ಸನ್ಮಾರ್ಗ ವಾರ್ತೆ-
ನವದೆಹಲಿ: ನ. 5- ಅಯೋಧ್ಯೆಯ ತೀರ್ಪಿನ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿಯು ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಮತ್ತು ಜಮಿಯತ್ ಉಲೇಮಾ-ಹಿಂದ್ ಮುಖ್ಯಸ್ಥ ಮೌಲಾನಾ ಸೈಯದ್ ಅರ್ಷದ್ ಮದನಿ ಮತ್ತು ಶಿಯಾ ಮುಖಂಡ ಮೌಲಾನಾ ಸೈಯದ್ ಕಲ್ಬೆ ಜವಾದ್ ಸೇರಿದಂತೆ ಪ್ರಮುಖರನ್ನು ಭೇಟಿ ಮಾಡುವ ಯೋಜನೆಯನ್ನು ರೂಪಿಸಿದ್ದಾರೆ ಎಂದು ದ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಅಧ್ಯಕ್ಷತೆಯಲ್ಲಿ ಸಂಘ ಪರಿವಾರದ ಪ್ರತಿನಿಧಿಗಳೊಂದಿಗೆ ಮುಸ್ಲಿಂ ಸಮುದಾಯದ ಮುಖಂಡರ ನಡುವೆ ಇಂತಹ ಒಂದು ಸಭೆ ಮಂಗಳವಾರ ನಡೆಯಲಿದೆ ಎಂದು ತಿಳಿದು ಬಂದಿದೆ. ಆರ್ಎಸ್ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್, ಬಿಜೆಪಿಯ ಮಾಜಿ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್ ಮಾರ್ಗದರ್ಶಕ ಇಂದ್ರೇಶ್ ಕುಮಾರ್ ಅವರಿದ್ದ ಸಭೆಯಲ್ಲಿ ಮುಸ್ಲಿಮರನ್ನು ಭೇಟಿಯಾಗುವ ಈ ಯೋಜನೆಯನ್ನು ರೂಪಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಮುಸ್ಲಿಂ ವಿದ್ವಾಂಸರು ಮತ್ತು ಸಂಸ್ಥೆಗಳೊಂದಿಗೆ ಸಂಘ ಪರಿವಾರ್ ನಾಯಕರು 20 ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರನ್ನು ಸಹ ಸಂಪರ್ಕಿಸಲಾಗಿದೆ ಎಂದೂ ವರದಿಗಳು ತಿಳಿಸಿವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸುವಂತೆ ಪ್ರಭಾವಿ ಮುಸ್ಲಿಂ ನಾಯಕರಲ್ಲಿ ವಿನಂತಿಸುವುದು ಮತ್ತು ಸಮುದಾಯವು ಅದನ್ನು “ಹಿಂದೂ-ಮುಸ್ಲಿಂ ಸಮಸ್ಯೆಯಾಗಿ ನೋಡದಂತೆ ಮತ್ತು ಬಾಬರ್ ಮಾಡಿದ ತಪ್ಪನ್ನು ಸರಿಪಡಿಸುವ ಕೆಲಸವಾಗಿ ನೋಡುವಂತೆ ಕೋರಿಕೊಳ್ಳುವುದು ಸಭೆಯ ಉದ್ದೇಶವಾಗಿದೆ.
ಈ ನಡುವೆ, ಮುಸ್ಲಿಮರು ಈ ಸಮಸ್ಯೆಯನ್ನು ಬಗೆಹರಿಸಬಹುದಾದ ಹಲವಾರು ಅವಕಾಶಗಳನ್ನು ಕಳೆದುಕೊಂಡರು. ಇದು ಹಿಂದೂ ಬಹುಸಂಖ್ಯಾತ ದೇಶ ಮತ್ತು ರಾಮ ದೇವಾಲಯವು ನಂಬಿಕೆಯ ವಿಷಯವಾಗಿದೆ. ಮಸೀದಿ ಮತ್ತು ದೇವಾಲಯದ ಚೌಕಟ್ಟನ್ನು ಮೀರಿ ಮುಸ್ಲಿಮರು ಈ ವಿಷಯವನ್ನು ನೋಡಬೇಕಾಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಘಯೋರುಲ್ ಹಸನ್ ರಿಜ್ವಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಯಾರನ್ನೂ ಕೆರಳಿಸದಂತೆ ಮುಸ್ಲಿಂ ಸಮುದಾಯಕ್ಕೆ ತಿಳಿಸುವುದು ಸಭೆಗಳ ಮುಖ್ಯ ಉದ್ದೇಶವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಅಬ್ದುಲ್ ರಶೀದ್ ಅನ್ಸಾರಿ ಹೇಳಿದರು.












