ಬಾಲಕೋಟ್‌ನಲ್ಲಿ ಪಾಕ್‌ನಿಂದ ಮತ್ತೆ ಭಯೋತ್ಪಾದನಾ ಶಿಬಿರಗಳ ಸ್ಥಾಪನೆ- ಭೂ ಸೇನಾ ವರದಿ

0
344

ಸನ್ಮಾರ್ಗ ವಾರ್ತೆ

ಚೆನ್ನೈ,ಸೆ.23: ಪಾಕಿಸ್ತಾನದ ಬಾಲಕೋಟ್‍ನಲ್ಲಿ ಜೈಷ್ ಭಯೋತ್ಪಾದಕ ಶಿಬಿರ ಪುನರಾರಂಭಿಸಿದೆ ಎಂದು ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಭಾರತ ದಾಳಿಯಲ್ಲಿ ಬಾಲಕೋಟ್ ಭಯೋತ್ಪಾದಕರ ಶಿಬಿರ ನಾಶವಾಗಿತ್ತು ಎನ್ನುವುದಕ್ಕೆ ಇದು ಸಾಕ್ಷ್ಯವಾಗಿದೆ ಎಂದು ಅವರು ಹೇಳಿದರು.ವಾಯುದಾಳಿಯ ನಂತರ ಸ್ಥಳವನ್ನು ಖಾಲಿ ಮಾಡಿದ್ದ ಭಯೋತ್ಪಾದಕರನ್ನು ಪಾಕಿಸ್ಥಾನ ಪುನಃ ಅಲ್ಲಿಗೆ ತಲುಪಿಸಿತು ಎಂದು ಭೂಸೇನಾ ಮುಖ್ಯಸ್ಥರು ತಿಳಿಸಿದರು.

ಬಾಲಕೋಟ್‍ನಲ್ಲಿ ಭಯೋತ್ಪಾದಕ ಶಿಬಿರ ಪುನಃ ಕಾರ್ಯಾರಂಭಿಸಿದ್ದು ಕಳೆದ ದಿವಸ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದರ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು. ಬಾಲಕೋಟ್‍ನ ಶಿಬಿರದಲ್ಲಿ 129 ಭಯೋತ್ಪಾದಕರು ಭಾರತಕ್ಕೆ ನುಸುಳಲು ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ಸೂಚಿಸಿವೆ ಎಂದು ಎನ್‍ಡಿಟಿ ವರದಿ ಮಾಡಿತ್ತು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮಾತಾಡಲಿರುವ ವೇಳೆ ಪುನಃ ಬಾಲಕೋಟ್ ಭಯೋತ್ಪಾದನಾ ಕೇಂದ್ರದ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಪಾಕಿಸ್ತಾನ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದರು. ಕಳೆದ ಫೆಬ್ರುವರಿಯಲ್ಲಿ ಭಾರತದ ವಾಯು ಸೇನೆ ಪಾಕಿಸ್ತಾನದ ಬಾಲಕೋಟ್‍ಗೆ ಮಿಂಚಿನ ದಾಳಿ ನಡೆಸಿತ್ತು. ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ 40 ಸೈನಿಕರ ಹತ್ಯೆಯಾಗಿದ್ದಕ್ಕೆ ಪ್ರತ್ಯುತ್ತರವಾಗಿ ವಾಯುಸೇನೆ ಬಾಲಕೋಟ್‍ಗೆ ದಾಳಿ ಮಾಡಿತ್ತು.