ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳ ಸಹಿತ ರಾಜಕೀಯ ನಾಯಕರ ಶೀಘ್ರ ಬಿಡುಗಡೆ

0
472

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.11: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆರವುಗೊಳಿಸಿದ ಬೆನ್ನಿಗೆ ಗೃಹ ಬಂಧನದಲ್ಲಿರಿಸಲಾದ ಮಾಜಿ ಮುಖ್ಯಮಂತ್ರಿಗಳನ್ನು ಕೆಲವೇ ದಿವಸಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ವರದಿಯಾಗಿದೆ.

ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ, ಉಮರ್ ಅಬ್ದುಲ್ಲ, ಮೆಹಬೂಬ ಮುಫ್ತಿ ಸಹಿತ ರಾಜಕೀಯ ನಾಯಕರನ್ನು ಬಿಡುಗಡೆಗೊಳಿಸಲಾಗುವುದು ಎಂದು ಸುರಕ್ಷಾ ಹೊಣೆಯಿರುವ ಅಧಿಕಾರಿ ತಿಳಿಸಿದ್ದಾರೆ.

ಕಾಶ್ಮೀರದ ವಿಶೇಷ ಸ್ಥಾನಮಾನ ತೆರವಿನ ಬೆನ್ನಲ್ಲೇ 800ಕ್ಕೂ ಹೆಚ್ಚು ಮಂದಿಯನ್ನು ಸರಕಾರ ಗೃಹ ಬಂಧನದಲ್ಲಿಟ್ಟಿದ್ದು 250 ಮಂದಿಯನ್ನು ಕಾಶ್ಮೀರದಿಂದ ಹೊರಗೆ ಜೈಲಿಗೆ ಹಾಕಿದೆ. ಪೀಪಲ್ಸ್ ಡೆಮಕ್ರಾಟಿಕ್ ಪಾಟಿ ಮಾಜಿ ಶಾಸಕ ಯಾಸಿರ್ ಮಿತ್, ನ್ಯಾಶನಲ್ ಕಾನ್ಫರೆನ್ಸ್ ನಾಯಕ ನೂರ್ ಮುಹಮ್ಮದ್, ಕಾಂಗ್ರೆಸ್ ನಾಯಕ ಶುಹೈಬ್ ಲೋನ್‍ರನ್ನು ಕಳೆದ ದಿವಸ ಬಿಡುಗಡೆಗೊಳಿಸಲಾಗಿತ್ತು. ರಾಜ್ಯದಲ್ಲಿ ಶಾಂತ ವಾತಾವರಣಕ್ಕೆ ಹಾನಿ ಮಾಡುವುದಿಲ್ಲ ಎಂಬ ಖಚಿತತೆ ಪಡೆದುಕೊಂಡು ಇವರನ್ನು ಬಿಡುಗಡೆಗೊಳಿಸಲಾಗಿದೆ.

ಸೆಪ್ಟಂಬರ್ 21ಕ್ಕೆ ಆರೋಗ್ಯ ಕೆಟ್ಟದ್ದರಿಂದ ಮಾಜಿ ಸಚಿವ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಇಮ್ರಾನ್ ರಝಾ ಅನ್ಸಾರಿ ಬಿಡುಗಡೆಯಾಗಿದ್ದರು. ಗೃಹ ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಜಮ್ಮು ಕಾಶ್ಮೀರ ಸರಕಾರ ಸಲಹೆಗಾರ ಫಾರೂಕ್ ಖಾನ್ ಕಳೆದ ವಾರ ತಿಳಿಸಿದ್ದಾರೆ.