ಸನ್ಮಾರ್ಗ ವಾರ್ತೆ
ನವದೆಹಲಿ,ಸೆ.17: ದೇಶದಲ್ಲಿ ಹಿಂದಿ ಬಳಕೆಯನ್ನು ವ್ಯಾಪಕಗೊಳಿಸಬೇಕೆಂದು ಕೇಂದ್ರ ಸಚಿವ ಅಮಿತ್ ಶಾರ ಕರೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದಲ್ಲಿರುವ ಭಾಷಾ ವೈವಿಧ್ಯತೆ ದೌರ್ಬಲ್ಯವಲ್ಲ ಎಂದು ಹೇಳಿದ್ದಾರೆ.
ಒರಿಯಾ, ಮರಾಠಿ, ಕನ್ನಡ, ಹಿಂದಿ, ತಮಿಳು, ಇಂಗ್ಲಿಷ್, ಗುಜರಾತಿ, ಬಂಗಾಳಿ, ಉರ್ದು, ಪಂಜಾಬಿ ಹೀಗೆ ಭಾರತದಲ್ಲಿರುವ 23 ಭಾಷೆಗಳನ್ನು ಉದ್ದೇಶಿಸಿ ಅವರು ಟ್ವೀಟ್ ಮಾಡಿದ್ದಾರೆ. ಭಾಷೆಗಳು ಭಾರತದ ದೌರ್ಬಲ್ಯವಲ್ಲ. ಹಾಗೆಂದು ನೋಡಬೇಡಿರಿ ಎಂದು ಅವರು ಹೇಳಿದರು.
ಹಿಂದಿಯನ್ನು ದೇಶದ ಸಾರ್ವತ್ರಿಕ ಭಾಷೆಯನ್ನಾಗಿ ಮಾಡಬೇಕೆಂದು ಅಮಿತ್ ಶಾ ಹೇಳಿದ್ದು ವಿವಾದಕ್ಕೆ ಕಾರಣವಾಗಿದ್ದು ಕರ್ನಾಟಕ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅಮಿತ್ ಶಾರ ಹಿಂದಿ ಭಾಷೆ ಕರೆಯನ್ನು ತಿರಸ್ಕರಿಸಿದ್ದಾರೆ. ದೇಶದ ಎಲ್ಲ ಅಧಿಕೃತ ಭಾಷೆಗಳು ಸಮಾನವಾಗಿವೆ ಮತ್ತು ಕರ್ನಾಟಕದಲ್ಲಿ ಕನ್ನಡ ಮುಖ್ಯ ಭಾಷೆಯಾಗಿದೆ ಎಂದು ಯಡಿಯೂರಪ್ಪ ಹೇಳಿದರು.












