ಶರದ್ ಪವಾರ್‌ರನ್ನು ಭೇಟಿಯಾದ ಸಂಜಯ್ ರಾವುತ್: ಎನ್‍ಸಿಪಿ ನಾಯಕರ ಸಭೆ ಆರಂಭ

0
481

ಸನ್ಮಾರ್ಗ ವಾರ್ತೆ

ಮುಂಬೈ,ನ,1: ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಲ್ಲಿ ಇನ್ನೂ ಗೊಂದಲ ನಿವಾರಣೆಯಾಗಿಲ್ಲ. ಈ ನಡುವೆ ಶಿವಸೇನೆ ನಾಯಕ ಸಂಜಯ್ ರಾವುತ್ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್‍‌ರನ್ನು ಭೇಟಿಯಾಗಿದ್ದಾರೆ. ಆದರೆ ಶಿವಸೇನೆ ಇದನ್ನು ರಾಜಕೀಯ ಶಿಷ್ಟಾಚಾರ ಎಂದು ಹೇಳುತ್ತಿದೆ.

ಸಂಜಯ್ ರಾವುತ್‍ರಲ್ಲಿ ಭೇಟಿಯ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಪವಾರ್‌ರನ್ನು ದೀಪಾವಳಿ ಶುಭಾಶಯ ಸಲ್ಲಿಸಲು ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ. ಜೊತೆಗೆ ಮಹಾರಾಷ್ಟ್ರದ ರಾಜಕೀಯವೂ ಚರ್ಚೆಗೆ ಬಂತು ಎಂದು ತಿಳಿಸಿದರು.

ಸಂಜಯ್ ರಾವುತ್‍ರ ಭೇಟಿಯ ನಂತರ ಎನ್‍ಸಿಪಿ ನಾಯಕರ ಸಭೆ ಶರದ್ ಪವಾರ್ ನಿವಾಸದಲ್ಲಿ ಆರಂಭವಾಗಿದೆ. ಇನ್ನೊಂದೆಡೆ ಕಾಂಗ್ರೆಸ್, ಬಿಜೆಪಿ, ಶಿವಸೇನೆಯ ನಡುವಿನ ರಾಜಕೀಯ ಜಿದ್ದಾಜಿದ್ದಿನ ನಡುವೆ ತನ್ನ ಅವಕಾಶವನ್ನು ಎನ್‍ಸಿಪಿ ಹುಡುಕುತ್ತಿದೆ. ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಮತ್ತು ಪ್ರಥ್ವಿರಾಜ್ ಚವ್ಹಾಣ್ ಗುರುವಾರ ಶರದ್‍ಪವಾರ್‌ರನ್ನು ಭೇಟಿಯಾಗಿದ್ದರು.

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಸಾಹೇಬ್ ಥೆರೊಟ್ ಕೂಡ ಪವಾರ್‍ರನ್ನು ಭೇಟಿಯಾಗಿದ್ದರು. ಶಿವಸೇನೆಯ ಆದಿತ್ಯ ಠಾಕ್ರೆ ಸರಕಾರ ರಚನೆಗೆ ತಡವಾಗುವುದು ಉತ್ತಮ ಅಲ್ಲ ಎಂದು ಗುರುವಾರ ಹೇಳಿಕೆ ನೀಡಿದ್ದರು. ಬಿಜೆಪಿಯ ಸಖ್ಯದ ಕುರಿತು ಪ್ರಶ್ನಿಸಿದಾಗ ಶಿವಸೇನೆ ಮತ್ತು ಬಿಜೆಪಿಯ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು. ಸರಕಾರದ ವಿಚಾರದಲ್ಲಿ ಶಿವಸೇನೆ ತನ್ನ ತಂದೆ ಉದ್ಧವ್ ಠಾಕ್ರೆಯವರು ಅಂತಿಮ ನಿರ್ಧಾರ ಮಾಡಲಿದ್ದಾರೆ ಎಂದು ತಿಳಿಸಿದರು.