

ಮುಸ್ಲಿಮ್ ದ್ವೇಷ ಎಂಬುದು ರಾಜಕೀಯ ಅಧಿಕಾರವನ್ನು ದಕ್ಕಿಸಿಕೊಡುವ ಅತೀ ಸುಲಭವಾದ ಮತ್ತು ಅತೀ ಜನಪ್ರಿಯ ಆಯುಧವಾಗಿರುವ ಕಾರಣಕ್ಕಾಗಿಯೇ ಇವರೆಲ್ಲ ಈ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಧರ್ಮದ್ವೇಷದ ನಡೆ ನುಡಿಯು ಭ್ರಷ್ಟಾಚಾರವನ್ನು ನಗಣ್ಯಗೊಳಿಸುತ್ತದೆ. ಅನಾಚಾರವನ್ನು ನಗಣ್ಯಗೊಳಿಸುತ್ತದೆ. ಅನೈತಿಕತೆಯನ್ನು ತೃಣ ಸಮಾನಗೊಳಿಸುತ್ತದೆ. ಮಾಡಬಾರದ ಎಲ್ಲವನ್ನೂ ಮಾಡಿದರೂ ಒಂದು ಧರ್ಮ ದ್ವೇಷದ ಭಾಷಣವು ಆ ಎಲ್ಲ ಕೊಳೆಯನ್ನು ತೊಳೆದು ಬಿಡುವಷ್ಟು ಪರಿಣಾಮಕಾರಿ ಸಾಬೂನು ಆಗುತ್ತಿದೆ. ಆದ್ದರಿಂದಲೇ, ಹಿಮಂತ್ ಬಿಸ್ವ ಶರ್ಮಾ ರಿಂದ ಹಿಡಿದು ಲಲಿತ್ ಶರ್ಮಾ ವರೆಗೆ ಮತ್ತು ಸೋಷಿಯಲ್ ಮೀಡಿಯಾದ ಕಾಲಾಳುಗಳ ವರೆಗೆ ಎಲ್ಲರೂ ಮುಸ್ಲಿಮ್ ದ್ವೇಷದ ಭಾಷಣ ಮಾಡುತ್ತಿದ್ದಾರೆ. ಬರಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿಜವಾಗಿ,

ಈ ಮುಸ್ಲಿಮ್ ದ್ವೇಷ ಕೊನೆಗೊಳ್ಳಬೇಕಾದರೆ, ಜನಸಾಮಾನ್ಯರು ವಿವೇಕಿಗಳಾಗಬೇಕು. ದ್ವೇಷ ಭಾಷಣಕೋರರನ್ನು ತಿರಸ್ಕರಿಸುವ ಮತ್ತು ದೇಶದ ಅಭಿವೃದ್ಧಿಯ ಬಗ್ಗೆ ಮಾತಾಡುವಂತೆ ನಿರ್ಬಂಧಿಸುವ ಧೈರ್ಯ ತೋರಬೇಕು. ಸಮಾಜ ದ್ವೇಷವನ್ನು ತಿರಸ್ಕರಿಸಲು ಪ್ರಾರಂಭಿಸಿದರೆ ಇಂಥವರು ಸರಿದಾರಿಗೆ ಬರುತ್ತಾರೆ. ಅಭಿವೃದ್ಧಿ ಆಧಾರಿತ ರಾಜಕೀಯ ಮಾಡಲು ನಿರ್ಬಂಧಿತರಾಗುತ್ತಾರೆ. ದೇಶ ಬಲಿಷ್ಠವಾಗುವುದು ದ್ವೇಷದಿಂದಲ್ಲ, ಪ್ರೀತಿಯಿಂದ ಮತ್ತು ವಿವೇಕದಿಂದ.