ಸನ್ಮಾರ್ಗ ವಾರ್ತೆ-
ಶ್ರೀನಗರ, ಸೆ. 23: ಸೇನೆಯು ತಡೆದು ನಿಲ್ಲಿಸಿ ಥಳಿಸಿದ್ದನ್ನು ಅವಮಾನವೆಂದು ಬಗೆದ ಹದಿನೈದು ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವನೆಂದು ವರದಿಯಾಗಿದೆ. ಪುಲ್ವಾಮದ ಚಾಂದ್ಗಾಮ್ನಲ್ಲಿ ಘಟನೆ ನಡೆದಿದ್ದು ಹತ್ತನೆ ತರಗತಿ ವಿದ್ಯಾರ್ಥಿ ಅಹ್ಮದ್ ಭಟ್ ಮಂಗಳವಾರ ರಾತ್ರೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಗುರುವಾರ ಸಂಜೆ ಶ್ರೀನಗರದ ರಾಜಾ ಹರಿಸಿಂಗ್ ಆಸ್ಪತ್ರೆಯಲ್ಲಿ ಬಾಲಕ ಕೊನೆಯುಸಿರೆಳೆದನು. ಗ್ರೆನೆಡ್ ಎಸೆದದ್ದು ಯಾರೆಂದು ಪತ್ತೆಹಚ್ಚಲು ಹಲವು ಯುವಕರ ಗುರುತು ಚೀಟಿಯನ್ನು ಸೇನೆ ವಶಪಡಿಸಿಕೊಂಡಿತ್ತು. ತನ್ನ ಗುರುತು ಚೀಟಿಯನ್ನು ಕಿತ್ತು ಕೊಂಡು ಸೈನಿಕರು ಹೊಡೆದಿದ್ದಾರೆ. ನಂತರ ಸೇನೆಯ ಕ್ಯಾಂಪಿಗೆ ಹೋಗಿ ರಿಪೋರ್ಟ್ ನೀಡುವಂತೆ ಹೇಳಿದ್ದಾರೆಂದು ಬಾಲಕ ತನ್ನ ಸಹೋದರಿಯಲ್ಲಿ ಹೇಳಿದ್ದನೆಂದು ಬಾಲಕನ ತಂದೆ ಹಮೀದ್ ಭಟ್ ಹೇಳಿದರು. ಸೇನೆಯ ವರ್ತನೆಯಿಂದ ಆತ ದಿನವಿಡೀ ಕಳೆಗುಂದಿದ್ದನು. ಆತ್ಮಹತ್ಯೆಗೆ ಶರಣಾದ ಬಾಲಕ ಹಮೀದ್ ಭಟ್ ರ ಕೊನೆಯ ಮಗನಾಗಿದ್ದಾನೆ. ಸೇನೆಯ ತಪಾಸಣೆಯ ನಂತರ ದಿನವಿಡಿ ಬಾಲಕ ಕೋಣೆಯಲ್ಲಿ ಒಬ್ಬನೇ ಇದ್ದ. ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಆತನನ್ನು ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು.
ಅದರೆ ಘಟನೆಯನ್ನು ಸೈನ್ಯ ನಿರಾಕರಿಸಿದೆ ಎಂದು ಪುಲ್ವಾಮ ಪೊಲೀಸ್ ಮುಖ್ಯಸ್ಥ ಚಂದನ್ ಕೊಹ್ಲಿ ತಿಳಿಸಿದರು. ತಲೆಬುಡವಿಲ್ಲದ ಆರೋಪ ಇದು ಎಂದು ಸೈನ್ಯ ಪ್ರತಿಕ್ರಿಯಿಸಿದೆ. ಶಂಕಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












