ಅತ್ಯಾಚಾರ ಸಂತ್ರಸ್ತೆಯ ಬಂಧನ: ಇದು ಬಿಜೆಪಿ ನೀತಿಯೇ- ಪ್ರಿಯಾಂಕಾ ಗಾಂಧಿ

0
1172

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.27: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ದೂರು ನೀಡಿದ ಕಾನೂನು ವಿದ್ಯಾರ್ಥಿನಿಯನ್ನು ಬಂಧಿಸಿ ಜೈಲಿಗಟ್ಟಿರುವುದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಚಿನ್ಮಯಾನಂದ ಬಂಧನಕ್ಕೆ ಪೊಲೀಸರು ನಿಧಾನ ಗತಿಯ ನೀತಿಯನ್ನು ಅನುಸರಿಸಿದ್ದರು. ಬಲವಾದ ಪ್ರತಿಭಟನೆಯ ನಂತರ ಕ್ರಮಕ್ಕೆ ಅವರು ಮುಂದಾಗಿದ್ದರು ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿಲ್ಲ.ಇದು ಬಿಜೆಪಿಯ ನೀತಿಯಾಗಿದೆಯೇ ಎಂದು ಪ್ರಿಯಾಂಕಾ ಪ್ರಶ್ನಿಸಿದರು.

ಶಾಜಹಾನ್‍ಪುರದ ವಿದ್ಯಾರ್ಥಿನಿಯ ಪ್ರಕರಣ ಉನ್ನಾವ ಪ್ರಕರಣಕ್ಕೆ ಸಮಾನವಾದುದು ಆಗಿದೆ. ಉನ್ನಾವೊ ಬಲಿಪಶು ಬಾಲಕಿಯ ತಂದೆ ಕೊಲೆಯಾದರು. ಮಾವನನ್ನು ಬಂಧಿಸಲಾಯಿತು. ದೊಡ್ಡ ಪ್ರತಿಭಟನೆಯ ನಂತರ ಬಿಜೆಪಿ ಶಾಸಕ ಆರೋಪಿ ಕುಲ್ದೀಪ್ ಸಿಂಗ್ ಸೇಂಗ್‌ನನ್ನು ಹದಿಮೂರು ತಿಂಗಳ ಬಳಿಕ ಬಂಧಿಸಲಾಗಿದೆ. ಬಾಲಕಿ ಮತ್ತು ಕುಟುಂಬವನ್ನೇ ನಿರ್ಮೂಲಿಸುವ ಪ್ರಯತ್ನವೂ ನಡೆಯುತ್ತಿದೆ.

ಶಾಜಹಾನ್‍ಪುರ ಪ್ರಕರಣದಲ್ಲಿ ಇದುವೇ ಸಂಭವಿಸುತ್ತಿದೆ. ಅತ್ಯಾಚಾರ ಸಂತ್ರಸ್ತೆಯನ್ನು ಬಂಧಿಸಲಾಗಿದೆ. ಕುಟುಂಬಕ್ಕೆ ಬೆದರಿಕೆ ಹಾಕಲಾಗುತ್ತಿದೆ ಎಂದು ಪ್ರಿಯಾಂಕಾ ಹೇಳಿದರು. ಬೆದರಿಸಿ ಹಣದ ಕೀಳಲು ಯತ್ನಿಸಿದ ಪ್ರಕರಣವನ್ನು ಅತ್ಯಾಚಾರ ಸಂತ್ರಸ್ತೆಯ ವಿರುದ್ಧ ದಾಖಲಿಸಲಾಗಿದೆ. ಆಕೆಯನ್ನು ಉತ್ತರಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ ಬಂಧಿಸಿದೆ. ವಿದ್ಯಾರ್ಥಿನಿಯನ್ನು ಆಕೆಯ ಮನೆಯಿಂದಲೇ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಚಿನ್ಮಯಾನಂದರಿಂದ ಬಾಲಕಿ ಐದು ಕೋಟಿ ರೂಪಾಯಿ ಕೇಳಿದ್ದಳೆಂದು ಪೊಲೀಸರು ವಾದಿಸುತ್ತಿದ್ದಾರೆ.